ಕೈಗಾರಿಕೆ, ಅಭಿವೃದ್ಧಿ ಭೂಸ್ವಾಧೀನ ನೆಪದಲ್ಲಿ ಸರ್ಕಾರ ರೈತರ ಕೃಷಿ ಭೂಮಿ ಸ್ವಾಧೀನಕ್ಕೆ ಮುಂದಾದರೆ ಬಡಿಗೆ ಚಳವಳಿ ಮಾಡಬೇಕಾಗುತ್ತದೆ: ಸರ್ಕಾರಕ್ಕೆ ರೈತಮುಖಂಡ ಇಂಗಲಗುಪ್ಪೆ ಕೃಷ್ಣೇಗೌಡ ಎಚ್ಚರಿಕೆ


 ಮೈಸೂರು : ಯಾವುದೇ ಅಭಿವೃದ್ಧಿ, ಕೈಗಾರಿಕೆ ಮತ್ತಿತರ ಕಾರಣಗಳನ್ನು ನೀಡಿ ಕೆಐಎಡಿಬಿ ಮೂಲಕ ರೈತರು ತಮ್ಮ ಬದುಕಿಗಾಗಿ ವ್ಯವಸಾಯ ಮಾಡುತ್ತಿರುವ ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ಸರ್ಕಾರ ವಶಪಡಿಸಿಕೊಳ್ಳಬಾರದು. ಒಂದು ವೇಳೆ ಬಲವಂತದಿಂದ ರೈತರ ಭೂಮಿ ವಶಪಡಿಸಿಕೊಳ್ಳಲು ಮುಂದಾದರೆ ರೈತರು ಬಡಿಗೆ ಚಳವಳಿ ಹಮ್ಮಿಕೊಳ್ಳಲಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತಸಂಘ(ರೈತಬಣ)ದ ಅಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ ಅವರು ಹೇಳಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಕಳೆದ ಸೋಮವಾರ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ)ಯಿಂದ ಕೈಗಾರಿಕಾ ಪ್ರದೇಶಕ್ಕೆ ಅಗತ್ಯವಾದ ಭೂಮಿಯನ್ನು ಸರ್ವೆ ಮಾಡಲು ಆನೇಕಲ್ ತಾಲ್ಲೂಕಿನ ಹಂದೇನಹಳ್ಳಿ ಗ್ರಾಮಕ್ಕೆ ಬಂದಿದ್ದ ಖಾಸಗಿ ಸಂಸ್ಥೆಯ ಪ್ರತಿನಿಧಿಗಳ ಡ್ರೋನ್ ಮತ್ತು ಲ್ಯಾಪ್‍ಟಾಪ್‍ಗೆ ರೈತರು ಬೆಂಕಿ ಹಚ್ಚಿರುವುದು ಸರಿಯಾದ ಕ್ರಮ. ಅಲ್ಲಿ ಸರ್ವೆಗೆ ಬಂದವರನ್ನು ರೈತರು ಬಡಿಗೆ ತೋರಿಸಿ ಓಡಿಸಿದ್ದಾರೆ. ಇದು ಮುಂದುವರಿದರೆ ಬಡಿಗೆಯಿಂದಲೇ ಬಡಿಯುತ್ತಾರೆ. ಸರ್ಕಾರ ಇದರಿಂದ ಎಚ್ಚೆತ್ತುಕೊಂಡು ಕೃಷಿಗೆ ಯೋಗ್ಯವಾದ ಜಮೀನನ್ನು ಯಾವುದೇ ಕಾರಣಕ್ಕೂ ವಶಪಡಿಸಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. 

ಆನೇಕಲ್ ತಾಲ್ಲೂಕಿನ ಹಂದೇನಹಳ್ಳಿ ಮತ್ತು ಮೇಡಹಳ್ಳಿ ಗ್ರಾಮಗಳ 700 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಕೈಗಾರಿಕ ಪ್ರದೇಶ ಸ್ಥಾಪನೆಗೆ ಕೆಐಎಡಿಬಿ ಈಚೆಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ. ಈ ಬಗ್ಗೆ ರೈತರೊಂದಿಗೆ ಮಾತುಕತೆ ನಡೆಸಿಲ್ಲ. ಅವರ ಅಭಿಪ್ರಾಯವನ್ನೂ ಪಡೆದಿಲ್ಲ. ಇಲ್ಲಿ ಯಾವ ರೈತರೂ ಎಕರೆ ಗಟ್ಟಲೆ ಜಮೀನು ಹೊಂದಿಲ್ಲ ತುಂಡು ಭೂಮಿಯಲ್ಲಿ ವ್ಯವಸಾಯ ಮಾಡಿಕೊಂಡು ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ಅಂತಹ ಭೂಮಿಯನ್ನು ಸರ್ಕಾರ ವಶಪಡಿಸಿಕೊಂಡರೆ ಅನ್ನದಾತನ ಬದುಕು ಬೀದಿಗೆ ಬೀಳುತ್ತದೆ ಎಂಬ ಕನಿಷ್ಠ ಜ್ಞಾನವೂ ಈ ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ಇಲ್ಲದಿರುವುದು ಶೋಚನೀಯ. 

ಈಗಾಗಲೇ ನಂಜನಗೂಡು, ಚಾಮರಾಜನಗರ ಕಡೆಗಳಲ್ಲಿ ಕೈಗಾರಿಕೆಗಾಗಿ ರೈತರಿಂದ ಜಮೀನು ವಶಕ್ಕೆ ಪಡೆಯಲಾಗಿದೆ. ಸರ್ಕಾರದ ನೀಡಿದ ಪುಡಿಗಾಸು ಪರಿಹಾರವನ್ನು ರೈತರು ಕಳೆದುಕೊಂಡಿದ್ದಾರೆ. ಭೂಮಿ ಕಳೆದುಕೊಂಡ ರೈತರ ಮಕ್ಕಳಿಗೆ ಕೈಗಾರಿಕೆಗಳಲ್ಲಿ ಕೆಲಸವನ್ನೂ ನೀಡಿಲ್ಲ. ಕೆಲವರಿಗೆ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ನೀಡಲಾಗಿದೆ. ಒಂದು ತಲೆಮಾರು ಕಳೆದರೆ ಬಡ ರೈತರು ಸಂಪೂರ್ಣ ಭೂರಹಿತರಾಗುತ್ತಾರೆ. ಕೃಷಿಭೂಮಿ ಬಲಾಢ್ಯರ ಪಾಲಾಗುತ್ತದೆ. ರೈತಸಂಘ ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಹೇಳಿರುವ ಅವರು, ಕೃಷಿಗೆ ಯೋಗ್ಯವಲ್ಲದ ಭೂಮಿಯನ್ನು ಬೇಕಾದರೆ ಸರ್ಕಾರ ಕೈಗಾರಿಕೆ ಮತ್ತಿತರ ಅಭಿವೃದ್ಧಿಗೆ ಬಳಸಿಕೊಳ್ಳಲಿ, ಅದೂ ಕೂಡ ಆ ಪ್ರದೇಶಗಳ ರೈತರು ಒಪ್ಪಿದರೆ ಮಾತ್ರ, ಅಲ್ಲದೇ ಕೈಗಾರಿಕೆಗಳಲ್ಲಿ ಭೂಮಿ ಕಳೆದುಕೊಂಡ ರೈತರ ಕುಟುಂಬಕ್ಕೆ ಕಾಯಂ ಉದ್ಯೋಗ ನೀಡಬೇಕು. ಎಲ್ಲ ಸೌಲಭ್ಯಗಳೂ ದೊರಕಬೇಕು. ಕೇವಲ ಕಾಟಾಚಾರಕ್ಕೆ ಹೊರಗುತ್ತಿಗೆ ನೌಕರಿ ನೀಡಬಾರದು ಅಂತಹದೇನಾದರೂ ಕಂಡುಬಂದಲ್ಲಿ ಕಾರ್ಖಾನೆಗಳ ಮುಂದೆ ರೈತಸಂಘ ಚಳವಳಿ ನಡೆಸಲಿದೆ ಎಂದು ಹೇಳಿದ್ದಾರೆ.

ಸರ್ಕಾರ ಬಡ ರೈತರ ಭೂಮಿಯನ್ನು ಕಡಿಮೆ ದರದಲ್ಲಿ ಸ್ವಾಧೀನ ಮಾಡಿಕೊಂಡು ಬಲಾಢ್ಯ ರಾಜಕಾರಣಿಗಳ ಬೇನಾಮಿ ಸಂಸ್ಥೆಗಳಿಗೆ ಸಿಎ ನಿವೇಶನ ಎಂದು ಕಡಿಮೆ ದರದಲ್ಲಿ ಹಂಚಿಕೆ ಮಾಡಿದೆ.

ಇಂತಹ ಆಟಾಟೋಪಗಳಿಗೆ ರೈತರು ಜಗ್ಗುವುದಿಲ್ಲ. ಅಲ್ಲದೇ ಕೆಲವು ರೈತ ಮುಖಂಡರೇ ಸರ್ಕಾರಕ್ಕೆ ದಲ್ಲಾಳಿಗಳಾಗಿ ಕೆಲಸವನ್ನೂ ಮಾಡುತ್ತಿದ್ದಾರೆ. ಇವರ ಬಗ್ಗೆಯೂ ರೈತರು ಎಚ್ಚೆತ್ತುಕೊಳ್ಳಬೇಕೆಂದು ಕೃಷ್ಣೇಗೌಡ ಹೇಳಿದ್ದಾರೆ.

ಈಗಾಗಲೇ ನಮ್ಮ ಸರ್ಕಾರಗಳು ರೈತರ ತಮಟೆ ಚಳವಳಿ, ಅರೆಬೆತ್ತಲೆ ಚಳವಳಿ, ಬಾರುಕೋಲು ಚಳವಳಿಗಳನ್ನು ನೋಡಿದೆ. ಇನ್ನುಮುಂದೆ ರೈತರ ಜಮೀನು ಬಲವಂತವಾಗಿ ವಶಕ್ಕೆ ಪಡೆದರೆ ಬಡಿಗೆ ಚಳವಳಿ ಹೇಗಿರುತ್ತದೆ ಎಂಬುದನ್ನೂ ರೈತರು ತೋರಿಸಲಿದ್ದಾರೆ. ಇದಕ್ಕೆಲ್ಲಾ ಸರ್ಕಾರ ಆಸ್ಪದ ಕೊಡಬಾರದು.   


ಇಂಗಲಗುಪ್ಪೆ ಕೃಷ್ಣೇಗೌಡ 

ಅಧ್ಯಕ್ಷರು, ಕರ್ನಾಟಕ ರಾಜ್ಯ ರೈತಸಂಘದ(ರೈತಬಣ) 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು