ಕಾವೇರಿ ಕ್ರಿಯಾ ಸಮಿತಿಯಿಂದ ಮೇಕೆದಾಟಿನಲ್ಲಿ ಬೃಹತ್ ಪ್ರತಿಭಟನೆ:
ಜೂನ್ 15, 2024
ಸಂಸದರು, ಸಚಿವರು ಇಚ್ಛಾಶಕ್ತಿಯಿಂದ ಮೇಕೆದಾಟು ಯೋಜನೆ ಅನುಷ್ಠಾನಗೊಳಿಸುವಂತೆ ಜಯಪ್ರಕಾಶ್ ಒತ್ತಾಯ
ಸಾತನೂರು : ಕರ್ನಾಟಕದಿಂದ ಸಂಸದರಾಗಿ ಆಯ್ಕೆಯಾಗಿ ಈಗ ಕೇಂದ್ರ ಸಚಿವರಾಗಿರುವ ಹೆಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ನಿರ್ಮಲಾ ಸೀತಾರಾಮನ್ ಅವರು ತಮ್ಮ ಸಚಿವ ಸ್ಥಾನದ ಅಧಿಕಾರ ಬಳಸಿ ಅತ್ಯಂತ ಜವಾಬ್ದಾರಿಯಿಂದ ಕಾವೇರಿ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬೇಕು ಮತ್ತು ಮೇಕೆದಾಟು ಯೋಜನೆಯನ್ನು ಈ ಕೂಡಲೇ ಪ್ರಾರಂಭಿಸಿ ತಮ್ಮ ಅಧಿಕಾರದ ಸಾರ್ಥಕತೆಯನ್ನು ಧೈರ್ಯದಿಂದ ನಿಭಾಯಿಸಬೇಕೆಂದು ಬಿಜೆಪಿ ಮುಖಂಡ ಹಾಗೂ ಕಾವೇರಿ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಎಸ್.ಜಯಪ್ರಕಾಶ್ (ಜೆಪಿ) ಒತ್ತಾಯ ಪೂರ್ವಕವಾಗಿ ಮನವಿ ಮಾಡಿದರು. ಶನಿವಾರ ಕಾವೇರಿ ಕ್ರಿಯಾ ಸಮಿತಿಯ ಆಶ್ರಯದಲ್ಲಿ ಸಾತನೂರು ಸಮೀಪದ ಮೇಕೆದಾಟು ಅರಣ್ಯ ಇಲಾಖೆಯ ಟೋಲ್‌ಗೇಟ್ ಬಳಿ ಏರ್ಪಡಿಸಿದ್ದ ಪ್ರತಿಭಟನಾ ಧರಣಿಯ ನೇತೃತ್ವವನ್ನು ವಹಿಸಿ ಅವರು ಮಾತನಾಡಿದರು. ಸಂಸದರು ಮತ್ತು ಸಚಿವರು ತಮ್ಮ ಅಧಿಕಾರ ಮುಗಿದ ಮೇಲೆ ಪಶ್ಚಾತ್ತಾಪ ಪಡುವ ಬದಲು ಈಗಲೇ ರಾಜ್ಯದ ಜೀವನದಿ ಕಾವೇರಿ ನೀರಿನ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸಬೇಕು. ರಾಜ್ಯದ ಎಲ್ಲಾ ಪಕ್ಷದ ನಾಯಕರುಗಳು ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಿ ರಾಜ್ಯದ ಜನತೆಗೆ ಮೇಕೆದಾಟು ಯೋಜನೆಯು ಸೇರಿದಂತೆ ಕಾವೇರಿ ನೀರಿನ ವಿಚಾರದಲ್ಲಿ ನ್ಯಾಯ ದೊರಕಿಸಿಕೊಡಬೇಕು. ನಮ್ಮ ಕಾವೇರಿ ನಮ್ಮ ಹಕ್ಕು ಕರ್ನಾಟಕದ ಹಕ್ಕು ಎಂದು ಪ್ರತಿಪಾದಿಸಿದರು. ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡಿಗೆರೆ ಗೋಪಾಲ್ ಮಾತನಾಡಿ, ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಬೇಜವಾಬ್ದಾರಿಯಿಂದ ವರ್ತಿಸಿ ಶೇಖರಿಸಿದ್ದ ನೀರೆಲ್ಲಾ ತಮಿಳುನಾಡಿಗೆ ಬಿಟ್ಟುಕೊಟ್ಟು ಒಟ್ಟು ಕನ್ನಡಿಗರಿಗೆ ದ್ರೋಹ ಬಗೆದಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. ಹೋರಾಟಗಾರ ಮೂಗೂರು ನಂಜುಡಸ್ವಾಮಿ ಮಾತನಾಡಿ, ಕಾವೇರಿ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಎಸ್.ಜಯಪ್ರಕಾಶ್ ಅವರು ತಮ್ಮೆಲ್ಲಾ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಕಾಯ, ವಾಚ, ಮನಸಾ, ಕಾವೇರಿ ಕ್ರಿಯಾ ಸಮಿತಿಯ ನೇತೃತ್ವ ವಹಿಸಿಕೊಂಡು ಶಿಸ್ತುಬದ್ಧವಾಗಿ ಹೋರಾಟವನ್ನು ಮುಂದುವರೆಸಿರರುವುದನ್ನು ಶ್ಲಾಘಿಸಿದರು. ರೈತ ಮುಖಂಡರಾದ ಸಂಪತ್ ಕುಮಾರ್ ಮಾತನಾಡಿ, ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು, ಮೇಕೆದಾಟಿಗೆ ಬೇಕಾದಷ್ಟು ಹಣ ಬಿಡುಗಡೆಯಾಗಿದ್ದರು ಅದರ ಯೋಜನೆಯನ್ನು ಪ್ರಾರಂಭಿಸುತ್ತಿಲ್ಲವೆಂದು ತೀವ್ರವಾಗಿ ಖಂಡಿಸಿದರು. ತೇಜಸ್ ಲೋಕೇಶ್‌ಗೌಡ, ದೇವರಾಜ್, ನಜೀಬುಲ್ಲಾ ಮುಂತಾದವರು ಮಾತನಾಡಿ, ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನು ಖಂಡಿಸಿದರು. ಪ್ರತಿಭಟನೆಯಲ್ಲಿ ಕಾವೇರಿ ಕ್ರಿಯಾ ಸಮಿತಿಯ ಶ್ರೀನಿವಾಸ್‌ಗೌಡ, ಬೀರೇಶ್, ಸಂಜಯ್, ನೇಹ, ಆಟೋ ಮಹದೇವ್, ಒ.ಬಿ.ಸಿ ಮೋರ್ಚಾದ ಅಧ್ಯಕ್ಷರಾದ ಜೋಗಿ ಮಂಜು, ದಿನೇಶ್, ರಾಮೇಗೌಡ್ರು ರಘು, ಮಹೇಶ್‌ಗೌಡ, ಹನುಮಂತೇಗೌಡ, ಮಹೇಶ್ ತಲಕಾಡು, ಅಶೋಕ್, ವಿಷ್ಣು ಮುಂತಾದವರಿದ್ದರು.
ಪಕ್ಷಾತೀತ ಸಹಕಾರ ಅಗತ್ಯ
ರಾಜ್ಯದಿಂದ ಸಂಸದರಾಗಿ ಈಗ ಕೇಂದ್ರ ಸಚಿವರಾಗಿರುವ ಹೆಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ನಿರ್ಮಲಾ ಸೀತಾರಾಮನ್ ಅವರು ಮೇಕೆದಾಟು ಯೋಜನೆ ಪೂರ್ಣಗೊಳಿಸುವ ಸಂಪೂರ್ಣ ಜವಾಬ್ದಾರಿ ಹೊರಬೇಕು. ಇದಕ್ಕೆ ಉಳಿದ ಸಂಸದರು ಮತ್ತು ರಾಜ್ಯಸರ್ಕಾರ ಪಕ್ಷಾತೀತವಾಗಿ ಸಹಕರಿಸಬೇಕು. ಜಯಪ್ರಕಾಶ್ (ಜೆಪಿ) ಕಾವೇರಿ ಹೋರಾಟಗಾರರು
0 ಕಾಮೆಂಟ್‌ಗಳು