ಮೈಸೂರಿನ ವಿಶ್ವವಿಖ್ಯಾತ ಸಂತ ಫಿಲೋಮಿನಾ ಚರ್ಚ್‌ನಲ್ಲಿ ಕ್ರಿಸ್‌ಮಸ್ ಸಂಭ್ರಮ

ಗಮನ ಸೆಳೆಯುತ್ತಿರುವÀ 4200 ಚದರಡಿಯ ಏಸುಕ್ರಿಸ್ತರ ಚಿತ್ರ


 ವರದಿ : ನಜೀರ್ ಅಹಮದ್

ಮೈಸೂರು: ನಗರದ ಸಂತ ಫಿಲೋಮಿನಾ ಚರ್ಚ್‍ನಲ್ಲಿ ಕ್ರಿಸ್‍ಮಸ್ ಹಬ್ಬದ ಸಂಭ್ರಮ ಮನೆಮಾಡಿದ್ದು, ಏಸುಕ್ರಿಸ್ತರ ಬೃಹತ್ ರಂಗೋಲಿ ಚಿತ್ರದಿಂದ ಚರ್ಚ್‍ನ ಆವರಣ ಕಂಗೋಳಿಸುತ್ತಿದೆ.

ಅಲ್ಲದೇ ಚರ್ಚ್ ದೀಪಾಲಂಕಾರದಲ್ಲಿ ಮಿನುಗುತ್ತಿವೆ. ಮಕ್ಕಳಿಗೆ ಆಟವಾಡಲು ವಿವಿಧ ಆಟೋಟಗಳನ್ನು ಸಿದ್ದಪಡಿಸಲಾಗಿದೆ. 

ಬುಧವಾರ ಹಬ್ಬದ ಆಚರಣೆ ನಡೆಯಲಿದ್ದು, ಮಂಗಳವಾರ (ಡಿ.24) ರಾತ್ರಿಯಿಂದಲೇ ಚರ್ಚ್‍ಗಳಲ್ಲಿ ವಿಶೇಷ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಮಧ್ಯರಾತ್ರಿಯೇ ವಿಶೇಷ ಸಾಮೂಹಿಕ ಪ್ರಾರ್ಥನೆ ನೆರವೇರಲಿದ್ದು, ಬಿಷಪ್ ಅವರಿಂದ ಸಂದೇಶವಿರುತ್ತದೆ. ಹಬ್ಬದ ಕಾರಣ ಚರ್ಚ್‍ಗಳ ಆವರಣದಲ್ಲಿ `ಗೋದಲಿ' (ಕ್ರಿಬ್) ಮಾದರಿಗಳು ಗಮನಸೆಳೆಯುತ್ತಿವೆ.

ಈ ಕುರಿತು ಸಂತ ಫಿಲೋಮಿನಾ ಚರ್ಚ್‍ನ ಫಾದರ್ ಪೀಟರ್ ಅವರು ಮಾತನಾಡಿ, ಸಹೋದರತ್ವ, ಪರೋಪಕಾರದ ಮಹತ್ವ ಸಾರುವ ಮತ್ತು ಶಾಂತಿಯ ಸಂದೇಶದ ನಕ್ಷತ್ರವು ಪ್ರತಿಯೊಬ್ಬರ ಮನದಲ್ಲೂ ಮಿನುಗಲಿ' ಎಂಬ ಆಶಯದ ಈ ಹಬ್ಬದ ಆಚರಣೆಗೆ ವಿಶೇಷ ಮಹತ್ವವಿದೆ. 

ಈ ವರ್ಷ ಕ್ರಿಸ್‍ಮಸ್ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ದೇವರ ಸೃಷ್ಟಿಯ ಕಳಂಕವನ್ನು ಸರಿಮಾಡಲು ಮರುಸೃಷ್ಟಿ ಈ ವರ್ಷದ ಕ್ರಿಸ್‍ಮಸ್ ಕಾನ್ಸೆಪ್ಟ್ ಆಗಿದೆ. ಜತೆಗೆ  ಎಲ್ಲರನ್ನೂ ರಕ್ಷಿಸಲು ದೇವರನ್ನು ಇಟ್ಟು ಗೋದಲಿ ತಯಾರು ಮಾಡಲಾಗುತ್ತಿದೆ ಎಂದರು.

ರಂಗೋಲಿಯಲ್ಲಿ ಯೇಸು ಕ್ರಿಸ್ತ: 

`ಕಲಾವಿದ ಪುನೀತ್ ಅವರಿಂದ ಸೇಂಟ್ ಫಿಲೋಮಿನಾ ಚರ್ಚ್ ಆವರಣದಲ್ಲಿ 4200 ಚದರ ಅಡಿ ವಿಸ್ತೀರ್ಣದಲ್ಲಿ ಯೇಸು ಕ್ರಿಸ್ತನ ಚಿತ್ರವನ್ನು ರಂಗೋಲಿಯಲ್ಲಿ ರಚಿಸುತ್ತಿರುವುದು ಈ ಬಾರಿಯ ವಿಶೇಷ. ಅಲ್ಲದೇ, ಕ್ರಿಸ್ತ ಜನಿಸಿ ಇಂದಿಗೆ 2025 ವರ್ಷಗಳಾಗಿದ್ದು, ಚರ್ಚ್‍ನಲ್ಲಿ ಡಿ.29ರಂದು ಜ್ಯೂಬಿಲಿ 2025' ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ' ಎಂದು ಚರ್ಚ್‍ನ ಫಾದರ್ ಪೀಟರ್ ತಿಳಿಸಿದರು.

ರಾತ್ರಿಯಿಂದ ಪೂಜೆ ಆರಂಭ

ಕ್ಯಾಥೋಲಿಕ್ ಪ್ರಧಾನ ಚರ್ಚ್ ಸೇಂಟ್ ಫಿಲೋಮಿನಾದಲ್ಲಿ ಡಿ.24ರಂದು ರಾತ್ರಿ 11.30ಕ್ಕೆ ಕ್ರಿಸ್‍ಮಸ್ ಹಾಡುಗಳೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು ಜಾಗರಣೆ ಕ್ರಿಸ್‍ಮಸ್ ಬಲಿಪೂಜೆ ನೆರವೇರಲಿದೆ. ಸರಿಯಾಗಿ 12 ಗಂಟೆಗೆ ಬಾಲ ಯೇಸುವನ್ನು ಮೆರವಣಿಗೆ ಮೂಲಕ ಗೋದಲಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. `ಮೈಸೂರು ಧರ್ಮಕ್ಷೇತ್ರದ ಆಡಳಿತಾಧಿಕಾರಿ ಬರ್ನಾರ್ಡ್ ಮೋರಸ್ ನೇತೃತ್ವದಲ್ಲಿ ಪೂಜೆ ನಡೆಯಲಿದೆ. ಡಿ.25ರಂದು ಬೆಳಿಗ್ಗೆ 5ರಿಂದ 9ರವರೆಗೆ ಪ್ರಮುಖ ಪ್ರಾರ್ಥನೆಯು ತಮಿಳು ಕನ್ನಡ ಇಂಗ್ಲಿಷ್ ಭಾಷೆಯಲ್ಲಿ ನಡೆಯಲಿದೆ. 4 ದಿವ್ಯ ಬಲಿಪೂಜೆಗಳು ನೆರವೇರಲಿದ್ದು ಸಂಜೆ 6ಕ್ಕೂ ಪೂಜೆ ನಡೆಯಲಿದೆ. ಬಳಿಕ ಸಾರ್ವಜನಿಕರಿಗೆ ಚರ್ಚ್ ಪ್ರವೇಶ ನೀಡಲಾಗುತ್ತದೆ' ಎಂದು ಚರ್ಚ್‍ನ ಫಾದರ್ ಪೀಟರ್ ತಿಳಿಸಿದರು.

ಈ ಸಂದರ್ಭದಲ್ಲಿ ಫಾದರ್ ನವೀನ್ ಕುಮಾರ್, ಕಲಾವಿದ ಪುನೀತ್, ಪುನೀತ್ ರಾಯಣ್ಣ,  ಸಿ.ಲಕ್ಷ್ಮೀ, ರಾಘವೇಂದ್ರ ಅರಳಿಕಟ್ಟೆ, ಸಂಪ್ರೀತ್, ಆದಿತ್ಯ, ಮಂಜುನಾಥ್, ರಮೇಶ್ ಮುಂತಾದವರು ಇದ್ದರು.

ನಗರದಲ್ಲಿ ಕ್ರಿಸ್‍ಮಸ್ ಸಂಭ್ರಮ  

ಹಬ್ಬದ ಅಂಗವಾಗಿ ಶಿವರಾಂ ಪೇಟೆಯ ಮನ್ನಾರ್ಸ್, ದೇವರಾಜ ಮಾರುಕಟ್ಟೆ, ದೇವರಾಜ ಅರಸು ರಸ್ತೆಗಳಲ್ಲಿ ವ್ಯಾಪಾರ ಜೋರಾಗಿ ನಡೆಯಿತು. ಬೊಂಬೆಗಳು, ಜಿಂಗಲ್ ಬೆಲ್ಸ್, ಸಾಂತಾ ಕ್ಲಾಸ್ ಕಟೌಟ್‍ಗಳು, ಕ್ರಿಸ್‍ಮಸ್ ಸ್ಟಾರ್, ವಿವಿಧ ಬಣ್ಣದ ಆಕಾರದ ದೀಪಗಳು, ಕ್ಯಾಂಡಲ್‍ಗಳು ಮಾರಾಟವಾದವು.

ಲೂರ್ದ್ ನಗರ, ಗಾಂಧಿನಗರ, ಶ್ರೀರಾಂಪುರ, ವಿಜಯನಗರ, ಜೆ.ಪಿ.ನಗರ, ಲಷ್ಕರ್ ಮೊಹಲ್ಲಾ, ಬೃಂದಾವನ ಬಡಾವಣೆ, ಗೋಕುಲಂ, ಅಶೋಕಪುರಂ, ವಿಜಯನಗರ ಸೇರಿದಂತೆ ನಗರದ ವಿವಿಧ ಭಾಗಗಳಿಂದ ಮಾರುಕಟ್ಟೆಗೆ ಕುಟುಂಬದೊಂದಿಗೆ ಆಗಮಿಸುತ್ತಿರುವ ಸಮುದಾಯದ ಗ್ರಾಹಕರು ಹಬ್ಬದ ಅಲಂಕಾರಕ್ಕೆ ಬೇಕಾದ ವಸ್ತುಗಳನ್ನು ಖರೀದಿಸುತ್ತಿದ್ದುದು ಕಂಡುಬಂತು.

 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು