ಮಂಡ್ಯ ಹಾಸನದಿಂದ ಬಿಜೆಪಿ ಸ್ಪರ್ಧೆ !
ಪಾಂಡವಪುರ : ಕೆರೆಗೂಡು ಧ್ವಜ ಪ್ರಕರಣದ ಬಳಿಕ ಜೆಡಿಎಸ್ ಪ್ರಾಭಲ್ಯವಿರುವ ಸಕ್ಕರೆ ನಗರಿ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಚಟುವಟಿಕೆಗಳು ಗರಿಗೆದರಿದ್ದು, ಮಂಡ್ಯ ಮತ್ತು ಹಾಸನ ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ಉಳಿಸಿಕೊಳ್ಳಬೇಕು ಎಂಬುದು ಕಾರ್ಯಕರ್ತರ ಅಪೇಕ್ಷೆಯಾಗಿದೆ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ಉಪಾಧ್ಯಕ್ಷ ಪ್ರೀತಂಗೌಡ ಹೇಳಿದರು.
ಭಾನುವಾರ ಪಾಂಡವಪುರದಲ್ಲಿ ನಡೆದ ಮಂಡ್ಯ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ೨೮ರಲ್ಲಿ ೨೮ ಕ್ಷೇತ್ರವೋ ಅಥವಾ ೨೬, ೨೭ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತೋ ಎಂದು ಪಕ್ಷ ಇನ್ನೂ ನಿರ್ಧರಿಸಿಲ್ಲ.
ಹಾಸನ ಹಾಗೂ ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್ ಬಲ ಕುಗ್ಗಿದೆ. ಮಂಡ್ಯದಲ್ಲಿ ಜೆಡಿಎಸ್ ಗೆದ್ದಿರೋದು ಕೆ.ಆರ್.ಪೇಟೆ ಮಾತ್ರ, ಬಿಜೆಪಿ ಸಹ ಪ್ರಬಲ ಪೈಪೋಟಿ ನೀಡಿದೆ. ಹೀಗಾಗಿ ಕಾರ್ಯಕರ್ತರು ಮಂಡ್ಯ ಕ್ಷೇತ್ರಕ್ಕೆ ವಿಶ್ವಾಸ ಇಟ್ಟುಕೊಂಡಿದ್ದಾರೆ. ಬಿಜೆಪಿಗೆ ಟಿಕೇಟ್ ಕೊಡಿ ಅನ್ನೋದು ಸರಿಯಾಗಿದೆ ಎಂದರು.
ಜೆಡಿಎಸ್ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದರೂ ಯಾವ ಯಾವ ಕ್ಷೇತ್ರಗಳು ಅವರಿಗೆ ಲಭಿಸುತ್ತವೆ ಎನ್ನುವುದರ ಬಗ್ಗೆ ಇದುವರೆಗೂ ತೀರ್ಮಾನವಾಗಿಲ್ಲ. ಮಂಡ್ಯ ಮತ್ತು ಹಾಸನದಲ್ಲಿ ಬಿಜೆಪಿ ಪ್ರಭಲವಾಗಿದ್ದು, ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನೆ ಕಣಕ್ಕಿಳಿಸುವುದು ಸೂಕ್ತವಾಗಿದೆ. ಒಂದು ವೇಳೆ ಪಕ್ಷ ಮೈತ್ರಿ ಅಭ್ಯರ್ಥಿಗೆ ಆ ಸ್ಥಾನಗಳನ್ನು ಬಿಟ್ಟುಕೊಟ್ಟರೂ ಜೆಡಿಎಸ್‌ನಿಂದ ಸ್ಪರ್ಧಿಸುವ ಅಭ್ಯರ್ಥಿಗಳು ಯಾರು ಎಂಬುದನ್ನು ಬಿಜೆಪಿ ಕಾರ್ಯಕರ್ತರು ನಿರ್ಧರಿಸುತ್ತಾರೆ ಎಂದು ಮತ್ತೊಮ್ಮೆ ಬಿಜೆಪಿ-ಜೆಡಿಎಸ್ ಪಕ್ಷದೊಂದಿಗಿನ ಮೈತ್ರಿ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕಿದರು.
ಬಿಜೆಪಿ ತತ್ವ, ಸಿದ್ಧಾಂತ ಹೊಂದಿರುವ ಕಾರ್ಯಕರ್ತರ ಆಧಾರಿತ ಪಕ್ಷವಾಗಿದೆ. ಪಕ್ಷವು ಕುಟುಂಬ ರಾಜಕಾರಣದ ವಿರುದ್ಧ ತನ್ನ ನಿಲುವು ಹೊಂದಿದೆ. ಪ್ರಾದೇಶಿಕ ಪಕ್ಷಗಳು ಮತ್ತು ಅವುಗಳ ಚುಕ್ಕಾಣಿ ಹಿಡಿದಿರುವ ಪ್ರಬಲ ಕುಟುಂಬಗಳಿಂದ ದೇಶದ ಅಭಿವೃದ್ಧಿಗೆ ಅಪಾಯ ಹೆಚ್ಚಾಗಿದೆ ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿಯವರು ಈಗಾಗಲೇ ಹೇಳಿದ್ದಾರೆ.
ತಮಿಳುನಾಡಿನಲ್ಲಿ ಕರುಣಾನಿಧಿ, ಉತ್ತರ ಪ್ರದೇಶದಲ್ಲಿ ಮುಲಾಯಂಸಿಂಗ್ ಯಾದವ್, ಜಮ್ಮು ಕಾಶ್ಮೀರದಲ್ಲಿ ಫಾರೂಕ್ ಅಬ್ದುಲ್ಲಾ, ಒರಿಸ್ಸಾದಲ್ಲಿ ಬಿಜು ಪಾಟ್ನಾಯಕ್, ಬಿಹಾರದಲ್ಲಿ ಲಾಲೂ ಪ್ರಸಾದ್ ಮತ್ತು ಕರ್ನಾಟಕದಲ್ಲಿ ಅಪ್ಪ ಮಕ್ಕಳ ಕುಟುಂಬ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೆಸರು ಹೇಳದೆಯೇ ಕುಟುಕಿದರು.
ಲೋಕಸಭೆಯಲ್ಲಿ ೪೦ ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್ ಪ್ರಾಭಲ್ಯವನ್ನು ಮತ್ತಷ್ಟು ಕುಗ್ಗಿಸುವುದು ನಮ್ಮ ಗುರಿಯಾಗಿದ್ದು, ಈ ವಿಷಯದಲ್ಲಿ ಜೆಡಿಎಸ್ ಕೂಡ ನಮ್ಮೊಂದಿಗೆ
ಕೈ ಜೋಡಿಸಿರುವುದು ಸ್ವಾಗತಾರ್ಹ ಎಂದರು.
ದೇಶದಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿ ಆದ ಬಳಿಕ ದೇಶ ಸಾಕಷ್ಟು ಅಭಿವೃದ್ಧಿಯಾಗಿದೆ. ಸರ್ಕಾರ ಎಲ್ಲ ಅನುಕೂಲಗಳು ನೇರವಾಗಿ ಫಲಾನುಭವಿಗಳಿಗೆ ತಲುಪುತ್ತಿವೆ ಎಂದರು.
ತಮ್ಮ ಭಾಷಣ ಪ್ರಾರಂಭಿಸುವುದಕ್ಕೂ ಮುನ್ನ ಪ್ರೀತಂಗೌಡ ಬಿಜೆಪಿ ಕಾರ್ಯಕರ್ತರಿಂದ ಜೈ ಶ್ರೀರಾಮ್ ಘೋಷಣೆ ಕೂಗಿಸಿ, ಮನೆಯಲ್ಲಿರುವ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಹಾಗೂ ಅಮೆರಿಕಾದಲ್ಲಿರುವ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರಿಗೂ ಕೇಳಿಸುವಂತೆ ಜೈ ಶ್ರೀರಾಂ ಘೋಷಣೆ ಕೂಗಬೇಕೆಂದು ಕಾರ್ಯಕರ್ತರನ್ನು ಹುರಿದುಂಬಿಸುವ ಮೂಲಕ ಕ್ಷೇತ್ರದ ಹಾಲಿ ಮತ್ತು ಮಾಜಿ ಶಾಸಕರ ಕುರಿತು ವ್ಯಂಗ್ಯವಾಡಿದರಲ್ಲದೇ, ನಾನು ಇದುವರೆಗೂ ಅಗ್ರೇಸಿವ್ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ಅಡ್ಜೆಸ್ಟ್‌ಮೆಂಟ್ ರಾಜಕಾರಣ ಮಾಡಿಲ್ಲ ಎಂದು ಪರೋಕ್ಷವಾಗಿ ಹೆಚ್‌ಡಿಕೆ ಅವರನ್ನು ಕುಟುಕಿದರು.
ಮಾಜಿ ಸಚಿವ ಎಸ್.ಎ.ರಾಮದಾಸ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೇಂದ್ರದಿಮದ ಕರ್ನಾಟಕ ರಾಜ್ಯಕ್ಕೆ ಬರಬೇಕಿರುವ ಹಣಕಾಸಿನ ನೆರವು, ಜಿಎಸ್‌ಟಿ ಪಾಲು ಬಂದಿಲ್ಲ ಎಂದು ಪದೇ ಪದೇ ಸುಳ್ಳು ಹೇಳುತ್ತಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ ೮೯ ಸಾವಿರ ಕೋಟಿ ಹಣ ನೀಡಿದ್ದರೆ, ಎನ್‌ಡಿಎ ಸರ್ಕಾರ ೩.೫ ಲಕ್ಷ ಕೋಟಿ ಹಣಕಾಸಿನ ನೆರವು ನೀಡಿದೆ ಈ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ ಎಂದರು.
೧೦ ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ೩೦೨ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅವುಗಳ ಪೈಕಿ ೧೯೬ ಯೋಜನೆಗಳು ನೇರವಾಗಿ ಜನರನ್ನು ತಲುಪುತ್ತಿವೆ. ಇತ್ತಿಚೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ದೇಶದ ರೈತರು, ಮಹಿಳೆಯರು, ಯುವಕರು ಮತ್ತು ಬಡವರನ್ನು ಯಶಸ್ವಿಯಾಗಿ ತಲುಪುತ್ತವೆ ಎಂದರು.
ಮಾಜಿ ಸಚಿವ ನಾರಾಯಣಗೌಡ ಮಾತನಾಡಿ, ಸಂಸದೆ ಸುಮಲತಾ ಅಂಬರೀಶ್‌ಗೆ ಮಂಡ್ಯ ಬಿಜೆಪಿ ಟಿಕೇಟ್ ಕೊಟ್ಟರೆ ತಪ್ಪೇನು, ಸುಮಲತಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸಹಾಯ ಮಾಡಿದ್ದಾರೆ. ಹೈಕಮಾಂಡ್‌ಗೆ ನಮ್ಮ ಅಭಿಪ್ರಾಯ ನೇರವಾಗಿ ಹೇಳ್ತೀವಿ ಎಂದು ಕೆ.ಸಿ.ನಾರಾಯಣಗೌಡ ಸಂಸದೆ ಸುಮಲತಾ ಪರ ಬ್ಯಾಟಿಂಗ್ ಮಾಡಿದರು.
ಸುಮಲತಾ ಅವರ ಮನೆಯಲ್ಲಿ ನಡೆದ ಸಭೆಗೆ ನಾನು ಹೋಗಿದ್ದೆ, ಅವರು ಮಂಡ್ಯದಿಂದಲೇ ಸ್ಪರ್ಧೆ ಮಾಡ್ತೀನಿ ಎಂದು ಹೇಳಿದ್ದಾರೆ. ಜೆಡಿಎಸ್ ಪಕ್ಷದವರು ಮಂಡ್ಯ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಟ್ಟು ಬೇರೆ ಕ್ಷೇತ್ರಕ್ಕೆ ಹೋಗಲಿ ಎಂದರಲ್ಲದೇ, ನಾನು ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ಹೋಗುವ ಪ್ರಶ್ನೆಯೇ ಇಲ್ಲ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಮುಖಂಡರಾದ ಲಕ್ಷ್ಮಿ ಅಶ್ವಿನ್‌ಗೌಡ, ಡಾ.ಸಿದ್ದರಾಮಯ್ಯ, ಕೆ.ಎಸ್.ನಂಜುಂಡೇಗೌಡ ಮುಂತಾದವರು ಇದ್ದರು.
ರಾಹುಲ್ ಪ್ರಧಾನಿಯಾದರೆ ಚೀನ ಆಕ್ರಮಣ
ಒಂದು ವೇಳೆ ರಾಹುಲ್ ಗಾಂಧಿ ಈ ದೇಶದ ಪ್ರಧಾನಿ ಆದರೆ, ಚೀನಾ ದೇಶ ಭಾರತವನ್ನು ಆಕ್ರಮಣ ಮಾಡಿ ನಮ್ಮ ಭೂಮಿಯನ್ನು ವಶಪಡಿಸಿಕೊಳ್ಳುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ಭಯದಿಂದ ಅದು ಇಂದಿಗೂ ನಮ್ಮ ಮೇಲೆ ಆಕ್ರಮಣ ಮಾಡುತ್ತಿಲ್ಲ.
ಎಸ್.ಎ.ರಾಮದಾಸ್, ಮಾಜಿ ಸಚಿವ
ಗ್ಯಾರಂಟಿ ಯೋಜನೆಗಳು ತಲುಪಿಲ್ಲ
ಗ್ಯಾರಂಟಿ ಯೋಜನೆ ಮೂಲಕ ಜನರಲ್ಲಿ ಆಸೆ ಹುಟ್ಟಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಇಂದಿಗೂ ಗೃಹಲಕ್ಷ್ಮಿ ಯೋಜನೆ ಹಣವನ್ನು ಫಲಾನುಭವಿಗಳಿಗೆ ತಲುಪಿಸುತ್ತಿಲ್ಲ. ೧.೨೫ ಕೋಟಿ ಮಹಿಳೆಯರಿಗೆ ಮಾಸಿಕ ತಲಾ ೨ ಸಾವಿರ ಹಣ ನೀಡುತ್ತಿದ್ದೇವೆ ಎನ್ನುವುದು ಸುಳ್ಳು. ೧೦ ಲಕ್ಷ ಮಹಿಳೆಯರಿಗೆ ಮಾತ್ರ ಒಂದು ತಿಂಗಳು ಹಣ ಕೊಟ್ಟು, ಬಳಿಕ ಅವರಿಗೆ ನಿಲ್ಲಿಸಿ ಮತ್ತೆ ಉಳಿದ ೧೦ ಲಕ್ಷ ಜನರಿಗೆ ಹಣ ಕೊಟ್ಟಿದ್ದಾರೆ. ಹೀಗೆಯೇ ಒಂದೊಂದು ಬ್ಯಾಚ್ ಮಾಡಿಕೊಂಡು ಒಂದು ತಿಂಗಳ ಹಣ ನೀಡುತ್ತಿದ್ದಾರೆ. ಸತತವಾಗಿ ಯಾರಿಗೂ ಹಣ ತಲುಪಿಸಿಲ್ಲ.
ಪ್ರೀತಂಗೌಡ, ಬಿಜೆಪಿ ರಾಜ್ಯ ಕಾರ್ಯದರ್ಶಿ
0 ಕಾಮೆಂಟ್‌ಗಳು