ವರದಿ: ನಜೀರ್ ಅಹಮದ್, ಪಾಂಡವಪುರ ಮೈಸೂರು : ನಗರದ ಮರಿಮಲ್ಲಪ್ಪ, ಸದ್ವಿದ್ಯಾ, ಡಿ.ಪಾಲ್, ಪೊಲೀಸ್ ಪಬ್ಲಿಕ್ ಸ್ಕೂಲ್ ಹಾಗೂ ಗೀತಾ ಶಿಶು ಶಿಕ್ಷಣ ಸಂಸ್ಥೆ ಸೇರಿದಂತೆ ಬಹುತೇಕ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಹಿಂದಾ ವರ್ಗದ ಮಕ್ಕಳು ಕಡಿಮೆ ಅಂಕ ಪಡೆದಿದ್ದಾರೆಂದು ೯ನೇ ತರಗತಿಯಿಂದ ೧೦ನೇ ತರಗತಿಗೆ ಪ್ರವೇಶ ನಿರಾಕರಿಸಲಾಗುತ್ತಿದ್ದು, ಮಕ್ಕಳ ಶಿಕ್ಷಣದ ಹಕ್ಕನ್ನು ಕಸಿಯಲಾಗುತ್ತಿದ್ದರೂ ಶಿಕ್ಷಣ ಇಲಾಖೆ ಜಾಣ ಕುರುಡು ಪ್ರದರ್ಶಿಸುತ್ತಿದೆ. ಇದನ್ನು ಖಂಡಿಸಿ ಮೇ,೧೭ ರಂದು ಗೀತಾ ಶಿಶು ಶಿಕ್ಷಣ ಸಂಸ್ಥೆ ಪ್ರೌಢಶಾಲೆಗೆ ಮುತ್ತಿಗೆ ಹಾಕಲಾಗುವುದು ಎಂದು ದಸಂಸ ಸಂಚಾಲಕ ಚೋರನಹಳ್ಳಿ ಶಿವಣ್ಣ ಹೇಳಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಗೀತಾ ಶಿಶು ಶಿಕ್ಷಣ ಸಂಸ್ಥೆಯಲ್ಲಿ ವಿಜಯಕುಮಾರ್ ಎಂಬವರ ಮಗ ಜಯಂತ್ ಎಲ್‌ಕೆಜಿಗೆ ಪ್ರವೇಶ ಪಡೆದು ಇದೀಗ ೯ನೇ ತರಗತಿ ಮುಗಿಸಿದ್ದಾನೆ. ಆತ ೯ನೇ ತರಗತಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಾನೆಂದು ಹೇಳಿ ಆತನಿಗೆ ೧೦ನೇ ತರಗತಿ ಪ್ರವೇಶ ನಿರಾಕರಿ ಟಿಸಿ ಪಡೆದುಕೊಂಡು ಬೇರೆ ಕಡೆ ಸೇರಿಸಿಕೊಳ್ಳಿ ಎಂದು ಪೋಷಕರಿಗೆ ಹೇಳಿದ್ದಾರೆ. ಈ ಬಗ್ಗೆ ವಿಜಯಕುಮಾರ್ ಕಳೆದ ಏ.೨೪ ರಂದು ಮೈಸೂರು ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿ ರಾಜು ಅವರಿಗೆ ದೂರು ನೀಡಿದ್ದಾರೆ. ದೂರು ನೀಡಿ ೨೦ ದಿನವಾದರೂ ಬಿಇಓ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಅಧಿಕಾರಿಗಳೆಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಜತೆ ಶಾಮೀಲಾಗಿದ್ದಾರೆ. ಕೂಡಲೇ ಜಯಂತ್ ಎಂಬ ವಿದ್ಯಾರ್ಥಿಗೆ ಅದೇ ಶಾಲೆಯಲ್ಲಿ ಮೇ,೧೬ ರೊಳಗೆ ೧೦ನೇ ತರಗತಿಗೆ ಪ್ರವೇಶ ನೀಡಬೇಕು ಇಲ್ಲದಿದ್ದಲ್ಲಿ ಮೇ,೧೭ ರಂದು ದಸಂಸ ಕಾರ್ಯಕರ್ತರಿಂದ ಗೀತಾ ಶಿಶು ಶಿಕ್ಷಣ ಸಂಸ್ಥೆ ಪ್ರೌಢಶಾಲೆಗೆ ಮುತ್ತಿಗೆ ಹಾಕಲಾಗುವುದು ಎಂದು ಶಿವಣ್ಣ ಎಚ್ಚರಿಕೆ ನೀಡಿದರು. ನಗರದಲ್ಲಿ ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದಾಗಿ ಪೋಷಕರನ್ನು ನಂಬಿಸಿ ಅವರಿಂದ ಲಕ್ಷಾಂತರ ರೂ. ಡೊನೆಷನ್ ಮತ್ತು ಶುಲ್ಕವನ್ನು ಪಡೆದು ಪ್ರವೇಶ ನೀಡುತ್ತಿದ್ದಾರೆ. ಇದೇ ಶಾಲೆಗಳಲ್ಲಿ ಎಲ್‌ಕೆಜಿ ಯಿಂದ ೯ನೇ ತರಗತಿ ವರೆಗೆ ವಿದ್ಯಾಭ್ಯಾಸ ಮಾಡುವ ಮಕ್ಕಳಲ್ಲಿ ವಿಶೇಷವಾಗಿ ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಅವರನ್ನು ೯ನೇ ತರಗತಿಯಲ್ಲಿ ಬೇಕಂತಲೇ ಫೇಲ್ ಮಾಡುವುದು. ಬಳಿಕ ಪೋಷಕರನ್ನು ಶಾಲೆಗೆ ಕರೆಸಿ ನಿಮ್ಮ ಮಗು ಫೇಲ್ ಆಗಿದೆ. ಇಲ್ಲೇ ಓದಿಸುತ್ತೇವೆ ಅಂದ್ರೆ ಈ ವರ್ಷವೂ ೯ನೇ ತರಗತಿಯಲ್ಲಿ ಇರಬೇಕಾಗುತ್ತದೆ. ನೀವು ಬೇರೆ ಕಡೆ ಸೇರಿಸ್ತೀವಿ ಅಂದ್ರೆ ಪಾಸ್ ಮಾಡಿ ಕೊಡ್ತೀವಿ ಎಂದು ಏನೋ ಶಾಲೆಯವರು ಪೋಷಕರ ಮೇಲೆ ಭಾರಿ ಅನುಕಂಪ ತೋರುತ್ತಿದ್ದಾರೆ ಎಂದು ಫೋಸ್ ಕೊಟ್ಟು ವಿದ್ಯಾರ್ಥಿಗೆ ಬಲವಂತದಿಂದ ಟಿಸಿ ಕೊಟ್ಟು ಸಾಗ ಹಾಕುತ್ತಾರೆ. ೯ವರ್ಷ ಅದೇ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಯನ್ನು ಯಾವುದೇ ಮುಲಾಜಿಲ್ಲದೆ ಸಾಗ ಹಾಕುತ್ತಾರೆ. ಇದು ಮಕ್ಕಳ ಶಿಕ್ಷಣ ಹಕ್ಕನ್ನು ಮೊಟಕುಗೊಳಿಸುವ ದಂಧೆಯಾಗಿದ್ದರೂ ಈ ಬಗ್ಗೆ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದರೂ ಅವರು ಯಾವುದೇ ಕ್ರಮ ಕೈಗೊಳ್ಳದೆ ಶಿಕ್ಷಣ ಸಂಸ್ಥೆಗಳ ಜತೆ ಶಾಮೀಲಾಗಿದ್ದಾರೆ ಎಂದು ಕಿಡಿ ಕಾರಿದರು. ಒಂದು ವೇಳೆ ವಿದ್ಯಾರ್ಥಿ ಶಿಕ್ಷಣದಲ್ಲಿ ಹಿಂದುಳಿದಿದ್ದರೆ ಅವರಿಗೆ ವಿಶೇಷ ತರಬೇತಿ ನೀಡುವುದು ಶಿಕ್ಷಣ ಸಂಸ್ಥೆಯ ಕರ್ತವ್ಯವಾಗಿದೆ. ೯ವರ್ಷಗಳ ಕಾಲ ಪೋಷಕರನ್ನು ಸುಲಿಗೆ ಮಾಡಿ, ನಂತರ ೯ನೇ ತರಗತಿಯಲ್ಲಿ ಕಡಿಮೆ ಅಂಕ ಪಡೆದಿದ್ದಾರೆ ಎಂಬ ನೆಪವೊಡ್ಡಿ ವಿದ್ಯಾರ್ಥಿಗಳಿಗೆ ಟಿಸಿ ಕೊಟ್ಟು ಕಳಿಸಿದರೆ. ಅವರ ಮುಂದಿನ ಭವಿಷ್ಯವೇನು? ಯಾವ ಶಾಲೆಯವರು ಪ್ರವೇಶ ನೀಡುತ್ತಾರೆ. ಈ ವಿಚಾರ ಶಿಕ್ಷಣ ಅಧಿಕಾರಿಗಳಿಗೆ ಗೊತ್ತಿದ್ದರೂ ಅವರು ಯಾಕೆ ಮೌನವಹಿಸುವುದು. ಅವರಿಗೆ ಶಿಕ್ಷಣ ಸಂಸ್ಥೆಗಳಿಂದ ಲಂಚ ನೀಡಲಾಗುತ್ತಿದೆಯೇ? ಎಂದು ಶಿವಣ್ಣ ಪ್ರಶ್ನಿಸಿದರು. ಇದು ಅಹಿಂದಾ ವರ್ಗದ ಮಕ್ಕಳನ್ನು ಶಿಕ್ಷಣದಿಂದ ದೂರ ಉಳಿಸುವ ದೊಡ್ಡ ಸಂಚಾಗಿದೆ. ಈ ಘಟನೆಗಳು ಮೈಸೂರಿನ ಎಲ್ಲ ಪ್ರೌಢಶಾಲೆಗಳಲ್ಲೂ ನಡೆಯುತ್ತಿದೆ. ಆದರೇ, ಪೋಷಕರು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಇವರ ವಿರುದ್ಧ ದೂರು ನೀಡುತ್ತಿಲ್ಲ. ಇಂತಹ ಘಟನೆಗಳಿಂದ ನೊಂದ ಪೋಷಕರು ಮತ್ತು ವಿದ್ಯಾರ್ಥಿಗಳು ಕೂಡಲೇ ದಲಿತ ಸಂಘರ್ಷ ಸಮಿತಿಯನ್ನು ಸಂಪರ್ಕಿಸಿದರೆ ಅವರಿಗೆ ನ್ಯಾಯ ಕೊಡಿಸಲಾಗುವುದು ಎಂದು ಶಿವಣ್ಣ ಭರವಸೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ದಸಂಸ ಮುಖಂಡರಾದ ನಟರಾಜು, ಸೋಮನಾಯಕ, ವರುಣಾ ಮಹೇಶ್, ಚಂದ್ರಶೇಖರ್, ದೇವರಾಜು, ದೇವೇಂದ್ರ ಇದ್ದರು.
ಬಡ ವಿದ್ಯಾರ್ಥಿಗಳೇ ಇವರ ಟಾರ್ಗೆಟ್ ಖಾಸಗಿ ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತೇವೆ ಎಂದು ಹೇಳಿ ಪೋಷಕರಿಂದ ಲಕ್ಷಾಂತರ ರೂ. ಡೊನೆಷನ್ ಪಡೆಯುತ್ತಾರೆ. ಮತ್ತೊಂದು ಕಡೆ ಉತ್ತಮ ಶಿಕ್ಷಕರನ್ನು ನೇಮಕ ಮಾಡಿಕೊಳ್ಳದೆ ಕಡಿಮೆ ಸಂಬಳ ನೀಡಿ ಹೊಸಬರನ್ನು ಶಿಕ್ಷಕರನ್ನಾಗಿ ಸೇರಿಸಿಕೊಳ್ಳುತ್ತಾರೆ. ಬಳಿಕ ತಮ್ಮದೇ ವಿದ್ಯಾರ್ಥಿಗಳಿಗೆ ಟ್ಯೂಷನ್‌ಗೆ ಸೇರಿಕೊಳ್ಳುವಂತೆ ಪ್ರೇರೇಪಿಸುತ್ತಾರೆ. ಹಣ ಇದ್ದವರು ಟ್ಯೂಷನ್‌ಗೆ ಕಳಿಸುತ್ತಾರೆ. ಬಡವರು ಕಳಿಸುವುದಿಲ್ಲ. ಟ್ಯೂಷನ್‌ಗಳಿಗೆ ಹೋಗದ ಬಡ ವಿದ್ಯಾರ್ಥಿಗಳೇ ಇವರ ಟಾರ್ಗೆಟ್ ಆಗಿರುತ್ತಾರೆ. ಚೋರನಗಳ್ಳಿ ಶಿವಣ್ಣ, ದಸಂಸ ಹೋರಾಟಗಾರ
0 ಕಾಮೆಂಟ್‌ಗಳು