ಮದ್ದೂರು : ಮೊಬೈಲ್, ಟಿವಿ, ಮತ್ತಿತರ ಆಧುನಿಕ ಉಪಕರಣಗಳ ಭರಾಟೆಯಲ್ಲಿ ನಶಿಸುತ್ತಿರುವ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಕಿಶೋರ ಕೀರ್ತನ ಸಂಕೀರ್ತನ ೨೦೨೫ ಕಾರ್ಯಕ್ರಮದ ಮೂಲಕ ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಮುಂದಿನ ಪೀಳಿಗೆಯಾದ ನಮ್ಮ ಮಕ್ಕಳಲ್ಲಿ ಸಂಗೀತ ಮತ್ತು ಸಾಹಿತ್ಯ ಸಂಸ್ಕೃತಿಯನ್ನು ಬಿತ್ತುತ್ತಿರುವುದು ಶ್ಲಾಘನೀಯ ಎಂದು ಸಾಹಿತಿ ಡಾ,ಮಹೇಶ್ ಚಿಕ್ಕೆಲ್ಲೂರು ಹೇಳಿದರು.
ತಾಲ್ಲೂಕಿನ ಸೋಮನಹಳ್ಳಿಯಲ್ಲಿರುವ ಗೆಜ್ಜಲಗೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ ಏರ್ಪಡಿಸಿದ್ದ ಕಿಶೋರ ಕೀರ್ತನ ಸಂಕೀರ್ತನ ೨೦೨೫ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಕನ್ನಡ ಕೀರ್ತನೆಗಳು ಅಂದರೆ ದೇವರನ್ನು ಸ್ತುತಿಸುವ, ಭಕ್ತಿ ಮತ್ತು ವೈರಾಗ್ಯವನ್ನು ಸಾರುವ, ಸಂಗೀತದೊಂದಿಗೆ ಹಾಡುವ ಹಾಡುಗಳಾಗಿವೆ, ಇವುಗಳನ್ನು ಸಂತರು, ಶರಣರು ಮತ್ತು ಕವಿಗಳು ರಚಿಸಿದ್ದಾರೆ;
ಮುಖ್ಯವಾಗಿ ದಾಸ ಸಾಹಿತ್ಯದ ಭಾಗವಾಗಿವೆ, ಈ ಕೀರ್ತನೆಗಳು ಕರ್ನಾಟಕದ ಭಕ್ತಿ ಪರಂಪರೆಯ ಹೃದಯಭಾಗವಾಗಿವೆ. ದೇವರನ್ನು ಸಾಕ್ಷಾತ್ಕರಿಸಿಕೊಳ್ಳಲು ಮಾರ್ಗವಾಗಿ ಈ ಹಾಡುಗಳು ರಚನೆಯಾಗಿವೆ. ಇದು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಭಾಗವಾಗಿದ್ದು, ಇವುಗಳನ್ನು ನಮ್ಮ ಮುಂದಿನ ಪೀಳಿಗೆಗೂ ಕೊಂಡೊಯ್ಯಬೇಕು. ಸಾಮಾನ್ಯ ಜನರಿಗೆ ಅರ್ಥವಾಗುವಂತಹ ಸರಳ ಕನ್ನಡ ಪದಗಳ ಬಳಕೆ, ಪ್ರತಿ ಕೀರ್ತನೆಯ ಕೊನೆಯಲ್ಲಿ ಕವಿಗಳ ಅಂಕಿತ ನಾಮ, ಇರುವ ಈ ಕೀರ್ತನೆಗಳು, ಗಮಕಗಳೊಂದಿಗೆ ಹಾಡಲು ಸೂಕ್ತವಾದ ರಾಗ ಮತ್ತು ತಾಳದ ರಚನೆಯಾಗಿವೆ. ಇವುಗಳು ಇಂದು ಭಕ್ತಿ ಗೀತೆಗಳಾಗಿ, ಜಾನಪದ ಸಂಗೀತವಾಗಿ, ಮತ್ತು ಕರ್ನಾಟಕದ ಸಾಂಸ್ಕೃತಿಕ ಪರಂಪರೆಯಾಗಿ ಉಳಿದಿವೆ.
ಧಾರ್ಮಿಕ-ಸಾಮಾಜಿಕ ಬದಲಾವಣೆಗಳಿಗೆ ಕಾರಣವಾದ ಭಕ್ತಿಚಳುವಳಿಗೆ ಅದರದೇ ಆದ ಕಲಾತ್ಮಕ ಆಯಾಮಗಳೂ ಇದ್ದು, ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ವಚನಗಳು, ಕೀರ್ತನೆಗಳು ಮತ್ತು ತತ್ವದಪದಗಳು ಈ ಗುಂಪಿಗೆ ಸೇರುತ್ತವೆ. ಇವು ದೇವರಿಗೆ ಮರುಳಾದ ಕವಿಮನಸ್ಸುಗಳು, ತಮ್ಮ ಭಾವನೆಗಳನ್ನು ಗೇಯವಾದ ಕವಿತೆಗಳಲ್ಲಿ ತೋಡಿಕೊಳ್ಳುವ ಪ್ರಯತ್ನಗಳು. ಕೀರ್ತನೆ ಎಂಬ ಪದದ ವಾಚ್ಯಾರ್ಥವು ಹೊಗಳುವುದು ಎಂದರ್ಥ ಎಂದು ಡಾ.ಮಹೇಶ್ ಚಿಕ್ಕೆಲ್ಲೂರು ವಿವರಿಸಿದರು.
ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿ ಸದಸ್ಯರಾದ ಪದ ದೇವರಾಜು ಮಾತನಾಡಿ, ಕಥಾ ಕೀರ್ತನ ಕರ್ನಾಟಕದಲ್ಲಿ ನಶಿಸಿಹೋಗುತ್ತಿರುವ ಒಂದು ಕಲೆಯಾಗಿದೆ. ಈ ಅತ್ಯುತ್ತಮವಾದ ಕಲೆಯನ್ನು ಹಲವಾರು ದಾಸ ಶ್ರೇಷ್ಟರು ನಮಗೆ ಬಿಟ್ಟು ಹೋಗಿದ್ದಾರೆ. ಇದನ್ನು ಉಳಿಸುವ ನಿಟ್ಟಿನಲ್ಲಿ ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿ ಮಂಡ್ಯ ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಕಥಾ ಕೀರ್ತನೆಗಳ ಬಗ್ಗೆ ತರಬೇತಿ ನೀಡಿ ಅವರಿಗೆ ವೇದಿಕೆ ಒದಗಿಸಿದೆ ಎಂದು ಹೇಳಿದರು.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷರಾದ ಡಾ.ಶುಭ ಧನಂಜಯ್ಯ, ಸದಸ್ಯರಾದ ಕೋಲಾರ ರಾಜಪ್ಪ, ಹೋರಾಟಗಾರ ಕನ್ನಡ ಶಫಿ ಮತ್ತಿತರರು ಮಾತನಾಡಿದರು. ಇದೇ ವೇಳೆ ಕುಮಾರಿ ಮೋನಿಕಾ ಶ್ಯಾಮರಾವ್ ಅವರು ಅತ್ಯುತ್ತಮವಾಗಿ ಕೀರ್ತನಾ ಕಾರ್ಯಕ್ರಮ ನಡೆಸಿಕೊಟ್ಟರು.
ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಆಶಾ ಮತ್ತಿತರರು ಇದ್ದರು.
ಹರಿದಾಸ ಸಾಹಿತ್ಯವು ಹನ್ನೆರಡನೆಯ ಶತಮಾನದಲ್ಲಿ ತೀವ್ರವಾಗಿ ಬೆಳಗಿದ ಶಿವಶರಣರ ಚಳುವಳಿ. ಜೈನಧರ್ಮ ಮತ್ತು ವೀರಶೈವ ಧರ್ಮಗಳು ಒಡ್ಡಿದ ಸವಾಲುಗಳ ಪರಿಣಾಮವಾಗಿ, ವೈದಿಕ ಧರ್ಮವು ಸಮುದಾಯಗಳ ಮೇಲಿನ ತನ್ನ ಹಿಡಿತವನ್ನು ಕಳೆದುಕೊಳ್ಳುತ್ತಿತ್ತು. ಆದ್ದರಿಂದ ಜನರನ್ನು ತಲುಪುವ ಮತ್ತು ಒಲಿಸುವ ಹೊಸ ಬಗೆಗಳನ್ನು ಕಂಡುಕೊಳ್ಳುವುದರ ಮೂಲಕ ತನ್ನ ಅಡಿಪಾಯವನ್ನು ವಿಸ್ತರಿಸುವ ಅಗತ್ಯ ಇತ್ತು. ಇಂತಹ ಸನ್ನಿವೇಶದಲ್ಲಿ ಸಂಸ್ಕೃತದ ಬಗೆಗಿನ ಎರಡರಿಯದ ನಿಷ್ಠೆಯಿಂದ ಹೆಚ್ಚಿನ ಉಪಯೋಗವಿರಲಿಲ್ಲ. ಆದ್ದರಿಂದಲೇ ದಾಸಚಳುವಳಿ ಮತ್ತು ದಾಸಸಾಹಿತ್ಯಗಳು ಕಾಣಿಸಿಕೊಂಡವು. ದೇವರ ಮಹಿಮೆಯನ್ನು ಹಾಡಿಹೊಗಳುವ ಅಂತೆಯೇ ಹಿಂದೂ ಧರ್ಮದ ತಾತ್ವಿಕ/ನೈತಿಕ ಪರಿಕಲ್ಪನೆಗಳನ್ನು ಜನರಿಗೆ ಬಿತ್ತರಿಸುವ ಅನೇಕ ಹಾಡುಗಳು ರಚಿತವಾದವು. ಇವುಗಳನ್ನು ಕೀರ್ತನೆಗಳು, ದಾಸರಪದಗಳು ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ. ಇವುಗಳನ್ನು ಉಳಿಸುವುದು ನಮ್ಮ ಕರ್ತವ್ಯ.
ಡಾ.ಮಹೇಶ್ ಚಿಕ್ಕೆಲ್ಲೂರು, ಸಾಹಿತಿ
