ಪಾಂಡವಪುರ : ಮನೆಯ ಮುಂಭಾಗದಲ್ಲೇ ಇದ್ದ ಜಾನುವಾರುಗಳ ಕೊಟ್ಟಿಗೆಯ ಬೀಗ ಮೀಟಿ 2 ಲಕ್ಷ ರೂ. ಮೌಲ್ಯದ 9 ಟಗರು, ವಾತ, ಮೇಕೆಗಳನ್ನು ದುಷ್ಕರ್ಮಿಗಳು ಕಳವು ಮಾಡಿರುವ ಘಟನೆ ತಾಲ್ಲೂಕಿನ ಬೋರೆ ಮೇಗಳ ಕೊಪ್ಪಲು ಗ್ರಾಮದಲ್ಲಿ ಸೋಮವಾರ ಮಧ್ಯರಾತ್ರಿ ನಡೆದಿದೆ.
ನರಸಿಂಹೇಗೌಡರ ಮಗ ಧರ್ಮ ಎಂಬುವರ ಮನೆಯಲ್ಲಿ ಈ ಕಳವು ನಡೆದಿದ್ದು, ಸೋಮವಾರ ಮಧ್ಯರಾತ್ರಿ ವಾಹನದಲ್ಲಿ ಬಂದಿರುವ ಕಳ್ಳರು ಮನೆಯವರು ಹೊರಗೆ ಬಾರದಂತೆ ಮುಂಭಾಗದ ಚಿಲಕಕ್ಕೆ ಕಡ್ಡಿ ಸಿಲುಕಿಸಿ ಕೊಟ್ಟಿಗೆ ಬೀಗ ಮೀಟಿ ಎರಡು ಸಣ್ಣ ಮರಿಗಳನ್ನು ಅಲ್ಲೇ ಬಿಟ್ಟು ಉಳಿದ 9 ಜಾನುವಾರುಗಳನ್ನು ಕಳವು ಮಾಡಿದ್ದಾರೆ. ಘಟನೆಯು ರಾತ್ರಿ 12 ರಿಂದ 1 ಗಂಟೆಯೊಳಗೆ ನಡೆದಿದೆ. ರಾತ್ರಿ 1.30ಕ್ಕೆ ಮನೆಯಿಂದ ಹೊರಬರಲು ಪ್ರಯತ್ನ ನಡೆಸಿದಾಗ ಹೊರಗಿನಿಂದ ಚಿಲಕ ಹಾಕಿಕೊಂಡಿರುವುದು ಮನೆಯ ಮಾಲೀಕರಿಗೆ ಗೊತ್ತಾಗಿ ನಂತರ ಎಲ್ಲೆಡೆ ವಿಷಯ ತಿಳಿಸಿ ವಾಹನ ಪತ್ತೆಗೆ ಮುಂದಾದರೂ ಕಳ್ಳರು ಪರಾರಿಯಾಗಿದ್ದಾರೆ ಎನ್ನಲಾಗಿದೆ.
0 ಕಾಮೆಂಟ್‌ಗಳು