ವಿದ್ಯಾರ್ಥಿಗಳು ಭಯಮುಕ್ತರಾಗಿ ಶಾಲೆಗೆ ಬರಬೇಕು : ಡಾ.ನವೀನ್ ಕುಮಾರ್

 
ಶಾಂತಲ ವಿದ್ಯಾಪೀಠದಲ್ಲಿ 'ನಾಯಕತ್ವ’ ಪ್ರಧಾನ ಸಮಾರಂಭ

ಮೈಸೂರು : ವಿದ್ಯಾರ್ಥಿಗಳ ಭಯಮುಕ್ತರಾಗಿ ಸಂತೋಷದಿಂದ ಶಾಲೆಗಳಿಗೆ ಬರುವಂತಾಗಬೇಕು. ಪಠ್ಯಗಳು ಅವರಿಗೆ ಹೊರೆಯಾಗಬಾರದು ಎಂದು ಉಪ ತಹಸೀಲ್ದಾರ್ ಡಾ.ನವೀನ್ ಕುಮಾರ್ ಹೇಳಿದರು.

ನಗರದ ಸಿದ್ಧಾರ್ಥ ಬಡಾವಣೆಯಲ್ಲಿರುವ ಶಾಂತಲ ವಿದ್ಯಾಪೀಠ ಶಾಲೆಯಲ್ಲಿ ಇನ್ವೆಸ್ಟಿಚರ್ (ನಾಯಕತ್ವ ಪ್ರದಾನ) ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ವಿದ್ಯೆ ಯಾರೂ ಕದಿಯಲಾಗದ ಆಭರಣ. ಮಕ್ಕಳ ಉತ್ತಮ ಭವಿಷ್ಯ ಅವರು ಕಲಿಯುವ ವಿದ್ಯೆಯಲ್ಲಿ ಅಡಗಿದೆ. ವಿದ್ಯಾರ್ಥಿಗಳು ಆಟಗಳ ಜತೆ ಜತೆಯಾಗಿ ವಿದ್ಯೆಯನ್ನು ಪರಿಪೂರ್ಣವಾಗಿ ಕಲಿಯಬೇಕು. ಇದರಿಂದ ನಿಮ್ಮಗಳ ಭವಿಷ್ಯ ಉಜ್ವಲವಾಗುತ್ತದೆ. ಶಾಲೆಗಳೂ ಸಹ ವಿದ್ಯಾರ್ಥಿಗಳಿಗೆ ಪಠ್ಯಗಳನ್ನು ಹೊರೆಯಾಗದಂತೆ ಆಟೋಟಗಳ ಜತೆ  ಜತೆಯಾಗಿ ಕಲಿಸಬೇಕು ಎಂದು ಸಲಹೆ ನೀಡಿದರು.

ಶಾಂತಲ ವಿದ್ಯಾಪೀಠ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಕಲಿಸುವಲ್ಲಿ ಹೆಚ್ಚು ಮುತುವರ್ಜಿ ವಹಿಸಿದೆ. ವಿದ್ಯೆಗಿಂತಲೂ ಸಂಸ್ಕಾರ ಮುಖ್ಯವಾಗಿದೆ. ಎಷ್ಟೇ ವಿದ್ಯೆ ಕಲಿತರೂ ಸಂಂಸ್ಕಾರ ಇಲ್ಲದಿದ್ದರೆ ಕಲಿತ ವಿದ್ಯೆ ವ್ಯರ್ಥ ಎನ್ನುವುದನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಆಯ್ಕೆಯಾದ ಶಾಲೆಯ ನೂತನ ನಾಯಕರಿಗೆ  ಅಧಿಕಾರ ಹಸ್ತಾಂತರಿಸಲಾಯಿತು. ನೂತನ ನಾಯಕರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ಶಾಲಾ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿ, ಆಕರ್ಷಕ ಪಥಸಂಚಲನ ನಡೆಸಿದರು.

ಟ್ರಾಫಿಕ್ ಇನ್ಸ್‌ಪೆಕ್ಟರ್ ಕೆ.ವಿ.ಶ್ರೀಧರ್, ಶಾಲಾ ಆಡಳಿತ ಸಮಿತಿ ಕಾರ್ಯದರ್ಶಿ ಎಂ.ಎಸ್.ಸಂತೋಷ್ ಕುಮಾರ್, ಪ್ರಾಂಶುಪಾಲರಾದ ಡಿಂಬಲ್ ಸಬಾಸ್ಟಿಯನ್ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

ವಿದ್ಯಾರ್ಥಿ ದೆಸೆಯಿಂದಲೇ ಮಕ್ಕಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಲು ನಮ್ಮ ಶಾಲೆಯಲ್ಲಿ ಎಲ್‌ಕೆಜಿ ಮಕ್ಕಳಿಂದಲೇ ಪ್ರಜಾಪ್ರಭುತ್ವ ಮಾದರಿ ಚುನಾವಣೆ ನಡೆಸಿ ಮತದಾನದ ಮೂಲಕ ಶಾಲೆಯ ನಾಯಕರನ್ನು ಆಯ್ಕೆ ಮಾಡಲಾಗುವುದು. ಆಯ್ಕೆಯಾದ ನಾಯಕರು ಮಕ್ಕಳಲ್ಲಿ ಆರೋಗ್ಯ, ಪರಿಸರ, ಪ್ಲಾಸ್ಟಿಕ್ ನಿಯಂತ್ರಣ, ಮಾಧ್ಯಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸಿ ಭವ್ಯ ಭಾರತ ಕಟ್ಟುವಲ್ಲಿ ಭದ್ರ ಬುನಾದಿ ಹಾಕುವ ಪ್ರಯತ್ನ ಮಾಡುತ್ತಾರೆ.

ಎಂ.ಎಸ್.ಸಂತೋಷ್ ಕುಮಾರ್, ಕಾರ್ಯದರ್ಶಿ   


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು