ಶ್ಯಾದನಹಳ್ಳಿಯಲ್ಲಿ ಪೂರ್ಣಯ್ಯ ನಾಲೆ ಖರಾಬು ಜಮೀನು ಅತಿಕ್ರಮಣ ಆರೋಪ : ಪಂಚಾಯ್ತಿ ಹಾಕಿದ್ದ ಬೋರ್ಡ್ ಕಿತ್ತು ಹಾಕಿದ ಅತಿಕ್ರಮಣಕಾರರು

ಮೈಸೂರು : ತಾಲ್ಲೂಕಿನ ನಾಗನಹಳ್ಳಿ ಗ್ರಾಪಂ ವ್ಯಾಪ್ತಿಯ ಶ್ಯಾದನಹಳ್ಳಿ ಗ್ರಾಮದಲ್ಲಿ ಪೂರ್ಣಯ್ಯ ನಾಲೆಗೆ ಸೇರಿದ ಸುಮಾರು ೪೮೦೦ ಚದರ ಅಡಿ ಖರಾಬು ಜಾಗದಲ್ಲಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಮನೆಯನ್ನು ಕಟ್ಟುತ್ತಿದ್ದಾರೆಂದು ಗ್ರಾಮದ ಮುಖಂಡರು ಆರೋಪಿಸಿದ್ದಾರೆ.
ಸದರಿ ಜಾಗವನ್ನು ಅಂಬೇಡ್ಕರ್ ಸಮುದಾಯ ಭವನಕ್ಕೆ ಕಾದಿರಿಸಬೇಕೆಂದು ಪಂಚಾಯ್ತಿಗೆ ಸಾರ್ವಜನಿಕರು ಕೋರಿಕೊಂಡಿದ್ದಾರೆ. ಅಲ್ಲದೇ, ಇದು ಬೆಲೆ ಬಾಳುವ ನಿವೇಶನ ಆಗಿದ್ದು, ಕೆಲವು ಖಾಸಗಿ ವ್ಯಕ್ತಿಗಳು ದಬ್ಬಾಳಿಕೆ ನಡೆಸಿ ಈ ಜಾಗದಲ್ಲಿ ಅಕ್ರಮವಾಗಿ ಮನೆ ಕಟ್ಟುತ್ತಿದ್ದಾರೆ ಎಂದು ಗ್ರಾಪಂ ಸದಸ್ಯರಾದ ದುರ್ಗಮ್ಮ, ಮಾಜಿ ಸದಸ್ಯೆ ಮಂಜುಳ ಮತ್ತು ಗ್ರಾಮದ ಮುಖಂಡರಾದ ತಮ್ಮಯ್ಯ ಆರೋಪಿಸಿದರು.

ಈ ಬಗ್ಗೆ ನಾಗನಹಳ್ಳಿ ಗ್ರಾಪಂಗೆ ದೂರು ನೀಡಿದಾಗ ತಕ್ಷಣ ಸ್ಥಳಕ್ಕೆ ಬಂದ ಗ್ರಾಪಂ ಕಾರ್ಯದರ್ಶಿ ಚನ್ನಪ್ಪ ಈ ಸ್ವತ್ತು ಪೂರ್ಣಯ್ಯ ನಾಲೆಗೆ ಸೇರಿದ ಖರಾಬು ಜಾಗ ಅತಿಕ್ರಮ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಬೋರ್ಡ್ ಬರೆಸಿ ಹಾಕಿದರು. ಆದರೇ, ಕೆಲವೇ ನಿಮಿಷಗಳಲ್ಲಿ ಕೆಲವು ವ್ಯಕ್ತಿಗಳು ಸ್ಥಳಕ್ಕೆ ಆಗಮಿಸಿ ಪಂಚಾಯ್ತಿ ಕಾರ್ಯದರ್ಶಿ ಬರೆಸಿದ್ದ ಬೋರ್ಡ್ ಅನ್ನು ತೆರವು ಮಾಡಿ ಇದು ನಮ್ಮದೇ ಜಾಗ ಕೋರ್ಟ್‌ನಿಂದ ಸ್ಟೇ ತಂದು ಕೆಲಸ ನಿಲ್ಲಿಸಿ ಎಂದು ಕಾರ್ಯದರ್ಶಿಗೆ ದಬಾಯಿಸಿ ಕೆಲಸ ಮುಂದುವರಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.  
ಘಟನಾ ಸ್ಥಳಕ್ಕೆ ಕರ್ನಾಟಕ ರಾಜ್ಯ ಡಾ.ಬಿ.ಆರ್. ಅಂಬೇಡ್ಕರ್ ಆದಿ ದ್ರಾವಿಡ  ಪೌರ ಕಾರ್ಮಿಕ ಯುವಕರ ಅಭಿವೃದ್ಧಿ ಮಹಾ ಸಂಘದ 
ಗೌರವ ಕಾರ್ಯದರ್ಶಿ ಕೆ. ನಂಜಪ್ಪ ಬಸವನಗುಡಿ ಆಗಮಿಸಿ ಈ ಭಾಗದಲ್ಲಿ ಸುಮಾರು ೨೦೦ ಕ್ಕಿಂತಲೂ ಅಧಿಕ ದಲಿತ ಕುಟುಂಬದವರು, ನಾಯಕ ಸಮುದಾಯದವರು ಮತ್ತು ಇತರೆ ಹಿಂದುಳಿದ ಜನಾಂದವರು ವಾಸಿಸುತ್ತಿದ್ದಾರೆ. ಇವರೆಲ್ಲರೂ ಕೂಲಿ ಕಾರ್ಮಿಕರು. ಇವರಿಗೆ ಇಲ್ಲಿ ಸಮುದಾಯ ಭವನದ ಅಗತ್ಯವಿದೆ. ಈ ಹಿಂದೆಯೂ ನಾವು ಇಲ್ಲಿ ಸಮುದಾಯ ಭವನ ನಿರ್ಮಿಸಬೇಕು. ಇದಕ್ಕಾಗಿ ಈ ಜಾಗವನ್ನು ಕಾದಿರಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೆವು. ಆದರೇ, ಕೆಲವು ವ್ಯಕ್ತಿಗಳು ಇದನ್ನು ಕಬಳಿಸಲು ಸಂಚು ಮಾಡಿದ್ದಾರೆ ಈ ಬಗ್ಗೆ ಜಿಲ್ಲಾಡಳಿತ ತುರ್ತು ಕ್ರಮ ಕೈಗೊಂಡು ಜಾ ಗವನ್ನು ಬಲಾಢ್ಯರಿಂದ ರಕ್ಷಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು. 


 
 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು