ಡಾ.ಜೆ.ಎನ್.ರಾಮಕೃಷ್ಣೇಗೌಡ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆದ ಅಕ್ಷರಾಭ್ಯಾಸ
ಪಾಂಡವಪುರ : ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಪೂರ್ವ ಪ್ರಾಥಮಿಕ ಶಾಲೆಗೆ ದಾಖಲಾದ ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸ ’ಜ್ಞಾನಾಂಕುರ’ ಕಾರ್ಯಕ್ರಮವು ಹೇಮಗಿರಿ ಆದಿಚುಂಚನಗಿರಿ ಶಾಖಾ ಮಠದ ಗೌರವ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು.
ಶಾಲೆಯ ಸಭಾಂಗಣದಲ್ಲಿ ನಡೆದ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ಸರಸ್ವತಿ ಪೂಜೆ, ಗಣಪತಿ ಹೋಮ, ಅಭಿಷೇಕದ ಮೂಲಕ ಚಾಲನೆ ನೀಡಲಾಯಿತು. ನೂರಾರು ಪೋಷಕರು ತಮ್ಮ ಮಕ್ಕಳೊಂದಿಗೆ ಪೂಜೆಯಲ್ಲಿ ಭಾಗವಹಿಸಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು. ಈ ಸಂದರ್ಭದಲ್ಲಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಮಾತನಾಡಿ, ನಮ್ಮ ಪೂರ್ವಿಕರು ಮತ್ತು ಹಿರಿಯರು ಶೃಂಗೇರಿ ಶಾರದ ಪೀಠದಲ್ಲಿ ತಮ್ಮ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುತ್ತಿದ್ದರು. ಆದರೇ, ನಮ್ಮ ಶಾಲೆಯಲ್ಲಿ ಓದುವ ಬಡವರು, ರೈತರ ಮಕ್ಕಳು ಶೃಂಗೇರಿಗೆ ಹೋಗಲು ಅಸಾಧ್ಯವಾದ ಕಾರಣ ಮಠದ ಶ್ರೀಗಳ ಆದೇಶದಂತೆ ನಮ್ಮ ಎಲ್ಲ ಶಾಲೆಗಳಲ್ಲಿಯೇ ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸಿ ಅಕ್ಷರಾಭ್ಯಾಸ ಮಾಡಿಸುತ್ತಿದ್ದೇವೆ ಎಂದರು.
ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ, ಸಂಸ್ಕೃತಿ ಹಾಗೂ ನಮ್ಮ ಆಚಾರ-ವಿಚಾರಗಳನ್ನು ಸಹ ಕಲಿಸಬೇಕಿದೆ. ಈ ನಿಟ್ಟಿನಲ್ಲಿ ಬಿಜಿಎಸ್ ಮಠದ ಶಾಲೆಗಳು ಈ ಕಾರ್ಯವನ್ನು ಮಾಡುತ್ತಿವೆ. ಅಕ್ಷಾರಾಭ್ಯಾಸ ಮಾಡಿಸುವ ಮೂಲಕ ಪೋಷಕರು ಖುಷಿಪಡುತ್ತಿದ್ದಾರೆ ಎಂದು ತಿಳಿಸಿದರು. ಕಾರ‍್ಯಕ್ರಮಕ್ಕೂ ಮುನ್ನ ಪರಿಸರ ದಿನಾಚರಣೆಯ ಅಂಗವಾಗಿ ಡಾ.ಬಾಲಗಂಗಾಧರನಾಥ ಸ್ವಾಮೀಜಿಗಳ ಪುತ್ಥಳಿಗೆ ಪೂಜೆ ಸಲ್ಲಿಸಿ, ಶಾಲಾ ಆವರಣದಲ್ಲಿ ಗಿಡನೆಡಲಾಯಿತು. ಸಮಾರಂಭದಲ್ಲಿ ಪತ್ರಕರ್ತರಾದ ಬಿ.ಎಸ್.ಜಯರಾಮು, ಎಸ್.ನಾಗಸುಂದರ್, ಚನ್ನಮಾದೇಗೌಡ, ಕುಮಾರಸ್ವಾಮಿ, ರವಿಕುಮಾರ್, ನಜೀರ್ ಅಹಮದ್, ಕೃಷ್ಣೇಗೌಡ, ವಿಶ್ವನಾಥ್, ಅರುಣ್, ಮಧು ಸೇರಿದಂತೆ ಹಲವರು ಭಾಗವಹಿಸಿದ್ದರು.
0 ಕಾಮೆಂಟ್‌ಗಳು