ಹಲ್ಲೇಕೋರರ ವಿರುದ್ಧ ದೂರು ದಾಖಲಿಸಲು ಪೊಲೀಸರ ನಿರಾಕರಣೆ : ನ್ಯಾಯಕ್ಕಾಗಿ ಮಡಿಕೇರಿಯಿಂದ ಮೈಸೂರಿಗೆ ಬಂದ ಆದಿವಾಸಿ ಯುವಕ


 ಮೈಸೂರು : ಕ್ಷುಲ್ಲಕ ಕಾರಣಕ್ಕಾಗಿ ತನ್ನ ಮತ್ತು ತನ್ನ ಪತ್ನಿ ಸೇರಿದಂತೆ ಮಾಲೀಕನ ವಿರುದ್ಧ ಹಲ್ಲೆಗೈದ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಲು ಪೊಲೀಸರು ನಿರಾಕರಣೆ ಮಾಡಿದ ಕಾರಣ ನ್ಯಾಯ ಕೋರಿ ಜೇನು ಕುರುಬ ಜನಾಂಗಕ್ಕೆ ಸೇರಿದ ಯುವಕನೊಬ್ಬ ದೂರದ ಮಡಿಕೇರಿಯಿಂದ ಮೈಸೂರಿಗೆ ಬಂದು ಇಲ್ಲಿನ ಐಜಿಪಿ ಕಚೇರಿಗೆ ದೂರು ನೀಡಿರುವ ಘಟನೆ ಗುರುವಾರ ಮೈಸೂರಿನಲ್ಲಿ ನಡೆದಿದೆ.

ಏನಿದು ಘಟನೆ ಬನ್ನಿ ಸ್ವತಃ ಮೋಹನ್‍ನಿಂದಲೇ ಕೇಳೋಣ:

ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕು ಬಿರುನಾಣಿ ಗ್ರಾಮದ ಮೋಹನ್ ಜೆ.ಕೆ., ಎಂಬ ಯುವಕ ಇಲ್ಲಿನ ರಸಿಕ ಅಲಿಯಾಸ್ ದರ್ಶನ್ ಎಂಬವರಿಗೆ ಸೇರಿದ ಟ್ರಾಕ್ಟರ್ ಚಾಲಕನಾಗಿ ಕೆಲಸ ಮಾಡುತ್ತಿದ್ದನು. 

ನವೆಂಬರ್ 25 ರಂದು ರಾತ್ರಿ ಸುಮಾರು 8 ಗಂಟೆಗೆ ಈತ ಬಿರುನಾಣಿ ಸಮೀಪ ನೆಲ್ಲಿಪಾರೆ ಪೈಸಾರಿ ಕಾಲೂನಿಗೆ ಸಾವಿನ ಮನೆಗೆ ಊಟ ತೆಗೆದುಕೊಂಡು ಹೋಗುತ್ತಾನೆ.

ಈ ಸಂದರ್ಭದಲ್ಲಿ ಈತ ರಸ್ತೆ ಬದಿಯಲ್ಲಿ ಟ್ರಾಕ್ಟರ್ ನಿಲ್ಲಿಸಿ ಊಟ ಕೊಡಲು ಮನೆಗೆ ಹೋದಾಗ ಇದೇ ಮಾರ್ಗವಾಗಿ ಹಿಂದಿನಿಂದ ಟಾಟಾ ಯೋಧ  ಜೀಪಿನಲ್ಲಿ ಬಂದ ಕುಪ್ಪಣವಾಡ ಗ್ರಾಮದ ಮೋಟಯ್ಯ ಅಲಿಯಾಸ್ ಚಾಮಿ ಹಾಗೂ ಅವರ ತಮ್ಮ ಪೂಣಚ್ಚ, ರವರು ಜೀಪು ನಿಲ್ಲಿಸಿ ಕೆಳಗಿಳಿದು ರಸ್ತೆ ಬದಿಯಲ್ಲಿ ಟ್ರಾಕ್ಟರ್ ನಿಲ್ಲಿಸಿದ್ದ ಕಾರಣ ಚಾಲಕ ಮೋಹನ್‍ನನ್ನು ಬೈದು ಹಲ್ಲೆ ನಡೆಸುತ್ತಾರೆ. ಅಲ್ಲದೇ ಅಲ್ಲಿಗೆ ಬಂದ ಗೌತಮ್, ಪ್ರೀತಂ ಸಹ ಹಲ್ಲೆಗೆ ಮುಂದಾಗಿದ್ದಾರೆ.

ಕೂಡಲೇ ಮೋಹನ್ ತನ್ನ ಮಾಲೀಕ ದರ್ಶನ್ ರವರಿಗೆ ಈ ಈ ವಿಚಾರ ತಿಳಿಸಿದಾಗ ಅವರು ಸ್ಥಳಕ್ಕೆ ಬರುತ್ತಾರೆ. ಬಳಿಕ ಸದರಿ ವ್ಯಕ್ತಿಗಳು ದರ್ಶನ್ ಅವರ ಮೇಲೂ ಕತ್ತಿಯಿಂದ ಹಲ್ಲೆ ನಡೆಸಿ ಪರಾರಿಯಾಗುತ್ತಾರೆ. ಚಿಕಿತ್ಸೆ ಪಡೆದ ದರ್ಶನ್ ಮತ್ತು ಮೋಹನ್ ದಾಳಿ ನಡೆಸಿದವರ ವಿರುದ್ಧ ದೂರು ಕೊಡಲು ಶ್ರೀಮಂಗಲ ಪೊಲೀಸ್ ಠಾಣೆಗೆ ಹೋದಾಗ ಆಶ್ವರ್ಯ ಕಾದಿರುತ್ತದೆ. ಅದೇನೆಂದರೇ, ಅಲ್ಲಿ ದರ್ಶನ್ ವಿರುದ್ಧವೇ ಹಲ್ಲೆ ಮತ್ತು ಅಟ್ರಾಸಿಟಿ ದೂರು ದಾಖಲಾಗಿರುತ್ತದೆ. ಅಲ್ಲದೇ ಮೋಹನ್ ನೀಡಿದ ದೂರನ್ನು ಅಲ್ಲಿನ ಪೊಲೀಸರು ಸ್ವೀಕರಿಸದೆ ಮೋಹನ್ ವಿರುದ್ಧವೇ ದೂರು ದಾಖಲಿಸುವುದಾಗಿ ಹೇಳಿದಾಗ ಆತ ದಾರಿ ಕಾಣದೆ ವಾಪಸ್ ಬರುತ್ತಾನೆ. ಇದಿಷ್ಟು ಅಲ್ಲಿ ನಡೆದ ಘಟನೆ ಎಂದು ಸ್ವತಃ ಮೋಹನ್ ಎಂಬ ಯುವಕನೇ ಮಾಧ್ಯಮದವರ ಮುಂದೆ ವಿವರಿಸಿದರು.

ಸಧ್ಯ ಈತ ನ್ಯಾಯಕ್ಕಾಗಿ ದಕ್ಷಿಣ ವಲಯದ ಐಜಿಪಿ ಅವರಿಗೆ ದೂರು ನೀಡಿದ್ದು, ನ್ಯಾಯ ದೊರಕಿಸಿಕೊಡುವಂತೆ ಹಂಬಲಿಸುತ್ತಿದ್ದಾನೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು