ಧರ್ಮಗುರು ಮೌಲಾನ ಅಕ್ಮಲ್ ಕೊಲೆ ಪ್ರಕರಣ : ತನಿಖಾಧಿಕಾರಿಯಿಂದ ಆರೋಪಿಗಳ ರಕ್ಷಣೆ : ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆರೋಪ

 

ಮೈಸೂರು : ಮೂರು ತಿಂಗಳ ಹಿಂದೆ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ನಡೆದ ಧರ್ಮಗುರು ಮೌಲಾನ ಮೊಹಮ್ಮದ್ ಅಕ್ಮಲ್ ಕೊಲೆ ಪ್ರಕರಣದಲ್ಲಿ ತನಿಖಾಧಿಕಾರಿಯು ನ್ಯಾಯಾಲಯಕ್ಕೆ ದುರ್ಬಲ ಚಾರ್ಜ್‌ಶೀಟ್ ಸಲ್ಲಿಸುವ ಮೂಲಕ ಆರೋಪಿಗಳ ರಕ್ಷಣೆಗೆ ಮುಂದಾಗಿದ್ದಾರೆಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆರೋಪಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಒಬ್ಬ ಸಾಮಾನ್ಯ ವ್ಯಕ್ತಿ ಈ ಚಾರ್ಜ್‌ಶೀಟ್ ಎಷ್ಟೊಂದು ದುರ್ಬಲ ಎಂದು ಹೇಳಬಹುದು. ಈ ಪ್ರಕರಣವನ್ನು ತನಿಖಾಧಿಕಾರಿ ಹಳ್ಳ ಹಿಡಿಸಿದ್ದಾರೆ ಎಂದು ದೂರಿದರು.
ಜನನಿಬಿಡ ಪ್ರದೇಶದಲ್ಲಿ ಕೊಲೆಯಾಗಿದೆ. ಇದರ ತನಿಖೆ ಪೊಲೀಸ್ ಇಲಾಖೆಗೆ ಒಂದು ಸವಾಲಾಗಿತ್ತು. ಈ ಪ್ರಕರಣವನ್ನು ಸಿಸಿಬಿಗೆ ವಹಿಸಲಾಗಿತ್ತು. ನಗರದ ಪ್ರಿಮಿಯರ್ ಗೆಸ್ಟ್‌ಹೌಸ್‌ನಲ್ಲಿ ಕೊಲೆಗೆ ಸಂಚು ರೂಪಿಸಲಾಗಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದ್ದರೂ ಆರೋಪಿಯ ಜತೆಯಲ್ಲಿದ್ದವರನ್ನು ಪೊಲೀಸರು ಆರೋಪಿಗಳನ್ನಾಗಿಸಿಲ್ಲ. ಬಳಿಕ ಕೊಲೆ ಮಾಡಿದ ಆರೋಪಿ ಕಾರಿನಲ್ಲಿ ತಪ್ಪಿಸಿಕೊಂಡು ಹೋದನು ಎಂದು ಹೇಳಿದ್ದರೂ ಬಿಳಿ ಬಣ್ಣದ ಕ್ರೆಟಾ ಕಾರಿನಲ್ಲಿ ಆತನ ಜತೆಗಿದ್ದವರನ್ನು ಬಂಧಿಸಿಲ್ಲ. ಅವರನ್ನು ಆರೋಪಿಗಳನ್ನಾಗಿಸಿಲ್ಲ. ಇದು ತನಿಖಾಧಿಕಾರಿಯ ಪ್ರಮುಖ ಲೋಪವಾಗಿದೆ. ಉದ್ದೇಶಪೂರ್ವಕವಾಗಿ ತನಿಖಾಧಿಕಾರಿ ಪ್ರಮುಖ ಆರೋಪಿಗಳನ್ನು ಪ್ರಕರಣದಿಂದ ಹೊರಗಿಡುವ ಪ್ರಯತ್ನ ಮಾಡಿದ್ದಾರೆ. ಇದರಲ್ಲಿ ದೊಡ್ಡ ಮಟ್ಟದ ಹಣದ ವಹಿವಾಟು ನಡೆದಿದೆ ಎಂದು ಗಂಭೀರ ಆರೋಪ ಮಾಡಿದರಲ್ಲದೇ, ಈ ಕೂಡಲೇ ನ್ಯಾಯಾಲಯಕ್ಕೆ ಮತ್ತೊಂದು ವಿಸ್ತೃತ ಚಾರ್ಜ್‌ಶೀಟ್ ಸಲ್ಲಿಸಬೇಕೆಂದು ಮಜೀದ್ ಕೋರಿದರು.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಿತ್ರದುರ್ಗದಿಂದ ಕ್ಯಾಬ್ ಮೂಲಕ ಕರೆತಂದ ಕ್ಯಾಬ್ ಚಾಲಕನ್ನು ಪೊಲೀಸರು ಬಂಧಿಸಿ ಆರೋಪಿ ಮಾಡಿದ್ದಾರೆ. ಆದರೇ, ಈ ಪ್ರಕರಣದಲ್ಲಿ ಕೊಲೆಗಡುಕನನ್ನು ಕಾರಿನಲ್ಲಿ ಸಾಗಿಸಿದ, ಕೊಲೆಗೆ ಸಂಚು ರೂಪಿಸಿದ
ವ್ಯಕ್ತಿಗಳನ್ನು ಕೈಬಿಟ್ಟಿರುವುದು ಚಾರ್ಜ್‌ಶೀಟ್‌ನಲ್ಲಿ ಸ್ಪಷ್ಟವಾಗಿದೆ ಎಂದರು.
೫ನೇ ಆರೋಪಿ ಫೈಝಾನ್ ಮತ್ತವನ ತಂಡ ಮೃತ ಅಕ್ಮಲ್ ಮೌಲಾನ ಅವರ ಚಲನವಲನದ ಬಗ್ಗೆ ಗಮನ ಇರಿಸಿ ಕೊಲೆಗಾರರಿಗೆ ಮಾಹಿತಿ ನೀಡುತ್ತಿದ್ದನು. ಈತನ ಮೇಲೆ ಕಲಂ ೩೦೨ ಪ್ರಕರಣ ದಾಖಲಿಸದೆ, ಕೇವಲ ಕಲಂ ೧೨೦ರಡಿ ಪ್ರಕರಣ ದಾಖಲಿಸಿ ಈತನನ್ನೂ ತನಿಖಾಧಿಕಾರಿ ಬಚಾವ್ ಮಾಡಿದ್ದಾರೆ. ಕೂಡಲೇ ಸರ್ಕಾರ ತನಿಖಾಧಿಕಾರಿಯನ್ನು ಬದಲಿಸಿ ಒಬ್ಬ ದಕ್ಷ ತನಿಖಾಧಿಕಾರಿಯನ್ನು ನೇಮಿಸಬೇಕೆಂದು ಆಗ್ರಹಿಸಿದರು. 
ಮೈಸೂರು ಪೊಲೀಸರು ದಕ್ಷತೆಗೆ ಹೆಸರಾಗಿದ್ದಾರೆ. ಒಬ್ಬ ಧರ್ಮಗುರು ಕೊಲೆ ಪ್ರಕರಣವನ್ನು ಭೇದಿಸಿ ಕೊಲೆಯಲ್ಲಿ ಭಾಗಿಯಾದ ಎಲ್ಲರನ್ನೂ ಬಂಧಿಸುವ ಬದಲು ಸಾಕಷ್ಟು ಆರೋಪಿಗಳನ್ನು ರಕ್ಷಿಸಿರುವುದು ಪೊಲೀಸ್ ಹುದ್ದೆಗೆ ಘನತೆ ತರುವುದಿಲ್ಲ. ಈ ಕೂಡಲೇ ತನಿಖಾಧಿಕಾರಿ ಬದಲಿಸಿ, ದಕ್ಷ ಅಧಿಕಾರಿ ನೇಮಿಸಿ ಅಡಿಷನಲ್ ಚಾರ್ಜ್‌ಶೀಟ್ ಸಲ್ಲಿಸಬೇಕೆಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ಜಿಲ್ಲಾ ಅಧ್ಯಕ್ಷ ರಫತ್‌ಖಾನ್, ಉಪಾಧ್ಯಕ್ಷ ಎಸ್.ಸ್ವಾಮಿ, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಸಫಿಉಲ್ಲಾ, ರಾಜ್ಯ ಸಮಿತಿ ಸದಸ್ಯರಾದ ನೂರುದ್ದೀನ್ ಮೌಲಾನ, ಅಮ್ಜದ್ ಖಾನ್ ಇದ್ದರು.
ಮೌಲಾನ ಅಕ್ಮಲ್ ಕೊಲೆ ಪ್ರಕರಣದಲ್ಲಿ ತನಿಖಾಧಿಕಾರಿಯು ಲೋಪ ನಡೆಸುತ್ತಿರುವುದನ್ನು ಕಂಡ ಮೃತ ಅಕ್ಮಲ್ ಅವರ ಪತ್ನಿಯು ಈ ಬಗ್ಗೆ ಪೊಲೀಸ್ ಆಯುಕ್ತರಿಗೆ, ಗೃಹ ಸಚಿವರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರೂ ಆ ಬಗ್ಗೆ ಯಾರೂ ಸೂಕ್ತ ಕ್ರಮ ಕೈಗೊಂಡಿಲ್ಲ. ಇದು ವಿಷಾದನೀಯ ಎಂದು ಮಜೀದ್ ಬೇಸರ ವ್ಯಕ್ತಪಡಿಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು