ಸಂಸದೆ ಪ್ರಿಯಾಂಕ ಜಾರಕಿಹೋಳಿಗೆ ಮೈಸೂರಿನಲ್ಲಿ ನಾಯಕ ಸಮುದಾಯದಿಂದ ಹೃದಯಸ್ಪರ್ಶಿ ಸನ್ಮಾನ

ಮೈಸೂರು : ಚಿಕ್ಕೋಡಿ ಲೋಕಸಭಾ ಕ್ಷೇತ್ರದ ನೂತನ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ನಗರಪಾಲಿಕೆ ಮಾಜಿ ಸದಸ್ಯ ಮತ್ತು ನಾಯಕ ಸಮುದಾಯದ ಮುಖಂಡರಾದ ಲೋಕೇಶ್ ಪಿಯಾ ನೇತೃತ್ವದಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ನಾಯಕ ಸಮುದಾಯದಿಂದ ಹೃದಯಸ್ಪರ್ಷಿ ಸನ್ಮಾನ ಮಾಡಲಾಯಿತು.
ನಗರದ ಸುಣ್ಣದಕೇರಿ ಬಡಾವಣೆಯಲ್ಲಿರುವ ಮಲೇ ಮಹದೇಶ್ವರ ಸಮುದಾಯ ಭವನದಲ್ಲಿ ಸೋಮವಾರ ಮದ್ಯಾಹ್ನ ನಡೆದ ಸಮಾರಂಭದಲ್ಲಿ ಲೋಕೇಶ್ ಪಿಯಾ ಹಾಗೂ ಇತರ ಮುಖಂಡರು ನೂತನ ಸಂಸದೆ ಪ್ರಿಯಾಂಕ ಜಾರಕಿಹೋಳಿ ಮತ್ತು ಅವರ ಸಹೋದರ ರಾಹುಲ್ ಜಾರಕಿಹೋಳಿ ಅವರಿಗೆ ಭಾರಿ ಗಾತ್ರದ ಹಾರ ಹಾಕಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಬಳಿಕ ಎರಡೂ ಜಿಲ್ಲೆಗಳ ಎಲ್ಲ ತಾಲ್ಲೂಕುಗಳ ನಾಯಕ ಸಮುದಾಯದ ಮುಖಂಡರು ಪ್ರತ್ಯೇಕವಾಗಿ ತಂಡೋಪತಂಡವಾಗಿ ಬಂದು ಗೌರವಿಸಿದರು. ಇದಕ್ಕೂ ಮುನ್ನ ಸಮುದಾಯ ಭವನಕ್ಕೆ ಸಂಸದೆ ಪ್ರಿಯಾಂಕ ಅವರು ಆಗಮಿಸುತ್ತಿದ್ದಂತೆ ಲೋಕೇಶ್ ಪಿಯಾ ಅವರ ಬೆಂಬಲಿಗರು ಮತ್ತು ಸತೀಶ್ ಜಾರಕಿಹೋಳಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿ ಪುಷ್ಪಾರ್ಚನೆ ಮೂಲಕ ಸಂಸದೆ ಪ್ರಿಯಾಂಕ ಮತ್ತು ಸಹೋದರ ರಾಹುಲ್ ಅವರನ್ನು ಬರಮಾಡಿಕೊಂಡರು. ಮತ್ತು ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ದೇವರಾಜ ಕಾಟೂರು, ಮೂಲತಃ ಪರಿಶಿಷ್ಟ ಪಂಗಡ ವಾಲ್ಮೀಕಿ ಸಮುದಾಯಕ್ಕೆ ಸೇರಿದ ಪ್ರಿಯಾಂಕ ಜಾರಕಿಹೋಳಿ ಅವರು ಚಿಕ್ಕೋಡಿ ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿ ೯೦ ಸಾವಿರ ಮತಗಳ ಅಂತರದಿಂದ ಜಯ ಸಾಧಿಸಿರುವುದು ಇತಿಹಾಸ ಹಾಗೂ ಸುವರ್ಣಾಕ್ಷರಗಳಿಂದ ಬರೆದಿಡಬೇಕಾದ ಘಟನೆ ಎಂದು ಬಣ್ಣಿಸಿದರು.

ನೂತನ ಸಂಸದೆ ಪ್ರಿಯಾಂಕ ಜಾರಕಿಹೋಳಿ ಮಾತನಾಡಿ, ಅತ್ಯಂತ ಸಂಘಟಿತ ಹೋರಾಟ ಮತ್ತು ಕಾರ್ಯಚಟುವಟಿಕೆಯಿಂದ ಚಿಕ್ಕೋಡಿಯಲ್ಲಿ ಗೆಲ್ಲಲು ಸಾಧ್ಯವಾಯಿತು. ಪಕ್ಷದ ಕಾರ್ಯಕರ್ತರು, ಮುಖಂಡರು ಮತ್ತು ತಂದೆ ಸತೀಶ್ ಜಾರಕಿಹೋಳಿ ಅವರ ಅಭಿಮಾನಿಗಳ ಪರಿಶ್ರಮ ಇದಕ್ಕೆ ಕಾರಣವಾಗಿದೆ. ನನ್ನ ಕ್ಷೇತ್ರದಲ್ಲಿ ಪ್ರಚಾರ ನಡೆಸಲು ಮೈಸೂರಿನಿಂದಲೂ ಸಮುದಾಯದ ಮುಖಂಡರು ಆಗಮಿಸಿ ಪ್ರಚಾರ ನಡೆಸಿ ನನ್ನ ಗೆಲುವಿಗೆ ಕಾರಣರಾಗಿದ್ದಾರೆ. ಮುಂದೆ ಕಾಂಗ್ರೆಸ್ ಪಕ್ಷ ಲೋಕಸಭೆಯಲ್ಲಿ ಮತ್ತಷ್ಟು ಹೆಚ್ಚು ಸ್ಥಾನ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ಎಲ್ಲ ನಾಯಕರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇನೆ. ಅಭಿವೃದ್ಧಿ ಕೆಲಸಗಳ ಜತೆಗೆ ಕಾಂಗ್ರೆಸ್ ಪಕ್ಷ ಸಂಘಟನೆಗೂ ಶ್ರಮಿಸುತ್ತೇನೆ ಎಂದು ನುಡಿದರು. 
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಜನತೆ ೯೦ ಸಾವಿರ ಮತಗಳ ಅಂತರದಿಂದ ನನ್ನನ್ನು ಗೆಲ್ಲಿಸಿದ್ದಾರೆ. ಕ್ಷೇತ್ರದ ಜನತೆ ಸ್ವಂತ ಮಗಳಂತೆ ಪ್ರೀತಿ ತೋರಿದರು. ನಾನು ರಾಜಕೀಯ ಪ್ರವೇಶಿಸಿದ್ದು ಮಹಿಳೆಯರಿಗೆ ಸಂತೋಷ ತಂದಿದೆ. ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದು ಹೇಳಿದರು. 
ಕಾರ್ಯಕ್ರಮದಲ್ಲಿ ಮೈಸೂರು ಮಹಾನಗರಪಾಲಿಕೆ ಮಾಜಿ ಸದಸ್ಯ ಲೋಕೇಶ್ ಪಿಯಾ, ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು, ಸಚಿವ ಸತೀಶ್ ಜಾರಕಿಹೋಳಿ ಅವರ ಪುತ್ರ ರಾಹುಲ್ ಜಾರಕಿಹೋಳಿ, ನಗರಪಾಲಿಕೆ ಮಾಜಿ ಸದಸ್ಯೆ ಶೋಭಾ ಮೋಹನ್, ಮುಖಂಡರಾದ ಶ್ರೀನಿವಾಸ, ಝಾಕೀರ್ ಪಾಷ, ಸ್ವಾಮೀಗೌಡ, ಶಿವಲಿಂಗಯ್ಯ, ಎಸ್.ಆರ್.ರವಿಕುಮಾರ್, ದೊಡ್ಡಸ್ವಾಮಿ ನಾಯಕ, ಕೆಂಪಯ್ಯ, ಶಂಭುಲಿಂಗಯ್ಯ, ಚಂದ್ರು, ಸಿದ್ದರಾಜು, ಸತೀಶ್, ಸಿದ್ದಪ್ಪ ಮುಂತಾದವರು ಇದ್ದರು. 
 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು