ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ದಲಿತ ವಿರೋಧಿ : ಶೈಲೇಂದ್ರ ಆರೋಪ


 (ರೈತನಾಡು ವರದಿ)
ಮೈಸೂರು : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲಾ ದಲಿತ ಸಮುದಾಯದ ನಾಯಕರಿಗೆ ಮುಖ್ಯಮಂತ್ರಿ ಆಗುವ ಅವಕಾಶಗಳು ಇದ್ದರೂ ಸಿಎಂ ಸಿದ್ದರಾಮಯ್ಯ ಮಾತ್ರ ಅದಕ್ಕೆ ಆಸ್ಪದ ನೀಡದೆ ತಾವೇ ಅಧಿಕಾರಕ್ಕೆ ಅಂಟಿಕೊಂಡಿದ್ದಾರೆ ಇವರು ದಲಿತ ವಿರೋಧಿ ಎಂದು ಮಾಜಿ ಡೆಪ್ಯೂಟಿ ಮೇಯರ್ ಹಾಗೂ ಮೈಸೂರು ಜಿಲ್ಲಾ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷರಾದ ಶೈಲೇಂದ್ರ ಆರೋಪಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ೨೦೧೩ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಜಿ.ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಆಗುವ ಅವಕಾಶ ಇತ್ತು. ಇದನ್ನು ತಪ್ಪಿಸಲು ಸಿದ್ದರಾಮಯ್ಯ ಅವರನ್ನು ಕುತಂತ್ರದಿಂದ ಸೋಲಿಸಿದರು ಎಂದರು.
ಅಲ್ಲದೇ ಮಲ್ಲಿಕಾರ್ಜುನ ಖರ್ಗೆ ಅವರಂತಹ ನಾಯಕರನ್ನು ಪ್ರಧಾನ ಮಂತ್ರಿ ಹುದ್ದೆಗೆ ಅರವಿಂದ ಕೇಜ್ರಿವಾಲ್ ಮತ್ತು ಮಮತಾ ಬ್ಯಾನರ್ಜಿ ಅವರಂತಹ ರಾಷ್ಟ್ರ ನಾಯಕರು ಸೂಚಿಸಿದರೆ, ಸಿದ್ದರಾಮಯ್ಯ ಮಾತ್ರ ರಾಹುಲ್ ಗಾಂಧಿ ಹೆಸರನ್ನು ಸೂಚಿಸಿದರು. ಸಿದ್ದರಾಮಯ್ಯ ಅವರು ಸ್ವತಃ ತಾವೊಬ್ಬ ದಲಿತ ಎಂದು ಹೇಳಿಕೊಂಡರೂ ಅವರು ವಾಸ್ತವದಲ್ಲಿ ಒಬ್ಬ ದಲಿತ ವಿರೋಧಿ ಎಂದು ದೂರಿದರು.
ಕಾಂಗ್ರೆಸ್ ಪಕ್ಷ ಚುನಾವಣೆಗೂ ಮುನ್ನ ದಲಿತ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಎಂದು ಘೊಷಣೆ ಮಾಡುತ್ತದೆ. ಆದರೇ, ಚುನಾವಣೆ ನಂತರ ಅದನ್ನು ಮರೆಯುತ್ತದೆ. ಇವರಿಗೆ ದಲಿತರು ಕೇವಲ ಓಟ್ ಬ್ಯಾಂಕ್ ಆಗಿದ್ದಾರೆ ಅಷ್ಟೇ ಎಂದು ಕಿಡಿಕಾರಿದರು.
ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದಲ್ಲಿದ್ದರೆ ಮುಖ್ಯಮಂತ್ರಿ ಸ್ಥಾನ ಕೇಳುತ್ತಾರೆ ಎಂದು ಅವರನ್ನು ಕೇಂದ್ರದ ರಾಜಕಾರಣಕ್ಕೆ ಕಳಿಸಲಾಯಿತು. ನಿಮಗೆ ದಲಿತರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ದಲಿತ ಮುಖಂಡರಿಗೆ ಮುಖ್ಯಮಂತ್ರಿ ಸ್ಥಾನಕ್ಕೆ ಅವಕಾಶ ಮಾಡಿಕೊಡಬೇಕು ಎಂದರು.
