ಹೋರಾಟಗಾರ ಜಯಪ್ರಕಾಶ್ (ಜೆಪಿ) ನೇತೃತ್ವದಲ್ಲಿ ನಾಳೆ ಮೇಕೆದಾಟುವಿನಲ್ಲಿ ಕಾವೇರಿ ಕ್ರಿಯಾ ಸಮಿತಿಯಿಂದ ಪ್ರತಿಭಟನೆ
ಜೂನ್ 14, 2024
ಮೈಸೂರು : ರಾಜ್ಯ ಮತ್ತು ಕೇಂದ್ರ ಸರ್ಕಾರ ಜತೆಗೂಡಿ ಮೇಕೆದಾಟು ಯೋಜನೆಯನ್ನು ಶೀಘ್ರ ಅನುಷ್ಠಾನ ಮಾಡುವ ಮೂಲಕ ಕನ್ನಡಿಗರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ನಾಳೆ ಹೋರಾಟಗಾರ ಜಯಪ್ರಕಾಶ್ (ಜೆಪಿ) ನೇತೃತ್ವದಲ್ಲಿ ಮೇಕೆದಾಟು ಬಳಿ ಕಾವೇರಿ ಕ್ರಿಯಾ ಸಮಿತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಉಪಾಧ್ಯಕ್ಷ ಎಂ.ಜೆ.ಸುರೇಶ್‌ಗೌಡ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಶನಿವಾರ ಬೆಳಗ್ಗೆ ೮ ಗಂಟೆಗೆ ಅರಮನೆ ಉತ್ತರ ದ್ವಾರದ ಬಳಿ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ಪೂಜೆ ಸಲ್ಲಿಸಿ ಮೇಕೆದಾಟು ಚಲೋ ಕಾರ್ಯಕ್ರಮಕ್ಕೆ ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ, ಚಿತ್ರನಟ ಜಯಪ್ರಕಾಶ್ (ಜೆಪಿ) ಚಾಲನೆ ನೀಡಲಿದ್ದಾರೆ. ನಂತರ ಕಾವೇರಿ ಕ್ರಿಯಾ ಸಮಿತಿಯ ನೂರಾರು ಸದಸ್ಯರು ವಾಹನಗಳಲ್ಲಿ ತೆರಳಿ ಮೇಕೆದಾಟು ಸಮೀಪದ ಕರ್ನಾಟಕದ ಗಡಿ ಭಾಗದಲ್ಲಿ ಕಾವೇರಿ ಕ್ರಿಯಾ ಸಮಿತಿಯ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಕೂಡಲೇ ಮೇಕೆದಾಟು ಯೋಜನೆ ಪ್ರಾರಂಭಿಸಬೇಕು. ಕೇಂದ್ರ ಸರ್ಕಾರ ರಾಜ್ಯಕ್ಕೆ ಅಗತ್ಯ ಅನುಮತಿ ಕೊಡಿಸಿ ಹಣಕಾಸಿನ ಅನುದಾನ ಬಿಡುಗಡೆ ಮಾಡಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಹೇಳಿದರು. ಗೋಷ್ಠಿಯಲ್ಲಿ ಹಾಜರಿದ್ದ ಚಿತ್ರನಟ, ಹೋರಟಗಾರ ಜಯಪ್ರಕಾಶ್ (ಜೆಪಿ) ಮಾತನಾಡಿ, ಕಾವೇರಿ ವಿಷಯದಲ್ಲಿ ಕರ್ನಾಟಕ ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ನಮ್ಮ ನೂತನ ಸಂಸದರು ಬದ್ಧತೆ ತೋರಬೇಕು. ತಮಿಳುನಾಡಿನ ಜನಪ್ರತಿನಿಧಿಗಳಂತೆ ಪಕ್ಷಭೇದ ಮರೆದು ಇಚ್ಛಾಶಕ್ತಿಯನ್ನು ಪ್ರದರ್ಶಿಸಿ ಯೋಜನೆಯನ್ನು ಅನುಷ್ಠಾನ ಮಾಡಿಸಬೇಕು. ಕಾವೇರಿ ನೀರಿನ ರಕ್ಷಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಅದರಂತೆ ಮೇಕದಾಟು ಯೋಜನೆ ಘೋಷಿಸಿದರೆ ಸಾಲದು ಕೇಂದ್ರ ಸರ್ಕಾರದ ಬೆನ್ನುಹತ್ತಿ ಕೆಲಸ ಮಡಿಸುವಲ್ಲಿಯೂ ರಾಜ್ಯ ಸರ್ಕಾರ ವಿಫಲವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಸಂಸದರನ್ನು ಭೇಟಿ ಮಾಡಿ, ಕಾವೇರಿ ನೀರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವಂತೆ ಕಾವೇರಿ ಕ್ರಿಯಾ ಸಮಿತಿ ಒತ್ತಡ ಹಾಕುತ್ತದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕಾವೇರಿ ಕ್ರಿಯಾ ಸಮಿತಿಯ ಮೂಗೂರು ನಂಜುಂಡಸ್ವಾಮಿ, ತೇಜಸ್ ಲೋಕೇಶ್‌ಗೌಡ, ಭಾಗ್ಯಮ್ಮ, ಕೃಷ್ಣಪ್ಪ, ನಾಗರಾಜು ಮತ್ತಿತರರು ಇದ್ದರು.
0 ಕಾಮೆಂಟ್‌ಗಳು