ರಾಕೇಶ್ ಸಿದ್ದರಾಮಯ್ಯ ಸ್ಮರಣಾರ್ಥ ಶ್ರೀನಿವಾಸ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಜನರ ಆರೋಗ್ಯ ಕಾಪಾಡುವುದು ಸರ್ಕಾರದ ಕರ್ತವ್ಯ : ಸಿಎಂ

ಮೈಸೂರು : ರಾಜ್ಯದ ಏಳು ಕೋಟಿ ಕನ್ನಡಿಗರಿಗೆ ಶಿಕ್ಷಣ, ಆರೋಗ್ಯ ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಎನ್.ಆರ್.ಮೊಹಲ್ಲಾದ ಶಿವಾಜಿ ರಸ್ತೆಯಲ್ಲಿ ರಾಕೇಶ್ ಸಿದ್ದರಾಮಯ್ಯ ಸ್ಮರಣಾರ್ಥ ನೂತನವಾಗಿ ಪ್ರಾರಂಭಿಸಲಾದ ಶ್ರೀನಿವಾಸ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೈಸೂರು ನಗರದಲ್ಲಿ ಜನಸಂಖ್ಯೆ ಬೆಳೆಯುತ್ತಿದ್ದು ಜನಸಂಖ್ಯೆಗಳಿಗೆ ಅನುಗುಣವಾಗಿ ಶಾಲೆಗಳು ಮತ್ತು ಆಸ್ಪತ್ರೆಗಳ ಅಗತ್ಯವಿದೆ. ನಗರದಲ್ಲಿ ಸಾಕಷ್ಟು ಸರ್ಕಾರಿ ಆಸ್ಪತ್ರೆಗಳು ಮತ್ತು ಶಾಲೆಗಳು ಇದೆಯಾದರೂ, ಖಾಸಗಿಯವರೂ ಸಹ ಆರೋಗ್ಯ ಮತ್ತು ಶಿಕ್ಷಣ ಸೇವೆಯಲ್ಲಿ ಮುಂದಾಗಿರುವುದು ಸಂತೋಷದ ವಿಷಯ. ಆದರೇ, ಬಡವರಿಗೂ ಉತ್ತಮವಾದ ಚಿಕಿತ್ಸೆ ದೊರಕಬೇಕು. ಖಾಸಗಿ ಆಸ್ಪತ್ರೆಗಳು ಬಡವರನ್ನು ಶೋಷಣೆ ಮಾಡಬಾರದು. ಕಡಿಮೆ ಖರ್ಚಿನಲ್ಲಿ ಉತ್ತಮ ಚಿಕಿತ್ಸೆ ನೀಡಬೇಕು ಎಂದು ಸಲಹೆ ನೀಡಿದರು.  
ಮುಖ್ಯಮಂತ್ರಿಗಳ ಪರಿಹಾರ ಕೋರಿ ಅನೇಕ ರೋಗಿಗಳು ಪರಿಹಾರಕ್ಕೆ ಅರ್ಜಿ ಸಲ್ಲಿಸುತ್ತಾರೆ. ಕೆಲವು ಸಂದರ್ಭದಲ್ಲಿ ಗಂಭೀರ ಕಾಯಿಲೆಗಳಿಗೆ ತುತ್ತಾದ ರೋಗಿಗಳ ಚಿಕಿತ್ಸಾ ವೆಚ್ಚ ೨೦ ರಿಂದ ೪೦ ಲಕ್ಷ ರೂ. ಆಗಿರುತ್ತದೆ. ಇವುಗಳನ್ನು ಭರಿಸುವ ಶಕ್ತಿ ಅವರಲ್ಲಿ ಇರುವುದಿಲ್ಲ. ಇದನ್ನು ಮನಗಂಡು ಸರ್ಕಾರಿ ಆಸ್ಪತ್ರೆಗಳನ್ನು ಉನ್ನತ ದರ್ಜೆಗೆ ಆರಿಸಲಾಗಿದೆ. ಪ್ರತಿ ಜಿಲ್ಲಾ ಆಸ್ಪತ್ರೆಗಳಿಗೆ ಎಂಆರ್‌ಐ ಸ್ಕ್ಯಾನಿಂಗ್ ಯಂತ್ರವನ್ನು ಒದಗಿಸಿದ್ದೇವೆ. ಸರ್ಕಾರಿ ಆಸ್ಪತ್ರೆಗಳಲ್ಲೂ ಮಲ್ಟಿ ಸ್ಪೆಷಾಲಿಟಿ ಚಿಕಿತ್ಸೆ ದೊರಕುತ್ತಿದೆ. ಶ್ರೀಮಂತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಆಸ್ಪತ್ರೆ ಖರ್ಚು ಭರಿಸುವ ಶಕ್ತಿ ಇರುತ್ತದೆ. ಆದರೇ, ಬಡವರಿಗೆ ಆ ಶಕ್ತಿ ಇರುವುದಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಸೌಲಭ್ಯ ಮತ್ತು ಪರಿಣಿತ ವೈದ್ಯರು ಇದ್ದಾರೆ. ಬಡವರು ವಿನಾ ಕಾರಣ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಹಣ ಕಟ್ಟಲಾಗದೆ ಒದ್ದಾಡುವ ಬದಲು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕು ಎಂದರು.
ಗ್ರಾಮೀಣ ಪ್ರದೇಶದ ನೂರಾರು ಬಡವರು ಡಯಾಬಿಟಿಕ್ ಸಮಸ್ಯೆಗಳಿಂದ ನರಳುತ್ತಿದ್ದಾರೆ. ಇತ್ತೀಚೆಗೆ ಕ್ಯಾನ್ಸರ್ ಕಾಯಿಲೆ, ಕಿಡ್ನಿ ಸಮಸ್ಯೆಗಳು ಹೆಚ್ಚಾಗಿವೆ. ಅನೇಕ ಜನರು ಹಣದ ಕೊರತೆಯಿಂದ ಆಸ್ಪತ್ರೆಗಳಿಗೆ ಹೋಗುವುದೇ ಇಲ್ಲ. ಹಾಗೇಯೇ ಕಾಯಿಲೆಗಳಲ್ಲಿ ತಮ್ಮ ಬದುಕು ಮುಗಿಸುತ್ತಾರೆ ಎಂದು ಹೇಳಿದ ಮುಖ್ಯಮಂತ್ರಿಗಳು ಖಾಸಗಿ ಅಸ್ಪತ್ರೆಗಳೂ ಬಡವರಿಗೆ ಎಟುಕುವ ರೀತಿಯಲ್ಲಿ ಚಿಕಿತ್ಸಾ ದರವನ್ನು ವಿಧಿಸಬೇಕು ಎಂದರು. 
ನಾನೂ ಕೂಡ ವಕೀಲಿ ವೃತ್ತಿ ಮಾಡುತ್ತಿದ್ದಾಗ ಕುಡಿಯುವುದು, ಸಿಗರೇಟ್ ಸೇದುವುದು ಕಲಿತಿದ್ದೆ ೧೯೮೦ ರಲ್ಲಿ ಈ ಚಟಗಳು ಆರೋಗ್ಯಕ್ಕೆ ಹಾನಿಕಾರಕ ಎಂದು ಗೊತ್ತಾಗಿ ಕುಡಿಯುವುದು, ಸಿಗರೇಟ್ ಸೇದುವುದನ್ನು ಬಿಟ್ಟುಬಿಟ್ಟೆ ಎಂದರು. 
ಇದೇ ಸಂದರ್ಭದಲ್ಲಿ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಜಿ.ಎಸ್.ವೆಂಕಟೇಶ್ ಗಂಧನಹಳ್ಳಿ ಮಾತನಾಡಿ, ರಾಕೇಶ್ ಸಿದ್ದರಾಮಯ್ಯ ಸ್ಮರಣಾರ್ಥ ನಮ್ಮ ಆಸ್ಪತ್ರೆಯಲ್ಲಿ ತಿಂಗಳಿಗೊಂದು ಉಚಿತ ಶಸ್ತ್ರ ಚಿಕಿತ್ಸೆ ಮಾಡಲಾಗುವುದು. ಬಡವರಿಗೆ ಹೊರೆಯಾಗದಂತೆ ಚಿಕಿತ್ಸಾ ವೆಚ್ಚವನ್ನು ಕಡಿಮೆ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಶಾಸಕರಾದ ತನ್ವೀರ್ ಸೇಠ್, ಡಿ.ರವಿಶಂಕರ್, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಡಾ.ಕಮಲಮ್ಮ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯ್ಯೂಬ್ ಖಾನ್, ಮಾಜಿ ಮೇಯರ್ ಆರೀಫ್ ಹುಸೇನ್, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರ್‌ನಾಥ್, ಕಾಂಗ್ರೆಸ್ ಮುಖಂಡರಾದ ದೊಡ್ಡ ಸ್ವಾಮೀಗೌಡ, ಪ್ರಭಾವತಿ, ಅನಂತ್ ಕುಮಾರ್, ಅಕ್ರಂ ಷರೀಫ್, ಆರೀಫ್ ಪಾಷ ಮುಂತಾದವರು ಇದ್ದರು. 

ಮೈಸೂರಿನಲ್ಲಿ ಈಗಾಗಲೇ ಜಯದೇವ ಆಸ್ಪತ್ರೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಕಿದ್ವಾಯಿ, ನೆಫ್ರೋ ಯೂರಾಲಜಿ, ಟ್ರಾಮ ಸೆಂಟರ್, ಕೆ.ಆರ್.ಆಸ್ಪತ್ರೆ ಹೊಸ ಓಪಿಡಿ, ಜಿಲ್ಲಾ ಆಸ್ಪತ್ರೆ ಮುಂತಾದವುಗಳನ್ನು ನಿರ್ಮಿಸುತ್ತಿದ್ದೇವೆ ಇದರಿಂದ ಈ ಭಾಗದ ಬಡ ಜನರಿಗೆ ಅನುಕೂಲವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು