ನಾಗನಹಳ್ಳಿ ಗ್ರಾಮದಲ್ಲಿ ಆಸ್ತಿಗಾಗಿ ಸಹೋದರನಿಂದಲೇ ಅಣ್ಣನ ಮೇಲೆ ಮಾರಣಾಂತಿಕ ಹಲ್ಲೆ : ದೂರು ಸ್ವೀಕರಿಸಲು ಮೇಟಗಳ್ಳಿ ಪೊಲೀಸರ ವಿಳಂಬ ಧೋರಣೆ ಆರೋಪ
ಮೇ 30, 2024
ಮಲ ಸಹೋದರನ ಬೆರಳು ಕಚ್ಚಿ ತುಂಡು ಮಾಡಿದ ಅಣ್ಣ
ಮೈಸೂರು : ಆಸ್ತಿಗಾಗಿ ಸಹೋದರನೇ ತಮ್ಮ ಒಡಹುಟ್ಟಿದ ಸಹೋದರ, ಮಲ ಸಹೋದರ ಹಾಗೂ ಚಿಕ್ಕಮ್ಮನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಘಟನೆಯಲ್ಲಿ ನಾಗನಹಳ್ಳಿ ಗ್ರಾಮದ ಕೃಷ್ಣಪ್ಪ ಅವರ ಮಗ ಮಧುಸೂಧನ್, ಸಾಕು ಮಗ ಶಶಿಕುಮಾರ್ ಮತ್ತು ಕೃಷ್ಣಪ್ಪ ಅವರ ಪತ್ನಿ ಪಾರ್ವತಿ ಅವರ ಸಹೋದರಿ ಭಾಗ್ಯಮ್ಮ ಗಾಯಗೊಂಡಿದ್ದು, ಶಶಿಕುಮಾರ್ ಅವರ ಕೈ ಬೆರಳನ್ನು ಕಚ್ಚಿ ತುಂಡು ಮಾಡಲಾಗಿದೆ. ಗುರುವಾರ ಬೆಳಗ್ಗೆ ಕೃಷ್ಣಪ್ಪ ಮತ್ತು ಅವರ ಪತ್ನಿ ಪಾರ್ವತಿ ದೇವಸ್ಥಾನಕ್ಕೆ ಹೋಗಿದ್ದಾಗ ಹೇಮಂತ್ ಕುಮಾರ್, ಮಹದೇವ, ಪಾಪೇಗೌಡರ ಶಂಕರ, ಭಾಗ್ಯ, ರಶ್ಮಿ, ಅಪೂರ್ವ, ಕೃಷ್ಣ ಮತ್ತು ಮಂಜು ಎಂಬವರು ಏಕಾಏಕಿ ಕೃಷ್ಣಪ್ಪ ಅವರ ಮನೆಗೆ ಬಂದರು. ಈ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ. ಅದೇ ಸಂದರ್ಭದಲ್ಲಿ ತಮ್ಮ ಸಹೋದರಿ ಪಾರ್ವತಿಯನ್ನು ನೋಡಲು ಭಾಗ್ಯಮ್ಮ ಕೃಷ್ಣಪ್ಪ ಅವರ ಮನೆಗೆ ಬಂದಾಗ ಹೇಮಂತ್ ಕುಮಾರ್ ಮತ್ತು ಇತರರು ಇಲ್ಲಸಲ್ಲದ ಖ್ಯಾತೆ ತೆಗೆದು ಭಾಗ್ಯಮ್ಮ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ವಿಷಯ ತಿಳಿದ ಕೃಷ್ಣಪ್ಪ ಅವರ ಸಾಕು ಮಗ ಶಶಿಕುಮಾರ್ ಜಗಳ ಬಿಡಿಸಲು ಮುಂದಾದಾಗ ಅವನ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿ ಆತನ ಬೆರಳು ಕಚ್ಚಿ ತುಂಡರಿಸಲಾಯಿತು. ಈ ವೇಳೆ ಬಂದ ಮಧುಸೂಧನ್ ಅವರ ಮೇಲೂ ಹಲ್ಲೆ ನಡೆಸಲಾಯಿತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಶಶಿಕುಮಾರ್ ಮತ್ತು ಭಾಗ್ಯಮ್ಮ ಅವರ ಮೇಲೆ ಕಲ್ಲಿನಿಂದ ಮನಸೋ ಇಚ್ಛೆ ಹೊಡೆದು, ಶಶಿಕುಮಾರ್ ಅವರ ಕೈ ಬೆರಳನ್ನು ಕಚ್ಚಿ ತುಂಡು ಮಾಡಲಾಯಿತು. ಕೂಡಲೇ ಗಾಯಾಳುಗಳನ್ನು ಕೂಡಲೇ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಹೇಳಲಾಗಿದೆ.
ಘಟನೆ ಕುರಿತು ನಾಗನಹಳ್ಳಿ ಗ್ರಾಮದ ಕೃಷ್ಣಪ್ಪ ಅವರು ಮಾತನಾಡಿ, ನನ್ನ ಆಸ್ತಿಯನ್ನು ಮಕ್ಕಳಿಗೆ ದಾನಪತ್ರದ ಮೂಲಕ ಕೊಟ್ಟಿದ್ದೇನೆ. ನನ್ನ ವಾಸಕ್ಕೆ ಮನೆ ಇಲ್ಲ. ನಾನು ಇರುವ ಮನೆಯನ್ನು ನನ್ನ ಮಗ ಹೇಮಂತ್ ಕುಮಾರ್‌ಗೆ ದಾನ ಮಾಡಿದ್ದು, ಈ ವೇಳೆ ನಾನು ಮತ್ತು ನನ್ನ ಹೆಂಡತಿ ಬದುಕಿರುವ ತನಕ ಮನೆಯಲ್ಲೆ ಇರುತ್ತೇವೆ ಎಂದು ಹೇಳಿದ್ದೇವೆ. ಆದರೆ, ನನ್ನ ಮಗ ಹೇಮಂತ ನಮಗೆ ಹೊಸ ಮನೆ ಕಟ್ಟಿಕೊಡುವುದಾಗಿ ಹೇಳಿದ್ದನು ಮನೆ ಇನ್ನೂ ನಿರ್ಮಾಣ ಹಂತದಲ್ಲಿದೆ. ಅದರಲ್ಲೇ ನಾವು ವಾಸವಿದ್ದೇವೆ. ಈಗ ಏಕಾಏಕಿ ನಾನು ಇಲ್ಲದ ಸಮಯದಲ್ಲಿ ಗುಂಪುಕಟ್ಟಿಕೊಂಡು ಮನೆಗೆ ನುಗ್ಗಿ ನನ್ನ ಮಕ್ಕಳಿಗೆ ಹೊಡೆದಿದ್ದಾನೆ. ಈ ಬಗ್ಗೆ ನಾವು ಪೊಲೀಸರಿಗೆ ತಿಳಿಸಿದರೂ ಅವರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಘಟನೆ ಬೆಳಗ್ಗೆ ೧೦ ಗಂಟೆಗೆ ನಡೆದಿದ್ದರೂ ರಾತ್ರಿ ೧೦ ಗಂಟೆ ತನಕವೂ ನಮ್ಮ ದೂರು ಪಡೆದಿಲ್ಲ ಎಂದು ಆರೋಪಿಸಿದರು. ಅಲ್ಲದೇ ನಮ್ಮ ದಾನಪತ್ರವನ್ನು ರದ್ದು ಮಾಡಿ ನಮ್ಮ ಆಸ್ತಿಯನ್ನು ನಮಗೆ ವಾಪಸ್ ಕೊಡಿಸಬೇಕೆಂದು ಅವರು ಮನವಿ ಮಾಡಿದರು.
0 ಕಾಮೆಂಟ್‌ಗಳು