ರಾಜ್ಯದಲ್ಲಿ ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಎಸ್‌ಸಿಎಸ್‌ಪಿ/ಟಿಎಸ್‌ಪಿ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಲಾಗಿದೆ. ಇದರಿಂದ ದಲಿತರ ಅಭಿವೃದ್ಧಿಗೆ ಹಿನ್ನಡೆಯಾಗಿದೆ.
ರಾಜ್ಯದಲ್ಲಿ ಇಂದಿರಾ ಕಾಂಗ್ರೆಸ್ ಆಡಳಿತದಲ್ಲಿ ಇಲ್ಲ. ಏನಿದ್ದರೂ ಸಿದ್ದರಾಮಯ್ಯ ಕಾಂಗ್ರೆಸ್ ಆಡಳಿತದಲ್ಲಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೇವಲ ನೆಪ ಮಾತ್ರಕ್ಕೆ ಇದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬೆಂಬಲಿಗರಿಗೆ ಮಾತ್ರ ಅವಕಾಶಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.   
ತಮ್ಮ ೧೦ ವರ್ಷದ ಆಡಳಿತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಒಬ್ಬ ಬುಡಕಟ್ಟು ಸಮುದಾಯದ ಮಹಿಳೆಗೆ ರಾಷ್ಟಪತಿ ಹುದ್ದೆಗೆ ಆಯ್ಕೆ ಮಾಡಿದ್ದು ವಿಶೇಷವಾಗಿದೆ. ಆರ್ಟಿಕಲ್ ೩೭೦ ರದ್ದತಿ ಮಾಡಿದ್ದರಿಂದ ದಲಿತರಿಗೆ ನ್ಯಾಯಾಂಗ ಮತ್ತು ಆಡಳಿದಲ್ಲಿ ಹೆಚ್ಚು ಸ್ಥಾನ ಪಡೆಯಲು ಅವಕಾಶ ಒದಗಿದೆ ಎಂದರು.
ಇದೇ ಸಂದರ್ಭದಲ್ಲಿ ನೂತನ ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿಗೆ ಅವಕಾಶ ನೀಡಲಿಲ್ಲ ಏಕೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶೈಲೇಂದ್ರ ಅವರು, ಆಹ್ವಾನ ನೀಡಲಾಗಿತ್ತು. ರಾಷ್ಟ್ರಪತಿಯವರ ಆರೋಗ್ಯ ಸರಿ ಇರಲಿಲ್ಲ ಅದಕ್ಕಾಗಿ ಅವರು ಉದ್ಘಾಟನೆಗೆ ಬರಲಿಲ್ಲ ಎಂದು ಹೇಳಿದರು.
ಹಾಗೆಯೇ ಬಿಜೆಪಿ ಪಕ್ಷದ ಮಾಜಿ ಸಂಸದ ಅನಂತ್ ಕುಮಾರ್ ಹೆಗ್ಗಡೆ ಸಂವಿಧಾನ ಬದಲಾಯಿಸುವ ಬಗ್ಗೆ ಮಾತನಾಡುತ್ತಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಶೈಲೇಂದ್ರ ಅದು ಅವರ ವೈಯುಕ್ತಿಕ ಹೇಳಿಕೆ ಎಂದರು.
ಈ ಸಂದರ್ಭದಲ್ಲಿ ಮೈಸೂರು ನಗರ ಜಿಲ್ಲಾ ಮಾಧ್ಯಮ ಪ್ರಮುಖ್ ಮಹೇಶ್ ರಾಜೇ ಅರಸ್, ಮೈಸೂರು ನಗರ ಜಿಲ್ಲಾ ಎಸ್ ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಕಾರ್ತಿಕ್ ಮರಿಯಪ್ಪ, ಸ್ವಾಮಿ, ನಗರ ಪಾಲಿಕೆ ಮಾಜಿ ಸದಸ್ಯರಾದ ಕೃಷ್ಣ, ಮುರಳೀಧರ ಉಪಸ್ಥಿತರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು