ಪಿಎಸ್‌ಎಸ್‌ಕೆ ಪ್ರೌಢಶಾಲೆಯಲ್ಲಿ ’ವಿಶ್ವ ಪರಿಸರ ದಿನಾಚರಣೆ’

’ಗಿಡ ನೆಟ್ಟರೆ ಸಾಲದು, ಅವುಗಳ ಸಂರಕ್ಷಣೆ ಅಗತ್ಯ’ : ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್.ಮಹೇಶ್ ಸಲಹೆ  

ಪಾಂಡವಪುರ : ಜಾಗತಿಕ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆ ಪ್ರಕೃತಿಯ ಸಮತೋಲನ ಕಾಪಾಡಿಕೊಳ್ಳಲು ಹೆಚ್ಚಾಗಿ ಮರಗಿಡಗಳನ್ನು ಬೆಳೆಸುವುದು ಅನಿವಾರ್ಯವಾಗಿದ್ದು, ಅವುಗಳನ್ನು ಸಂರಕ್ಷಿಸುವುದು ಕೂಡ ಅಷ್ಟೇ ಅಗತ್ಯ ಎಂದು ಪಾಂಡವಪುರ ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್.ಮಹೇಶ್ ಹೇಳಿದರು. 
ವಿಶ್ವಪರಿಸರ ದಿನಾಚರಣೆ ಪ್ರಯುಕ್ತ ಪಾಂಡವಪುರ ರೈಲ್ವೆ ನಿಲ್ದಾಣದ ಬಳಿಯ  ಪಿಎಸ್‌ಎಸ್‌ಕೆ ಪ್ರೌಢಶಾಲೆ ಆವರಣದಲ್ಲಿ ಜ್ಯೋತಿ ಇಕೋ ಕ್ಲಬ್, ಅರಣ್ಯ ಇಲಾಖೆ ಮತ್ತು ಪಿಎಸ್‌ಎಸ್‌ಕೆ ಶಿಕ್ಷಣ ಸಂಸ್ಥೆ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಸಿನೆಟ್ಟು ಅವರು ಮಾತನಾಡಿದರು. 

ಕಾರ್ಯಕ್ರಮ ನಿಮಿತ್ತ ಕೇವಲ ಗಿಡ ನೆಟ್ಟರೆ ಸಾಲದು, ಶಾಲಾ ಮಕ್ಕಳು ಅವುಗಳನ್ನು ಸಂರಕ್ಷಿಸಿ ಮರವಾಗಿ ಬೆಳೆಸಬೇಕು. ಜತೆಗೆ ತಮ್ಮ ಪೋಷಕರಲ್ಲೂ ಪರಿಸರ ಜಾಗೃತಿ ಮೂಡಿಸಬೇಕು. ಹೀಗಾದರೆ ಮಾತ್ರ ಪ್ರಕೃತಿಯ ಸಮತೋಲನ ಕಾಪಾಡಲು ಸಾಧ್ಯ ಎಂದರು.
ಆರ್‌ಎಫ್‌ಓ ಬಿಆರ್‌ಡಿ ಜಗದೀಶ್‌ಗೌಡ ಮಾತನಾಡಿ, ನೈಸರ್ಗಿಕ ಸಂಪತ್ತು ಕಾಪಾಡುವ ನಿಟ್ಟಿನಲ್ಲಿ ಸಮುದಾಯ ಅರಣ್ಯ ಇಲಾಖೆ ಜತೆ ಕೈ ಜೋಡಿಸಬೇಕು. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮರಗಿಡಗಳನ್ನು ಬೆಳೆಸುವುದರ ಬಗ್ಗೆ ಜಾಗೃತಿ ಮೂಡಿಸಬೇಕು. ಮರಗಿಡಗಳನ್ನು ಕಡಿಯುವುದು ಕಡಿಮೆ ಮಾಡಿದರೆ ಮಾತ್ರ ಪ್ರಕೃತಿ ಸಮತೋಲನ ಕಾಪಾಡಲು ಸಾಧ್ಯ ಇದರಿಂದ ಜಾಗತಿಕ ತಾಪಮಾನ ನಿಯಂತ್ರಣದಲ್ಲಿರುತ್ತದೆ ಎಂದರು.
ಪಿಎಸ್‌ಎಸ್‌ಕೆ ಪ್ರೌಢಶಾಲೆ ಮುಖ್ಯೋಪಾಧ್ಯಾಯಿನಿ ಬಿ.ಶೈಲಜಾ ಮಾತನಾಡಿ, ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಇಂದು ನೆಟ್ಟಿರುವ ಎಲ್ಲ ಸಸಿಗಳನ್ನು ಶಾಶ್ವತವಾಗಿ ಸಂರಕ್ಷಿಸಲಾಗುವುದು. ಜತೆಗೆ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸಲಾಗುವುದು ಎಂದರು. 

ಪಾಂಡವಪುರ ನ್ಯಾಯಾಲಯದ ಕಿರಿಯ ನ್ಯಾಯಾಧೀಶರಾದ ಕೆ.ಎಲ್.ಕಿಶೋರ್ ಕುಮಾರ್, ಎಂ.ಪದ್ಮ, ಡಿಆರ್‌ಎಫ್‌ಓ ಧರ್ಮೇಂದ್ರ, ಎಂ.ಸಿ.ಯೋಗೇಶ್, ಕುಮಾರಸ್ವಾಮಿ, ಸೋಮಪ್ಪ (ಸಾಮಾಜಿಕ ಅರಣ್ಯ ವಲಯ), ವಕೀಲರ ಸಂಘದ ಅಧ್ಯಕ್ಷ ಕಾಳೇಗೌಡ, ಕಾರ್ಯದರ್ಶಿ ನಾಗರಾಜು, ಕೋರ್ಟ್ ಸಿಬ್ಬಂದಿ ಮಂಚಯ್ಯ, ಪಿಎಸ್‌ಎಸ್‌ಕೆ ಪ್ರೌಢಶಾಲೆಯ ತೋಟಗಾರಿಕೆ ವಿಭಾಗದ ಶಿಕ್ಷಕರಾದ ತಮ್ಮಣ್ಣ, ಸಹ ಶಿಕ್ಷಕರಾದ ಆರ್.ಕೃಷ್ಣೇಗೌಡ, ದೈಹಿಕ ಶಿಕ್ಷಣ ಶಿಕ್ಷಕರಾದ ನಾಗೇಂದ್ರ ಮತ್ತಿತರರು ಇದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು