’ಸಿದ್ದರಾಮಯ್ಯ ಜನಪ್ರಿಯತೆ ಕಂಡು ಕೆಲವರಿಗೆ ಹೊಟ್ಟೆ ಉರಿ’

ಮೈಸೂರು : ಕಾಂಗ್ರೆಸ್ ಪಕ್ಷದ ಕೃಪೆಯಿಂದ ಹೆಚ್.ಡಿ.ದೇವೇಗೌಡರು ಪ್ರಧಾನಿ ಹುದ್ದೆ ಮತ್ತು ಅವರ ಪುತ್ರ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸುವ ಭಾಗ್ಯ ದೊರಕಿದ್ದನ್ನು ನೆನಪಿನಲ್ಲಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗರ್ವಭಂಗ ಕುರಿತು ಮಾತನಾಡಬೇಕು ಎಂದು ನಗರ ಕಾಂಗ್ರೆಸ್ ವಕ್ತಾರ ಎಸ್.ರಾಜೇಶ್ ಹೇಳಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಜನಪ್ರಿಯತೆ ಕೆಲವರಿಗೆ ಸಹಿಸಲು ಆಗುತ್ತಿಲ್ಲ. ಏನಾದರೂ ಮಾಡಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕೆಂದು ಹುನ್ನಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಹಣದ ಮದ ಇದೆ ಎನ್ನುವ ದೇವೇಗೌಡರು ತಮ್ಮ ಪುತ್ರ ಕುಮಾರಸ್ವಾಮಿ ಅವರ ಸರ್ಕಾರ ಕೆಡವಲು ಇದೇ ಬಿಜೆಪಿಯವರು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಗೆ ಹಣ ಕೊಟ್ಟು ಖರೀದಿ ಮಾಡಿದಾಗ ಗೌಡರಿಗೆ ಬಿಜೆಪಿಯವರ ಹಣದ ಮದ ಕಾಣಲಿಲ್ಲವೇ? ಎಂದು ಟೀಕಿಸಿದರು.
ರಾಜ್ಯದಲ್ಲಿ ಬರಗಾಲವಿದೆ. ಜನ ಜಾನುವಾರುಗಳಿಗೆ ಕುಡಿಯುವ ನೀರು, ಮೇವು ಒದಗಿಸಲು ಮತ್ತು ರಾಜ್ಯಕ್ಕೆ ಕೇಂದ್ರದಿಂದ ಬರಬೇಕಿರುವ ತೆರಿಗೆ ಬಾಕಿ ಹಣವನ್ನು ಕೊಡಿಸಲು ಜೆಡಿಎಸ್ ವರಿಷ್ಠನಾಯಕರು ಮನಸ್ಸು ಮಾಡಲಿಲ್ಲ. ಮೇಕೆದಾಟು ಬಗ್ಗೆ ಕೇಂದ್ರದಲ್ಲಿ ದನಿ ಎತ್ತಲಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಸಂಭವ ಇದೆಯಾದ್ದರಿಂದ ಕೆಲವು ನಾಯಕರು ಸಿದ್ದರಾಮಯ್ಯ ವಿರುದ್ಧ ಹೊಟ್ಟೆವುರಿ ಪಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ಘಟಕದ ಕಾರ್ಯದರ್ಶಿ ಮೊಗಣ್ಣಾಚಾರ್ ಮಾತನಾಡಿ, ಜಾತ್ಯತೀತ ಪಕ್ಷ ಎನ್ನುವ ಜೆಡಿಎಸ್ ಕೋಮುವಾದಿ ಬಿಜೆಪಿ ಪಕ್ಷದ ಜತೆ ಮೈತ್ರಿ ಮಡಿಕೊಂಡಿರುವುದು ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಇದರಿಂದ ಬೇಸತ್ತ ಹಲವು ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು, ಮುಖಂಡರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ಮೈತ್ರಿ ಏನಿದ್ದರೂ ಮುಖಂಡರ ನಡುವೆ ಆಗಿದೆಯೇ ವಿನಹ ಗ್ರಾಮ ಮಟ್ಟದ ಕಾರ್ಯಕರ್ತರಲ್ಲಿ ಯಾವುದೇ ಮೈತ್ರಿ ಆಗಿಲ್ಲ. ಆಗುವುದೂ ಇಲ್ಲ ಎಂದರು. ತತ್ವ ಸಿದ್ದಾಂತಗಳನ್ನು ಬದಿಗೊತ್ತಿ ಕೇವಲ ಅಧಿಕಾರಕ್ಕಾಗಿ ಈ ಮೈತ್ರಿ ನಡೆದಿದೆ. ಆದ್ದರಿಂದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚು ಸ್ಥಾನ ಗಳಿಸುವುದರ ಜತೆಗೆ ಕೇಂದ್ರದಲ್ಲೂ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದರು.    

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಎಸ್.ಎ.ರಹೀಂ, ರವಿಕುಮಾರ್, ಸಿದ್ದರಾಜು, ರಾಕೇಶ್ ಮುಂತಾದವರು ಇದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು