ಮೈಸೂರು ವಕೀಲರ ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿದ ಹೆಮ್ಮೆ ನಮಗಿದೆ.

ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷರಾದ ಮಹದೇವಸ್ವಾಮಿ, ಕಾರ್ಯದರ್ಶಿ ಉಮೇಶ್ ಹಾಗೂ ಇತರ ಸದಸ್ಯರ ಜಂಟಿ ಹೇಳಿಕೆ

ನಜೀರ್ ಅಹಮದ್, (ರೈತನಾಡು ವರದಿ)
ಮೈಸೂರು : ಮೈಸೂರು ವಕೀಲರ ಸಂಘದ ೨೦೨೨-೨೩ನೇ ಸಾಲಿನ ಆಡಳಿತ ಮಂಡಳಿಯು ಸಂಘದ ಎಲ್ಲ ಸದಸ್ಯರ ಸಹಕಾರದೊಂದಿಗೆ ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿದಿದೆ. ಸಂಘದ ಕಾರ್ಯವೈಖರಿ ಕುರಿತು ನಮಗೆ ಹೆಮ್ಮೆ ಎನಿಸಿದೆ ಎಂದು ವಕೀಲರ ಸಂಘದ ಕಾರ್ಯದರ್ಶಿ ಎಸ್.ಉಮೇಶ್ ಹೇಳಿದರು.
ಭಾನುವಾರ ನಡೆದ ಮೈಸೂರು ವಕೀಲರ ಸಂಘದ ಚುನಾವಣೆ ವೇಳೆ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ನಮ್ಮ ಆಡಳಿತ ಮಂಡಳಿ ಹಾಗೂ ರಾಜ್ಯ ಸಮಿತಿ ಸದಸ್ಯರಾದ ಚಂದ್ರಮೌಳಿ ಅವರ ಸಹಕಾರದೊಂದಿಗೆ ವಕೀಲಯ ಹಿತವನ್ನು ಕಾಪಾಡುವ ದೃಷ್ಟಿಯಿಂದ ಅನೇಕ ಹೋರಾಟಗಳನ್ನು ನಡೆಸಿತು. ಚಿಕ್ಕಮಗಳೂರಿನಲ್ಲಿ ನಡೆದ ವಕೀಲರ ಮೇಲಿನ ಹಲ್ಲೆ ಸಂಬಂಧ ನಮ್ಮ ದೊಡ್ಡಮಟ್ಟದ ಹೋರಾಟ ರಾಜ್ಯದ ಗಮನ ಸೆಳೆದಿತ್ತ. ಅಲ್ಲದೇ ಸರ್ಕಾರದಿಂದ ವಕೀಲರ ಸಂರಕ್ಷಣಾ ಕಾಯ್ದೆ ಅನುಷ್ಠಾನಗೊಳ್ಳುವಲ್ಲಿಯೂ ನಮ್ಮ ಸಂಘದ ಪಾತ್ರ ದೊಡ್ಡದು ಎಂದರು.
ವಕೀಲರ ಸಂಘದ ಎಲ್ಲ ಸದಸ್ಯರ ಸಹಕಾರದಿಂದ ಸಾಧ್ಯವಾದಷ್ಟು ಅಭಿವೃದ್ಧಿ ಮಾಡಲಾಗಿದೆ. ಇದರಲ್ಲಿ ಪ್ರಮುಖವಾಗಿ ಹಳೆ ನ್ಯಾಯಾಲಯ ಆವರಣದಲ್ಲಿ ಸುಸಜ್ಜಿತವಾದ ಲೈಬ್ರರಿ ನಿರ್ಮಾಣ, ಮಹಿಳಾ ವಕೀಲರ ವಿಶ್ರಾಂತಿ ಕೊಠಡಿ ಹಾಗೂ ನೂತನ ಶೌಚಾಲಯದ ನಿರ್ಮಾಣ ಸೇರಿದಂತೆ ಹಲವು ಕಾರ್ಯಕ್ರಮ ನಡೆಸಿದ್ದೇವೆ ಎಂದರು.
ಸಂಘದ ಅದ್ಯಕ್ಷರಾದ ಮಹದೇವಸ್ವಾಮಿ ಮಾತನಾಡಿ, ಪ್ರಸ್ತುತ ನಡೆಯುತ್ತಿರುವ ಚುನಾವಣೆಯಲ್ಲಿ ನಮಗೆ ಮತ್ತೊಮ್ಮೆ ಸ್ಪರ್ಧೆ ಮಾಡುವಂತೆ ಒತ್ತಡ ಇತ್ತಾದರೂ ಹೊಸಬರಿಗೆ ಅವಕಾಶ ಮಾಡಿಕೊಡಲು ನಮ್ಮ ಸಮಿಯಲ್ಲಿನ ೧೬ ಜನರ ಪೈಕಿ ಯಾರೊಬ್ಬರೂ ಸ್ಪರ್ಧೆ ಮಾಡುತ್ತಿಲ್ಲ. ಹಾಲಿ ಚುನಾವಣೆಯಲ್ಲಿ ೪೫ ಜನ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. 
ಸಂಘದಲ್ಲಿ ೩೩೬೧ ವಕೀಲರು ಮತದಾನ ಮಾಡಲಿದ್ದು, ೮೦೦ ಜನ ಮಹಿಳಾ ಸದಸ್ಯರು ಇದ್ದಾರೆ. ಚುನಾವಣಾ ಪ್ರಕ್ರಿಯೆಯಲ್ಲಿ ೪೫ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ೯ ಬೂತ್ ಇರಿಸಿದೆ. ಬೆಳಗ್ಗೆ ೯ ಗಂಟೆಗೆ ಮತದಾನ ಆರಂಭವಾಗಿದೆ ರಾತ್ರಿ ೧೦ ಗಂಟೆಗೆ ಫಲಿತಾಂಶ ದೊರೆಯುತ್ತದೆ ಎಂದರು.
ಅಧ್ಯಕ್ಷ ಸ್ಥಾನಕ್ಕೆ ೩ ಜನ, ಉಪಾಧ್ಯಕ್ಷ ಸ್ಥಾನಕ್ಕೆ ೫, ಕಾರ್ಯದರ್ಶಿ ಸ್ಥಾನಕ್ಕೆ ೨
ಪುರುಷರ ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ೩, ಮಹಿಳಾ ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ೬, ಖಜಾಂಚಿ ಸ್ಥಾನಕ್ಕೆ ೪, ಹಿರಿಯ ವಕೀಲರ ಸಮಿತಿ ಸದಸ್ಯ ಸ್ಥಾನಕ್ಕೆ ೯ ಮತ್ತು ಕಿರಿಯ ವಕೀಲರ ಸಮಿತಿ ಸ್ಥಾನಕ್ಕೆ ೧೩ ಜನ ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಿದ್ದಾರೆ. ಈ ಪೈಕಿ ೯ ಜನ ಮಹಿಳಾ ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಿರುವುದು ವಿಶೇಷವಾಗಿದೆ ಎಂದರು.
ಹಿರಿಯ ಮತ್ತು ಕಿರಿಯ ವಕೀಲರ ಸಮಿತಿ ಸದಸ್ಯರಾಗಿ ತಲಾ ೫ ಜನ ಆಯ್ಕೆಯಾದರೆ ಉಳಿದಂತೆ ತಲಾ ಒಬ್ಬರು ಆಯ್ಕೆಯಾಗುತ್ತಾರೆ ಎಂದು ಮಹದೇವಸ್ವಾಮಿ ವಿವರಿಸಿದರು.
ಭಾನುವಾರ ಮೈಸೂರು ವಕೀಲರ ಸಂಘದ ನೂತನ ಆಡಳಿತ ಮಂಡಳಿ ಆಯ್ಕೆಗೆ ಮತದಾನ ನಡೆಯುತ್ತಿದ್ದು, ಎಲ್ಲರಿಗೂ ಶುಭವಾಗಲಿ. ನೂತನ ಆಡಳಿತ ಮಂಡಳಿಗೆ ನಾವು ಎಲ್ಲ ರೀತಿಯಲ್ಲೂ ಸಹಕಾರ ನೀಡುತ್ತೇವೆ ಎಂದರು. 
ಈ ಸಂದರ್ಭದಲ್ಲಿ ಮಹಿಳಾ ಜಂಟಿ ಕಾರ್ಯದರ್ಶಿ ಭಾಗ್ಯಮ್ಮ, ಕಿರಿಯ ವಕೀಲರ ಕಾರ್ಯಕಾರಿ ಸಮಿತಿ ಸದಸ್ಯೆ ಎಂ.ಎಸ್.ಮೈತ್ರಿ, ಹಿರಿಯ ವಕೀಲರ ಕಾರ್ಯಕಾರಿ ಸಮಿತಿ ಸದಸ್ಯರಾದ ಗುರು, ಖಜಾಂಚಿ ಹೆಚ್.ಎಸ್.ಮಹದೇವಸ್ವಾಮಿ ಮತ್ತಿತರರು ಇದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು