ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಪ್ರೊ. ಕಮಲ ಹಂಪನಾ : ಮಡ್ಡಿಕೆರೆ ಗೋಪಾಲ್

ಉರಿಲಿಂಗಿ ಪೆದ್ದಿಮಠದಲ್ಲಿ ಡಾ.ಕಮಲಾ ಹಂಪನಾ ಸ್ಮರಣೆ

ವರದಿ : ನಜೀರ್ ಅಹಮದ್, ಪಾಂಡವಪುರ

ಮೈಸೂರು : ನಾಡಿನ ಅಗ್ರಗಣ್ಯ ಮಹಿಳಾ ಸಾಹಿತಿಯಾಗಿದ್ದ ನಾಡೋಜ ಕಮಲ ಹಂಪನಾ ಅವರು, ತಮ್ಮ ಅಧ್ಯಯನ, ಅಧ್ಯಾಪನ, ಲೇಖನ, ಭಾಷಣ ಮತ್ತು ಸಂಶೋಧನೆಗಳಿಂದ ೬೦ ವರ್ಷಗಳ ಕಾಲ ಸಾಹಿತ್ಯ ಕ್ಷೇತ್ರದಲ್ಲಿ ಅವಿರತವಾಗಿ ಕೃಷಿ ಮಾಡುವ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು ಎಂದು  ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ಹೇಳಿದರು. 


ಗಾಂಧಿನಗರದಲ್ಲಿರುವ ಉರಿಲಿಂಗಿ ಪೆದ್ದಿಮಠದಲ್ಲಿ ಜೈ ಭೀಮ್ ಜನಸ್ಪಂದನಾ ವೇದಿಕೆಯಿಂದ ಏರ್ಪಡಿಸಿದ್ದ ನಾಡೋಜ ಡಾ. ಕಮಲಾ ಹಂಪನಾ ಅವರ ನುಡಿನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಪ್ರೊ.ಕಮಲಾ ಹಂಪನಾ ಅವರು ಸಮಕಾಲೀನ ಕನ್ನಡ ಸಾಹಿತ್ಯದ ಹಿರಿಯ ಬರಹಗಾರ್ತಿ. ಅವರ ಧೀರ್ಘಕಾಲಿಕ ಹಾಗೂ ಮೌಲಿಕ ಕೊಡುಗೆಗೆ ಸಂದ ಗೌರವಗಳಲ್ಲಿ ಪ್ರಮುಖವಾದುವು. ಮೂಡುಬಿದರೆಯಲ್ಲಿ ನಡೆದ ಅಖಿಲ ಭಾರತ ೭೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಸರ್ಕಾರದ ಪುರಸ್ಕಾರವಾದ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯವು ಕೊಡಮಾಡುವ ನಾಡೋಜ ಪ್ರಶಸ್ತಿ. ಡಾ.ಕಮಲಾ ಹಂಪನಾ ಅವರ ಬರವಣಿಗೆಯ ಹರಹು ದೊಡ್ಡದು. ಅವರ ಸಮಗ್ರ ಸಾಹಿತ್ಯವನ್ನು ಒಳಗೊಂಡ ಒಂಬತ್ತು ಬೃಹತ್ ಸಂಪುಟಗಳು ಹೊರಬಂದಿವೆ. ಸಂಶೋಧನೆ ಅವರ ಮೊದಲ ಆಯ್ಕೆ. ಪ್ರಕಟವಾದ ೬೦ಕ್ಕೂ ಹೆಚ್ಚು ಕೃತಿಗಳಲ್ಲಿ ಸೃಜನಕೃತಿಗಳೂ ಸೇರಿವೆ. ನಾಟಕ, ಕತೆಗಳು ಮತ್ತು ವಚನಗಳಲ್ಲಿ ಸೃಷ್ಟಿಶಕ್ತಿಯ ವಿನ್ಯಾಸ ಕೆನೆಕಟ್ಟಿದೆ. ಬಿಂದಲಿ, ಬುಗುಡಿ ಹಾಗೂ ಬಯಲು ಇವು ಆಧುನಿಕ ವಚನಗಳಿರುವ ಸಂಕಲನಗಳು. ಇವಲ್ಲದೆ ಅತಿಮಬ್ಬೆ ಅಂಡ್ ಚಾಲುಕ್ಯಸ್ ಹಾಗೂ ಜೈನಿಸಂ ಅಂಡ್ ಅದರ್ ಎಸ್ಸೆಸ್ ಎಂಬ ಎರಡು ಇಂಗ್ಲಿಷ್ ಪುಸ್ತಕಗಳನ್ನು ರಚಿಸಿದ್ದಾರೆ ಎಂದು ಸ್ಮರಿಸಿದರು.

ಹಿರಿಯ ಸಾಹಿತಿ ಲೀಲಾ ಪ್ರಕಾಶ್ ಮಾತನಾಡಿ, ಬೆಂಗಳೂರಿನ ದೇವನಹಳ್ಳಿಯಲ್ಲಿ ಸಿ. ರಂಗಧಾಮನಾಯಕ್ ಮತ್ತು ಲಕ್ಷಮ್ಮ ದಂಪತಿ ಪುತ್ರಿಯಾಗಿ ಕಮಲಾ ಹಂಪನಾ ಜನಿಸಿದರು. ತುಮಕೂರು ಮತ್ತು ಮೈಸೂರಿನಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸಿ ೧೯೫೬ರಲ್ಲಿ ಕನ್ನಡ ಅಧ್ಯಾಪಕಿಯಾಗಿ ವೃತ್ತಿ ಜೀವನ ಆರಂಭಿಸಿದ್ದರು. ಬೆಂಗಳೂರು ಮತ್ತು ಮೈಸೂರು ಮಹಾರಾಣಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ, ಬೆಂಗಳೂರಿನ ವಿಜಯನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲೆ ಆಗಿ ಕಾರ್ಯ ನಿರ್ವಹಿಸಿದ್ದಾರೆ. ನಿವೃತ್ತರಾದ ಮೇಲೆ ಮೈಸೂರು ವಿಶ್ವವಿದ್ಯಾಲಯ, ಹಂಪಿ ಕನ್ನಡ ವಿಶ್ವವಿದ್ಯಾನಿಲಯಗಳಲ್ಲಿಯೂ ಸೇವೆ ಸಲ್ಲಿಸಿದ್ದರು. ಕಮಲಾ ಹಂಪನಾ ಅವರು ೬೦ ವರ್ಷಗಳಕಾಲ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಮಾಡಿದ್ದಾರೆ ಎಂದರು.

ಕನ್ನಡ ಸಾಹಿತ್ಯ ಬೆಳವಣಿಗೆಗೆ ಅವರು ಪಟ್ಟ ಶ್ರಮ, ನಡೆಸಿದ ನಿರಂತರ ಹೋರಾಟ, ಮಾಡಿದ ಸಾಧನೆಗಳು ಹಲವಾರು. ಅವರ ಪರಿಶ್ರಮದ ಫಲವಾಗಿ ಕರ್ನಾಟಕ ಸರ್ಕಾರ ಪ್ರತಿವರ್ಷ ಲೇಖಕಿಯೊಬ್ಬರಿಗೆ ಮೂರು ಲಕ್ಷ ರೂಪಾಯಿ ನಗದನ್ನೂ ಒಳಗೊಂಡ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಯನ್ನು ನೀಡುತ್ತಿದೆ ಎಂದರು.

ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಮಾತನಾಡಿ, ಜೀವಪರ ಸಂವೇದನೆ, ಸಾಮಾಜಿಕ ಬದ್ಧತೆ, ಸಾಂಸೃತಿಕ ಕಾಳಜಿಯನ್ನು ಪ್ರಭಾವಶಾಲಿಯಾಗಿ ಬಿಂಬಿಸುವ ಕಮಲಾ ಹಂಪನಾ ಕನ್ನಡದ ಹೆಮ್ಮೆ. ಕರ್ನಾಟಕ ಸರ್ಕಾರ ಅವರ ಸಾಕ್ಷ್ಯಚಿತ್ರವನ್ನು ಸಿದ್ಧಪಡಿಸಿದೆ. ಇವೆಲ್ಲದಕ್ಕೂ ಕಿರೀಟ ಪ್ರಾಯವಾಗಿದೆ - ಜಗತ್ತಿನ ಅಯ್ದು ಆದರ್ಶ ಜೋಡಿಗಳನ್ನು ಆಧರಿಸಿ ಜರ್ಮನಿಯ ಯಾಸೇಮಿನ್ ನಿರ್ದೇಶಿಸಿರುವ ಅಂತರರಾಷ್ಟ್ರೀಯ ಸಾಕ್ಷ್ಯಚಿತ್ರದಲ್ಲಿ ಇಡೀ ಭಾರತದ ಪರವಾಗಿ ಕಮಲಾ-ಹಂಪನಾ ಜೋಡಿ ಆಯ್ಕೆಯಾಗಿ ಸೇರಿರುವುದು ಹೆಮ್ಮೆಯ ವಿಷಯ ಎಂದರು.

ನಕ್ಕಿತು ಹಾಲಿನ ಬಟ್ಟಲು, ರೆಕ್ಕೆ ಮುರಿದಿತ್ತು, ಚಂದನಾ, ಬಣವೆ, ಸಂಶೋಧನಾ ಕೃತಿಗಳಾದ ತುರಂಗ ಭಾರತ - ಒಂದು ಅಧ್ಯಯನ, ಶಾಂತಿನಾಥ, ಆದರ್ಶ ಜೈನ ಮಹಿಳೆಯರು, ಅನೇಕಾಂತವಾದ, ನಾಡು ನುಡಿ ನಾವು, ಜೈನ ಸಾಹಿತ್ಯ ಪರಿಸರ, ಬದ್ದವಣ, ರೋಣದ ಬಸದಿ ಸೇರಿ ಹಲವು ಕಥಾ ಕವನ ಸಂಕಲನಗಳು, ಶಿಶು ಸಾಹಿತ್ಯ, ಅನುವಾದಗಳು, ಕಾದಂಬರಿಗಳನ್ನು ಕನ್ನಡ ಸಾಹಿತ್ಯ ಪ್ರಿಯರಿಗಾಗಿ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಮೌನಾಚರಣೆ ನಡೆಸಿ ಡಾ.ಕಮಲಾ ಹಂಪನಾ ಅವರಿಗೆ ಗೌರವ ಸಲ್ಲಿಸಲಾಯಿತು. ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ.ಮಡ್ಡಿಕೆರೆ ಗೋಪಾಲ್ ಸೇರಿದಂತೆ ವೇದಿಕೆಯಲ್ಲಿದ್ದ ಗಣ್ಯರು ಡಾ.ಕಮಲಾ ಹಂಪನಾ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕೆಪಿಸಿಸಿ ಸದಸ್ಯ ನಜರ್‌ಬಾದ್ ನಟರಾಜ್, ಜೀವನಿಧಿ ರಕ್ತಧಾರ ಕೇಂದ್ರದ ಗಿರೀಶ್, ಕೆಎಂಪಿಕೆ ಟ್ರಸ್ಟ್‌ನ ವಿಕ್ರಂ ಅಯ್ಯಂಗಾರ್, ಕಾರ್ಯಕ್ರಮದ ಆಯೋಜಕರಾದ ಚೇತನ್ ಕಾಂತರಾಜು ಮತ್ತಿತರರು ಇದ್ದರು.  


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು