’ರೈತನಾಡು’ ವರದಿ ಫಲಶ್ರುತಿ : ದೇವರಾಜ ಮಾರ್ಕೆಟ್ ವ್ಯಾಪಾರಿಗಳು ಬಿಸಿಲಿನ ರಕ್ಷಣೆಗೆ ಟಾರ್ಪಲ್ ಹಾಕಿಕೊಳ್ಳಲು ಪಾಲಿಕೆ ಅನುಮತಿ

’ರೈತನಾಡು’ ವರದಿ ಫಲಶ್ರುತಿ 


 ವರದಿ : ಕಿಶೋರ್ ನಾಗ್, ಮೈಸೂರು

ಮೈಸೂರು : ನಗರದ ಹೃದಯ ಭಾಗದಲ್ಲಿರುವ ಐತಿಹಾಸಿಕ ದೇವರಾಜ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ನೆರಳಿಗಾಗಿ ಟಾರ್ಪಲ್ ಹಾಕಿಕೊಳ್ಳಲು ಪಾಲಿಕೆ ಅಧಿಕಾರಿಗಳು ಅನುಮತಿ ನೀಡಿದ್ದಾರೆ.

ಮಾರ್ಚ್ ೨೩ ರಂದು ಶನಿವಾರ ಪಾಲಿಕೆ ಅಧಿಕಾರಿಗಳು ಮತ್ತು ಗ್ಯಾಂಗ್‌ಮನ್‌ಗಳು ಏಕಾಏಕಿ ಮಾರುಕಟ್ಟೆಗೆ ದಾಳಿ ನಡೆಸಿ ತರಕಾರಿ, ಸೊಪ್ಪು, ಹಣ್ಣು ಹಂಪಲು ಮತ್ತಿತರ ಹಸಿರು ಪದಾರ್ಥಗಳನ್ನು ಮಾರುತ್ತಿದ್ದ ಅಂಗಡಿಗಳ ಮೇಲೆ ನೆರಳಿಗಾಗಿ ಹಾಕಿದ್ದ ಟಾರ್ಪಲ್‌ಗಳನ್ನು ಕಿತ್ತೆಸೆದು ಪೌರುಷ ಮೆರೆದಿದ್ದರು.

ಇದರಿಂದ ಬಿಸಿಲಿಗೆ ತರಕಾರಿ ಮತ್ತು ಸೊಪ್ಪುಗಳು ಒಣಗಿ ಹಾಳಾಗಿದ್ದವು. ಸಾಕಷ್ಟು ನಷ್ಟವೂ ಉಂಟಾಗಿತ್ತು. ಪಾಲಿಕೆ ಅಧಿಕಾರಿಗಳ ದೌರ್ಜನ್ಯವನ್ನು ಖಂಡಿಸಿ ವ್ಯಾಪಾರಿಗಳು ತರಕಾರಿ ಮತ್ತು ಸೊಪ್ಪನ್ನು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ’ರೈತನಾಡು’ವೆಬ್‌ಸೈಟ್ ಮತ್ತು ಪತ್ರಿಕೆ ವಿಸ್ತೃತ ವರದಿ ಪ್ರಕಟಿಸಿ ಶಾಸಕರು, ಅಧಿಕಾರಿಗಳು, ಸಾರ್ವಜನಿಕರು ಮತ್ತು ಪಾಲಿಕೆ ಆಯುಕ್ತರ ಗಮನ ಸೆಳೆದಿತ್ತು.

ವರ್ತಕರಾದ ಇಬ್ರಾಹಿಂ ಪಾಲಿಕೆ ಅಧಿಕಾರಿಗಳ ನಡೆಗೆ ಬೇಸತ್ತು ಆಕ್ರೋಶ ವ್ಯಕ್ತಪಡಿಸಿದ್ದರು. ಮತ್ತು ನೆರಳಿಗೆ ಟಾರ್ಪಲ್ ಹಾಕಿಕೊಳ್ಳಲು ಅನುಮತಿ ನೀಡಬೇಕೆಂದು ಆಗ್ರಹಿಸಿದ್ದರು.

ವರದಿಗೆ ಸ್ಪಂದಿಸಿದ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಎನ್.ಎನ್. ಮಧು, ವಲಯ ಕಚೇರಿ ೬ರ ಉಪ ಆಯುಕ್ತರಾದ ವೀಣಾ, ಪರಿಸರ ಅಭಿಯಂತರರಾದ ಮೈತ್ರಿ ಅವರು ಸೋಮವಾರ ಬೆಳಗ್ಗೆ ದೇವರಾಜ ಮಾರುಕಟ್ಟೆಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ವರ್ತಕರುಗಳು ತಮ್ಮ ಅಂಗಡಿ ಮಳಿಗೆಗಳಲ್ಲಿ ಪಾಲಿಕೆಯಿಂದ ನಿಗದಿ ಪಡಿಸಿ ಕೊಟ್ಟಿರುವ ಸ್ಥಳದ ಒಳಭಾಗದಲ್ಲಿ ಮಾತ್ರ ಪದಾರ್ಥಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡಬೇಕು ಮತ್ತು ಮಳೆ, ಬಿಸಿಲಿನ ರಕ್ಷಣೆಗಾಗಿ ನೀಲಿ ಅಥವಾ ಬೀಳಿ  ಬಣ್ಣದ ಟಾರ್ಪಲ್ ಕಟ್ಟಿಕೊಳ್ಳಲು ಅನುಮತಿಸಿದರು. 

ಅಲ್ಲದೇ ಗ್ರಾಹಕರು ತಿರುಗಾಡುವ ಸ್ಥಳದಲ್ಲಿ ಯಾವುದೇ ಸರಕುಗಳನ್ನು ಇಡಬಾರದೆಂದು ಎಚ್ಚರಿಸಿ ತಪ್ಪಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ವರ್ತಕರುಗಳಾದ ಇಬ್ರಾಹಿಂ, ನೀಲಕಂಠ, ಪ್ರಕಾಶ್, ರವಿ, ಸುಬ್ರಮಣಿ, ರವಿ ಮುಂತಾದವರುಗಳು ಇದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು