ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳಿಂದ ದೇವರಾಜ ಮಾರ್ಕೆಟ್‌ನಲ್ಲಿ ನೆರಳಿಗೆ ಹಾಕಿದ್ದ ಪ್ಲಾಸ್ಟಿಕ್ ಟಾರ್ಪಲ್ ಜಪ್ತಿ

ಸೊಪ್ಪು, ತರಕಾರಿ ರಸ್ತೆಗೆ ಸುರಿದು ಆಕ್ರೋಶ

ವರದಿ-ನಜೀರ್ ಅಹಮದ್

ಮೈಸೂರು : ಭಾರಿ ಸುಡು ಬಿಸಿಲು ಇರುವ ಕಾರಣ ಸೊಪ್ಪು ಮತ್ತು ತರಕಾರಿ ಇನ್ನಿತರೆ ವ್ಯಾಪಾರಿಗಳು ತಮ್ಮ ಅಂಗಡಿಗಳ ಮುಂದೆ ಬಿಸಿಲಿನಿಂದ ರಕ್ಷಿಸಿಕೊಳ್ಳಲು ನೆರಳಿಗಾಗಿ ಹಾಕಿದ್ದ ಟಾರ್ಪಲ್‌ಗಳನ್ನು ಪಾಲಿಕೆ ಅಧಿಕಾರಿಗಳು ಏಕಾಏಕಿ ತಮ್ಮ ಗ್ಯಾಂಗ್‌ಮನ್‌ಗಳ ಮೂಲಕ ಕಿತ್ತು ಹೊತ್ತೊಯ್ದೆ ಘಟನೆ ಶನಿವಾರ ದೇವರಾಜ ಮಾರುಕಟ್ಟೆಯಲ್ಲಿ ನಡೆದಿದ್ದು, ಘಟನೆಯನ್ನು ಖಂಡಿಸಿ ವ್ಯಾಪಾರಿಗಳು ಬಿಸಿಲಿನಿಂದ ಒಣಗಿದ ಸೊಪ್ಪು ಮತ್ತು ತರಕಾರಿಯನ್ನು ರಸ್ತೆಗೆ ಚೆಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಶನಿವಾರ ಬೆಳಗ್ಗೆ ಸುಮಾರು ೧೧ ಗಂಟೆಗೆ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ತಮ್ಮ ಸಿಬ್ಬಂದಿ ಸಮೇತ ಮಾರುಕಟ್ಟೆಯ ಒಳಗೆ ನುಗ್ಗಿ ಏಕಾಏಕಿ ವ್ಯಾಪಾರಿಗಳು ತಮ್ಮ ಅಂಗಡಿಗಳ ಮುಂದೆ ಹಾಕಿದ್ದ ಪ್ಲಾಸ್ಟಿಕ್ ಟಾರ್ಪಲ್‌ಗಳನ್ನು ಕಿತ್ತು ಪಾಲಿಕೆ ಲಾರಿಗಳಲ್ಲಿ ತುಂಬಿಕೊಂಡು ಹೋದರು. ಮತ್ತು ಮುಂದೆ ಅಂಗಡಿ ಮುಂದೆ ಟಾರ್ಪಲ್ ಹಾಕದಂತೆಯೂ ಎಚ್ಚರಿಕೆ ನೀಡಿದರು ಎಂದು ಸ್ಥಳೀಯ ವ್ಯಾಪಾರಿಗಳು ತಿಳಿಸಿದರು.


ಈ ಸಂದರ್ಭದಲ್ಲಿ ದೇವರಾಜ ಮಾರುಕಟ್ಟೆ ವ್ಯಾಪಾರಿಗಳ ಸಂಘದ ಪದಾಧಿಕಾರಿ ಇಬ್ರಾಹೀಂ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸಾಕಷ್ಟು ತಾಪಮಾನ ಹೆಚ್ಚಾಗಿದ್ದು, ಬಿಸಿಲಿನ ಝಳದಿಂದ ನಾವು ವ್ಯಾಪಾರ ಮಾಡುವುದೇ ಕಷ್ಟವಾಗಿದೆ. ಇನ್ನು ಸೊಪ್ಪು ಮತ್ತು ತರಕಾರಿಗಳನ್ನು ಈ ಸುಡುಬಿಸಿಲಿನಲ್ಲಿ ಅರ್ಧ ಗಂಟೆ ಇಟ್ಟರೂ ಅವು ಒಣಗುತ್ತವೆ. ಅವುಗಳನ್ನು ಯಾರೂ ಕೊಂಡುಕೊಳ್ಳುವುದಿಲ್ಲ. ತರಕಾರಿ ಮತ್ತು ಸೊಪ್ಪಿನ ಬೆಲೆ ಗಮನಾರ್ಹವಾಗಿ ಏರಿದೆ. ನಾವು ಸಾಲಸೋಲ ಮಾಡಿ ಹೊಟ್ಟೆ ಪಾಡಿಗಾಗಿ ವ್ಯಾಪಾರಕ್ಕೆ ಕುಳಿತಿದ್ದೇವೆ. ಅಂತಹದಲ್ಲಿ ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಮಾರುಕಟ್ಟೆಗೆ ನುಗ್ಗಿ ಟಾರ್ಪಲ್ ಕಿತ್ತುಹಾಕುವ ಮೂಲಕ ಪಾಲಿಕೆ ಅಧಿಕಾರಿಗಳು ವ್ಯಾಪಾರಿಗಳಿಗೆ ನಷ್ಟ ಉಂಟುಮಾಡಿದ್ದಾರೆ. ಪಾಲಿಕೆ ಅಧಿಕಾರಿಗಳ ಸೂಚನೆ ಬಳಿಕ ನಾವು ನಮ್ಮ ಅಂಗಡಿಗಳನ್ನು ಮೂರು ಅಡಿ ಮಾತ್ರ ಮುಂದೆ ಇಡುತ್ತಿದ್ದೇವೆ. ಜನರಿಗಾಗಲೀ, ಅಕ್ಕ ಅಕ್ಕಪಕ್ಕದ ವ್ಯಾಪಾರಿಗಳಿಗಾಗಲೀ ಇದರಿಂದ ತೊಂದರೆ ಇಲ್ಲ. ಆದರೂ ಪಾಲಿಕೆ ಅಧಿಕಾರಿಗಳು ಈ ರೀತಿ ಬಡ ವ್ಯಾಪಾರಿಗಳ ಮೇಲೆ ದೌರ್ಜನ್ಯ ಎಸಗಿರುವುದು ಅನ್ಯಾಯ ಈ ವಿಷಯವನ್ನು ಶಾಸಕರಾದ ಕೆ.ಹರೀಶ್‌ಗೌಡ ಅವರ ಗಮನಕ್ಕೆ ತರಲಾಗುವುದು ಎಂದರು. 

ದೇವರಾಜ ಮಾರುಕಟ್ಟೆಯಲ್ಲಿ ಮೊದಲಿನಂತೆ ವ್ಯಾಪಾರ ನಡೆಯುತ್ತಿಲ್ಲ. ಚಿಕ್ಕ ಗಡಿಯಾರದ ಎದುರು ನೂರಾರು ತಳ್ಳುವ ಗಾಡಿಗಳನ್ನು ನಿಲ್ಲಿಸಲು ಇದೇ ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದಾರೆ. ಇಲ್ಲಿ ಸಿಗುವ ಎಲ್ಲ ತರಕಾರಿಗಳು ಅಲ್ಲಿಯೇ ಸಿಗುವ ಕಾರಣ ವ್ಯಾಪಾರಿಗಳು ಮಾರ್ಕೆಟ್ ಒಳಗೆ ಬರುವುದು ಕಷ್ಟವಾಗಿದೆ. ಇದರಿಂದ ನಮ್ಮ ಜೀವನ ನಿರ್ವಹಣೆ ಕಷ್ಟವಾಗಿದೆ. ಅಂತಹದರಲ್ಲಿ ಆದಷ್ಟು ವ್ಯಾಪಾರ ಮಾಡಿಕೊಂಡು ನಾವು ಬದುಕುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಬಿಸಿಲಿನಿಂದ ನಮ್ಮ ಸೊಪ್ಪು, ತರಕಾರಿಗಳನ್ನು ರಕ್ಷಿಸಲು ಮತ್ತು ವ್ಯಾಪಾರ ಮಾಡುವ ಗಿರಾಕಿಗಳಿಗೆ ನೆರಳು ಇರಲು ನಾವು ಟಾರ್ಪಲ್ ಹಾಕಿದ್ದೆವೇ ಇದರಿಂದ ಯಾರಿಗೂ ತೊಂದರೆ ಇಲ್ಲ. ಅಂತಹದರಲ್ಲಿ ಏಕಾಏಕಿ ಟಾರ್ಪಲ್ ಕಿತ್ತು ಪಾಲಿಕೆ ಅಧಿಕಾರಿಗಳು ನಮ್ಮ ಹೊಟ್ಟೆಯನ್ನು ಹೊಡೆದಿದ್ದಾರೆ ಎಂದು ತರಕಾರಿ ವ್ಯಾಪಾರಿ ಗುರು ಆಕ್ರೋಶ ವ್ಯಕ್ತಪಡಿಸಿದರು.


ಮಾರ್ಕೆಟ್‌ನಲ್ಲಿ ಸೂಕ್ತ ರಕ್ಷಣೆ ಇಲ್ಲ, ಕಳವು ಹೆಚ್ಚಾಗಿದೆ. ರಾತ್ರಿ ವೇಳೆ ದನಗಳು ಮತ್ತು ಹಸುಗಳ ಕಾಟವಿದೆ. ಇಲ್ಲಿನ ಶೌಚಾಲಯ ದುರ್ನಾತ ಬೀರುತ್ತಿದೆ. ಮಾರುಕಟ್ಟೆಯನ್ನು ಈ ಹಿಂದೆ ದಿನಕ್ಕೆ ಮೂರು ಬಾರಿ ಸ್ವಚ್ಛ ಮಾಡುತ್ತಿದ್ದರು. ಈಗ ಒಂದು ಬಾರಿ ಸ್ವಚ್ಛ ಮಾಡುವುದೇ ಕಷ್ಟ. ಇಲ್ಲಿ ಕುಡಿಯಲು ನೀರಿಲ್ಲ. ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗದೆ. ನಮ್ಮನ್ನು ಇಲ್ಲಿಂದ ಎತ್ತಂಗಡಿ ಮಾಡಿಸಲು ಮುಂದಾಗಿದ್ದಾರೆ ಎಂದು ವ್ಯಾಪಾರಿಗಳು ಕಿಡಿ ಕಾರಿದರು.
ಈ ಸಂದರ್ಭದಲ್ಲಿ ಪ್ರಕಾಶ್, ಹುಚ್ಚಪ್ಪ, ಸತ್ಯಪ್ಪ, ಗುರು, ಪ್ಯಾರೂ, ಇಕ್ಬಾಲ್, ಅರುಣ ಮುಂತಾದವರು ಇದ್ದರು.

ಯಾವತ್ತೂ ಇಂತಹ ದೌರ್ಜನ್ಯ ಆಗಿಲ್ಲ

ನಾವು ನಮ್ಮ ತಾತ ಮುತ್ತಾತನ ಕಾಲಂದಿಂದಲೂ ಇಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಕಳೆದ ೪೦ ವರ್ಷಗಳಿಂದ ಯಾವೊಬ್ಬ ಪಾಲಿಕೆ ಅಧಿಕಾರಿಯೂ ಹೀಗೆ ಮಾರುಕಟ್ಟೆಯಲ್ಲಿ ಏಕಾಏಕಿ ದಾಳಿ ನಡೆಸಿ ಬಡ ವ್ಯಾಪಾರಿಗಳ ಮೇಲೆ ದೌಜ್ಯನ್ಯ ನಡೆಸಿಲ್ಲ. ನಾವು ರೈತರಿಂದ ಸಾಲವಾಗಿ ತರಕಾರಿ ಸೊಪ್ಪು ಖರೀದಿಸಿ ವ್ಯಾಪಾರ ಮಾಡಿ ಅವರಿಗೆ ಹಣ ನೀಡಬೇಕು. ಹೀಗೆ ನಮ್ಮ ನೆರಳನ್ನು ಕಿತ್ತು ಹಾಕಿದರೆ ನಮ್ಮ ಬದುಕು ಕಿತ್ತಂತೆ. ಟಾರ್ಪಲ್ ಕಿತ್ತು ಹಾಕಿದ್ದರಿಂದ ತರಕಾರಿಗಳು ಒಣಗಿ ಹಾಳಾಗಿವೆ. ಬೇಕಿದ್ದರೆ  ಪಾಲಿಕೆ ಆಯುಕ್ತರು ಬಂದು ಪರಿಶೀಲಿಸಬೇಕು ಮತ್ತು ನಮಗೆ ಸೂಕ್ತ ಪರಿಹಾರ ನೀಡಬೇಕು.

ಪ್ರಕಾಶ್ ಸೊಪ್ಪಿನ ವ್ಯಾಪಾರಿ  



 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು