ಭೂ ಸುಧಾರಣೆಯ ಮತ್ತೊಂದು ಮಜಲು ಕಥಾ ಹಂದರವುಳ್ಳ ಕನ್ನಡ ಚಲನಚಿತ್ರ `ಧೀರ ಭಗತ್ ರಾಯ್' ಡಿ.6ಕ್ಕೆ ಬಿಡುಗಡೆ


 ಮೈಸೂರು : ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಸೃಷ್ಟಿಸುವ ಗುರಿ ಹೊಂದಿರುವ ಧೀರ ಭಗತ್ ರಾಯ್ ಕನ್ನಡ ಚಲನಚಿತ್ರ ಡಿ.6ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಮೈಸೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶುಕ್ರವಾರ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿತು.

ಹೊಸ ನಿರ್ದೇಶಕ ಕರ್ಣನ್ ಅವರು ಈ ಸಿನಿಮಾಗೆ ಆಕ್ಷನ್-ಕಟ್ ಹೇಳಿದ್ದಾರೆ. ಚೊಚ್ಚಲ ಸಿನಿಮಾದಲ್ಲೇ ಅವರು ಗಂಭೀರವಾದ ಕಥಾ ವಸ್ತುವನ್ನು ಆಯ್ದುಕೊಂಡಿದ್ದಾರೆ. ಟ್ರೇಲರ್ ಮೂಲಕ ಅವರ ಕಸುಬು ಅದಭುತವಾಗಿ ಕಾಣಿಸಿದೆ. ಈ ಸಂದರ್ಭದಲ್ಲಿ ಚಿತ್ರ ನಿರ್ದೇಶಕ ಕರ್ಣನ್ ಮಾತನಾಡಿ,

`ಧೀರ ಭಗತ್ ರಾಯ್' ಸಿನಿಮಾ ಈಗಾಲೇ ಟ್ರೇಲರ್ ಮೂಲಕ ಲಕ್ಷಾಂತರ ಕನ್ನಡಿಗರ ಗಮನ ಸೆಳೆದಿದೆ. ಸಮಾಜದಲ್ಲಿನ ಅನ್ಯಾಯಗಳ ವಿರುದ್ಧ ಗುಡುಗುವಂತಹ ಕಥೆ ಈ ಸಿನಿಮಾದಲ್ಲಿ ಇದೆ. ಉಳುವವನೇ ಹೊಲದ ಒಡೆಯ ಎಂಬ ಘೋಷವಾಕ್ಯದೊಂದಿಗೆ ಬಂದ ಭೂಸುಧಾರಣಾ ಕಾಯ್ದೆಯ ಅಂಶಗಳನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. `ಕಾಟೇರ' ಸಿನಿಮಾದಲ್ಲಿ ಸಹ ಇಂಥದ್ದೇ ವಿಷಯ ಇತ್ತು. ಹಾಗಾಗಿ `ಕಾಟೇರ' ರೀತಿಯೇ ತಮ್ಮ ಸಿನಿಮಾಗೆ ಕೂಡ ಜನಬೆಂಬಲ ಸಿಗಲಿಗೆ ಎಂಬ ಆತ್ಮವಿಶ್ವಾಸ `ಧೀರ ಭಗತ್ ರಾಯ್' ಚಿತ್ರತಂಡಕ್ಕೆ ಇದೆ.

ಈ ಸಿನಿಮಾದಲ್ಲಿ ಹೊಸ ಪ್ರತಿಭೆಗಳು ಪ್ರಮುಖ ಪಾತ್ರ ಮಾಡಿದ್ದಾರೆ. ರಾಕೇಶ್ ದಳವಾಯಿ ಅವರು ಹೀರೋ ಆಗಿ ನಟಿಸಿದ್ದಾರೆ. ಟ್ರೇಲರ್‍ನಲ್ಲಿ ಅವರ ಆಕ್ಷನ್ ಅಬ್ಬರ ಕಾಣಿಸಿದೆ. 

ದೊಡ್ಡ ಬಜೆಟ್‍ನ ಸಿನಿಮಾಗಳ ಎದುರಿನಲ್ಲಿ ಸಣ್ಣ ಬಜೆಟ್‍ನ ಸಿನಿಮಾಗಳನ್ನು ತೆರೆಕಾಣಿಸಲು ನಿರ್ಮಾಪಕರು ಹಿಂದೇಟು ಹಾಕುವಂತಹ ಸಂದರ್ಭದಲ್ಲಿ ಪುಷ್ಪಾ-2 ಚಿತ್ರ ಬಿಡುಗಡೆಯ ಬೆನ್ನಹಿಂದೆಯೇ ನಮ್ಮ ಚಿತ್ರ ಬಿಡುಗಡೆಯಾಗುತ್ತಿದ್ದು, ಇದು ಖಂಡಿತಾ ಕನ್ನಡಿಗರ ಮನ ಗೆಲ್ಲಲಿದೆ. ಈ ನಂಬಿಕೆ ನಮಗಿದೆ ಎಂದರು.

`ಶ್ರೀ ಓಂ ಸಿನಿ ಎಂಟರ್‍ಟೇನರ್ಸ್' ಸಂಸ್ಥೆ ಮೂಲಕ `ಧೀರ ಭಗತ್ ರಾಯ್' ಸಿನಿಮಾ ನಿರ್ಮಾಣ ಆಗಿದೆ. ಹಲವು ವರ್ಷಗಳ ಹಿಂದೆ `ಬಾಹುಬಲಿ' ಸಿನಿಮಾದ ಎದುರಿನಲ್ಲಿ ಕನ್ನಡದ `ರಂಗಿತರಂಗ' ಸಿನಿಮಾ ಬಿಡುಗಡೆಯಾಗಿ ಗೆದ್ದಿತ್ತು. ಅದನ್ನೇ ಸ್ಫೂರ್ತಿಯಾಗಿ ಇಟ್ಟುಕೊಂಡು `ಪುಷ್ಪ 2' ಸಿನಿಮಾದ ಎದುರು `ಧೀರ ಭಗತ್ ರಾಯ್' ಸಿನಿಮಾವನ್ನು ಬಿಡುಗಡೆ ಮಾಡಲು ಈ ಚಿತ್ರತಂಡ ತೀರ್ಮಾನಿಸಿದೆ. ಇದರ ಪೈಪೆÇೀಟಿ ಹೇಗಿರಬಹುದು ಎಂಬುದನ್ನು ಕಾದುನೋಡಬೇಕು.

ಈ ಸಿನಿಮಾಗೆ ಪೂರ್ಣಚಂದ್ರ ತೇಜಸ್ವಿ ಅವರು ಸಂಗೀತ ನೀಡಿದ್ದಾರೆ. ಎನ್.ಎಂ. ವಿಶ್ವ ಅವರ ಸಂಕಲನ ಈ ಚಿತ್ರಕ್ಕಿದೆ. ಹೊಸ ನಟಿ ಸುಚರಿತಾ ಅವರು ನಾಯಕಿಯಾಗಿ ಅಭಿನಯಿಸಿದ್ದಾರೆ. ನೀನಾಸಂ ಅಶ್ವತ್ಥ್, ಶರತ್ ಲೋಹಿತಾಶ್ವ, ಹರಿರಾಮ್, ಪ್ರವೀಣ್ ಗೌಡ ಹೆಚ್.ಸಿ, ಕೆ.ಎಮ್. ಸಂದೇಶ್, ಸುಧೀರ್ ಕುಮಾರ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಸಹ ನಿರ್ಮಾಪಕ ಕರಿಯಪ್ಪ, ಡಿ.ಕೆ. ಗೋವಿಂದ, ಬಾಲನಟರಾದ ಹೇಮನುಷ್‍ಗೌಡ, ದೀಕ್ಷಾ ಮತ್ತಿತರರು ಇದ್ದರು.

ಗಟ್ಟಿ ಪ್ರತಿಭೆ ರಾಕೇಶ್ ದಳವಾಯಿ ನಾಯಕ ನಟ

ಭೂ ಸುಧಾರಾಣಾ ಕಾಯ್ದೆಯ ಒಳಸುಳುವು ಕಥಾ ಹಂದರವಿರುವ ಮತ್ತು ರಾಜಕೀಯ ಅಧಿಕಾರಕ್ಕಾಗಿ ನಡೆಯುವ ಹೋರಾಟದ ಕಥೆ ಒಳಗೊಂಡ `ಧೀರ ಭಗತ್ ರಾಯ್' ಚಿತ್ರದಲ್ಲಿ ರಂಗಭೂಮಿ ಹಿನ್ನೆಲೆಯ ರಾಕೇಶ್ ದಳವಾಯಿ ನಾಯಕನಾಗಿ ನಟಿಸಿದ್ದಾರೆ. 

ರಂಗಭೂಮಿ ಹಿನ್ನೆಲೆಯಿಂದ ಬಂದ ಬಹುತೇಕ ಕಲಾವಿದರು ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ರಾಕೇಶ್ ದಳವಾಯಿ ಗಟ್ಟಿ ಪ್ರತಿಭೆ ಎನ್ನಬಹುದು. ಈ ಧೈರ್ಯ ಅವರ ಮಾತಿನಲ್ಲಿದೆ. ಇಂತಹ ರಂಗಭೂಮಿ ಪ್ರತಿಭೆ ರಾಕೇಶ್ ದಳವಾಯಿ ಇದೀಗ ಸ್ಯಾಂಡಲ್‍ವುಡ್‍ನಲ್ಲಿ ಅದೃಷ್ಟ ಪರೀಕ್ಷೆಗಿಳಿಯಲು ಸಿದ್ಧತೆ ನಡೆಸಿದ್ದಾರೆ. 

ನಾಯಕಿ ಸುಚರಿತಾ

ನಾಯಕಿ ಸುಚರಿತಾ ಸಹಾಯರಾಜ್ ಮಾತನಾಡಿ, "ಇದು ನನ್ನ ಮೊದಲ ಸಿನಿಮಾ. ಚಿತ್ರದಲ್ಲಿ ಸಾವಿತ್ರಿ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಸಾವಿತ್ರಿ ತುಂಬಾ ಗಟ್ಟಿಗಿತ್ತಿ ಮಹಿಳೆ. ಒಬ್ಬ ಮಹಿಳೆ ಮನಸ್ಸು ಮಾಡಿದ್ರೆ ಸಮಾಜದಲ್ಲಿ ಏನು ಬೇಕಿದ್ರು ಸಾಧಿಸಬಹುದು ಎಂಬ ಸ್ಪೂರ್ತಿ ತುಂಬುವ ಮಹಿಳೆ ಪಾತ್ರ. ಇಂತಹ ಪಾತ್ರವನ್ನು ನೀಡಿದಕ್ಕೆ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಧನ್ಯವಾದ ಹೇಳುತ್ತೇನೆ. ಪಾತ್ರಕ್ಕೆ ನನ್ನ ಸಂಪೂರ್ಣ ಎಫರ್ಟ್ ಹಾಕಿದ್ದೇನೆ. ಚಿತ್ರದ ಹಿರಿಯ ಕಲಾವಿದರು ಕೂಡ ನನಗೆ ನಟನೆ ವಿಚಾರದಲ್ಲಿ ತುಂಬಾ ಕಲಿಸಿಕೊಟ್ಟಿದ್ದಾರೆ ಎಂದು ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು