ಪಾಂಡವಪುರ : ತಾಲ್ಲೂಕಿನ ಜಯಂತಿನಗರ ಮತ್ತು ಪಾಂಡವಪುರ ರೈಲ್ವೆ ನಿಲ್ದಾಣದ ಬಳಿ ವಾಸಿಸುತ್ತಿರುವ ಸುಮಾರು ೫೦ಕ್ಕೂ ಹೆಚ್ಚು ವಸತಿ ರಹಿತರು ಮಂಗಳವಾರ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿ ತಮಗೆ ನಿವೇಶನ ಒದಗಿಸುವಂತೆ ಮನವಿ ಮಾಡಿದರು.
ಕಳೆದ ೨೦ರಿಂದ ೩೦ ವರ್ಷಗಳಿಂದ ತಾವು ಜಯಂತಿನಗರ ಮತ್ತು ಪಾಂಡವಪುರ ರೈಲ್ವೆ ನಿಲ್ದಾಣದ ಬಳಿ ವಾಸವಿದ್ದು, ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ನಮಗೆ ಸ್ವಂತ ಮನೆ ಅಥವಾ ನಿವೇಶನ ಇಲ್ಲ. ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೇವೆ. ಗ್ರಾಮ ಪಂಚಾಯ್ತಿಯವರು ಅನೇಕ ಬಾರಿ ವಸತಿ ರಹಿತರ ಸಮೀಕ್ಷೆ ನಡೆಸಿದ್ದರೂ ಇದುವರೆಗೂ ನಮಗೆ ಯಾವುದೇ ರೀತಿಯ ನಿವೇಶನ ಮಂಜೂರು ಮಾಡಿಲ್ಲ ಈ ಬಾರಿ ನಮಗೆ ನಿವೇಶನ ನೀಡದಿದ್ದಲ್ಲಿ ಮಹಿಳೆಯರು ತಾಪಂ ಕಚೇರಿ ಎದುರು ಅಮರಣಾಂತ ಉಪವಾಸ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಲೋಕೇಶ್ ಮೂರ್ತಿ ಅರ್ಜಿ ಸ್ವೀಕರಿಸಿ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಇದಕ್ಕೂ ಮುನ್ನ ನಿವೇಶನ ರಹಿತರು ಕೆನ್ನಾಳು ಗ್ರಾಮ ಪಂಚಾಯ್ತಿಗೆ ಭೇಟಿ ನೀಡಿ ಅಲ್ಲಿನ ಪಂಚಾಯ್ತಿ ಆಡಳಿತಾಧಿಕಾರಿಗಳಿಗೂ ಮನವಿ ಸಲ್ಲಿಸಿ ಈ ಬಗ್ಗೆ ಸರ್ಕಾರದ ಗಮನ ಸೆಳೆದು ಶೀಘ್ರದಲ್ಲಿ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಪ್ರಕಾಶ ಗ್ರಾಮದ ಮುಖಂಡರಾದ ದೇವಾನಂದ, ನೂರೊದ್ದೀನ್ ಪಾಷ, ನಿವೇಶನ ರಹಿತರಾದ ಶಿವರಾಣಿ, ಕೌಸರ್, ಗುಲ್ಜಾರ್ ಬೇಗಂ, ಪ್ರಭಾವತಿ, ಲಕ್ಷ್ಮಮ್ಮ, ಸುಶೀಲ, ಸಾವಿತ್ರಮ್ಮ, ಫೌಲಿನಾ, ಭಾಗ್ ಫೌಲಿನಾ, ಭಾಗ್ಯಮ್ಮ ಮುಂತಾದವರು ಇದ್ದರು.
0 ಕಾಮೆಂಟ್‌ಗಳು