ಟ್ರಯಲ್ ಬ್ಲಾಸ್ಟ್ ಬೆಂಬಲಿಸಿ ಕೆಆರ್‌ಎಸ್ ಬಳಿ ನೂರಾರು ರೈತರ ಪ್ರತಿಭಟನೆ
ಜುಲೈ 03, 2024
ಮಂಡ್ಯ : ಉಚ್ಛ ನ್ಯಾಯಾಲಯದ ಆದೇಶಾನುಸಾರ ಮಂಡ್ಯ ಜಿಲ್ಲಾಡಳಿತ ಪಾಂಡವಪುರ ತಾಲ್ಲೂಕು ಬೇಬಿ ಬೆಟ್ಟದ ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ನಡೆಸಲು ಉದ್ದೇಶಿಸಿರುವ ಟ್ರಯಲ್ ಬ್ಲಾಸ್ಟ್ (ಪ್ರಾಯೋಗಿಕ ಸ್ಪೋಟ) ಬೆಂಬಲಿಸಿ ಕರ್ನಾಟಕ ರಾಜ್ಯ ರೈತಸಂಘ (ರೈತಬಣ)ದಿಂದ ಬುಧವಾರ ಕೆಆರ್‌ಎಸ್ ನೀರಾವರಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಯಿತು. ಸಂಘಟನೆ ರಾಜ್ಯಾಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ ನೇತೃತ್ವದಲ್ಲಿ ಜಮಾಯಿಸಿದ ನೂರಾರು ರೈತಸಂಘಟನೆ ಕಾರ್ಯಕರ್ತರು, ನ್ಯಾಯಾಲಯದ ಆದೇಶಾನುಸಾರ ಪಾಂಡವಪುರ ತಾಲ್ಲೂಕು ಬೇಬಿ ಬೆಟ್ಟದ ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಬೇಕೆಂದು ಒತ್ತಾಯಿಸಿದರು. ನಮಗೆ ಕೆಆರ್‌ಎಸ್ ಜಲಾಶಯದ ಭದ್ರತೆ ಮುಖ್ಯವಾಗಿದೆ. ಪ್ರಾಯೋಗಿಕ ಸ್ಪೋಟ ನಡೆಸುವುದರಿಂದ ತಾಂತ್ರಿಕ ಮಾಹಿತಿಗಳು ದೊರೆಯುತ್ತವೆ. ಇದರಿಂದ ಕೆಆರ್‌ಎಸ್ ಜಲಾಶಯವನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು ಎಂಬ ಮುಂಜಾಗ್ರತೆ ವಹಿಸಲು ಅನುಕೂಲವಾಗುತ್ತದೆ. ಈಗಾಗಲೇ ಮೂರು ಬಾರಿ ಇಲ್ಲಿ ಪ್ರಾಯೋಗಿಕ ಸ್ಪೋಟ ನಡೆಸಲು ತಂತ್ರಜ್ಞರು ಬಂದು ವಾಪಸ್ ಹೋಗಿದ್ದಾರೆ. ಆದರೆ, ಈ ಬಾರಿ ಸ್ಪೋಟ ನಡೆಸಿ ಸರ್ಕಾರಕ್ಕೆ ಮತ್ತು ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು. ನ್ಯಾಯಾಲಯದ ಆದೇಶವನ್ನು ವಿನಾ ಕಾರಣ ವಿರೋಧಿಸುವುದು ಸರಿಯಲ್ಲ. ಟ್ರಯಲ್ ಬ್ಲಾಸ್ಟ್‌ನಿಂದ ಸಿಗುವ ಸ್ಪೋಟದ ಪರಿಣಾಮ ಕುರಿತ ಅಂಕಿ ಅಂಶಗಳನ್ನು ನ್ಯಾಯಾಲಯದ ಮುಂದೆ ಇಡಬೇಕು. ಇದರಿಂದ ಸಾರ್ವಜನಿಕರು ಹಾಗೂ ರೈತರಿಗೆ ಸ್ಪಷ್ಟವಾದ ಮಾಹಿತಿ ಸಿಗುತ್ತದೆ. ಯಾವುದೇ ಕಾರಣಕ್ಕೂ ಟ್ರಯಲ್ ಬ್ಲಾಸ್ಟ್‌ನಿಂದ ಹಿಂದೆ ಸರಿಯಬಾರದು. ಇದಕ್ಕೆ ನಮ್ಮ ಸಂಘಟನೆ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಸಂಘಟನೆ ರಾಜ್ಯಾಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ ಒತ್ತಾಯಿಸಿದರು. ಕೆಆರ್‌ಎಸ್ ಪೊಲೀಸ್ ಠಾಣೆ ಮುಂಭಾಗದಿಂದ ನೀರಾವರಿ ಇಲಾಖೆ ಕಚೇರಿ ತನಕ ಪ್ರತಿಭಟನಾಕಾರರು ಸುಮಾರು ಒಂದು ಕಿಮೀ ಮೆರವಣಿಗೆ ಮೂಲಕ ಸಾಗಿದರು. ಈ ಸಂದರ್ಭದಲ್ಲಿ ರೈತರ ಮನವಿ ಸ್ವೀಕರಿಸಲು ಕಚೇರಿಯಲ್ಲಿ ಹಿರಿಯ ಅಧಿಕಾರಿಗಳು ಇರಲಿಲ್ಲವಾದ್ದರಿಂದ ರೈತರು ಕೆರಳಿ ಕೆಆರ್‌ಎಸ್‌ಗೆ ಮುತ್ತಿಗೆ ಹಾಕಲು ಮುಂದಾದರು. ಬಳಿಕ ನೀರಾವರಿ ಇಲಾಖೆ ಎಇಇ ರಶ್ಮೀ ಅವರು ಹಿರಿಯ ಅಧಿಕಾರಿಗಳ ಸಲಹೆ ಮೇರೆಗೆ ಮನವಿ ಸ್ವೀಕರಿಸಿ ಸರ್ಕಾರಕ್ಕೆ ಸಲ್ಲಿಸುವುದಾಗಿ ಹೇಳಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತಸಂಘ(ರೈತಬಣ)ದ ಗೌರವಾಧ್ಯಕ್ಷರಾದ ಹೆಮ್ಮಿಗೆ ಚಂದ್ರಶೇಖರ್, ಪಿ.ಎಂ.ರವಿಗೌಡ, ಮೈಸೂರು ಜಿಲ್ಲಾಧ್ಯಕ್ಷ ಕೆಂಪರಾಜು, ನಗರಾಧ್ಯಕ್ಷೆ ಎಸ್.ನಾಗರತ್ನ, ಬೆಂಗಳೂರು ಗ್ರಾಮಾಂತರ ಅಧ್ಯಕ್ಷ ರಘುನಾಥ್ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.
0 ಕಾಮೆಂಟ್‌ಗಳು