ರಾಜೇಂದ್ರ ಶ್ರೀಗಳ ಪ್ರತಿಮೆ ತೆರವಿಗೆ ಒತ್ತಾಯಿಸಿದ ಪ್ರತಿಭಟನಾಕಾರರ ಬಂಧನ

ಮೈಸೂರು :  ನಗರದ ಗನ್ ಹೌಸ್ ವೃತ್ತದಲ್ಲಿ ರಾತ್ರೋರಾತ್ರಿ ಸುತ್ತೂರು ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಪ್ರತಿಮೆಯನ್ನು ಅಕ್ರಮವಾಗಿ ತಂದು ನಿಲ್ಲಿಸಿದ್ದಾರೆಂದು ಆರೋಪಿಸಿ ಅದನ್ನು ತೆರವು ಮಾಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಲು ಮುಂದಾದ ಪ್ರತಿಭಟನಾಕಾರರನ್ನು ಪ್ರತಿಭಟನೆ ನಡೆಸುವುದಕ್ಕೂ ಮುನ್ನ ಪೊಲೀಸರು ವಶಕ್ಕೆ ಪಡೆದ ಘಟನೆ ನಡೆಯಿತು.
ಪ್ರತಿಮೆ ನಿರ್ಮಾಣ ಕಾನೂನು ಬಾಹಿರ ಕೂಡಲೇ ತೆರವು ಮಾಡಬೇಕು ಎಂದು ಹೋರಾಟ ಸಮಿತಿ ಸದಸ್ಯರು ಕಾಮಗಾರಿ ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ಮಾಡುವ  ಮುನ್ನ ಪಕ್ಕದಲ್ಲೇ ಇದ್ದ ಕುವೆಂಪು ಉದ್ಯಾನವನದ ಬಳಿ  ಜಮಾಯಿಸುತ್ತಿದ್ದಂತೆ ಸಮಿತಿ ಸದಸ್ಯರಾದ
ಮೈ.ಕಾ.ಪ್ರೇಮ್ ಕುಮಾರ್, ಯಮುನಾ, ಎಚ್.ಎಂ.ಟಿ.‌ಲಿಂಗರಾಜೇ ಅರಸ್ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದರು.
ಇದರಿಂದ ಸಿಟ್ಟಿಗೆದ್ದ ಉಳಿದ ಸದಸ್ಯರು ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ನೇತೃತ್ವದಲ್ಲಿ ನಗರ ಪಾಲಿಕೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ವೇಳೆ ಉಪ ಆಯುಕ್ತರು ಸ್ಥಳಕ್ಕೆ ಆಗಮಿಸಿ ಪ್ರತಿಮೆ ನಿರ್ಮಾಣದ ಕುರಿತು ಮತ್ತು ಅಲ್ಲಿ ನಡೆಯುತ್ತಿರುವ ಕಾಮಗಾರಿ ಸಂಬಂಧ ಸರಿಯಾದ ಉತ್ತರ ನೀಡದಿದ್ದರಿಂದ ಪ್ರತಿಭಟನಾಕರರು ಆಕ್ರೋಶ ವ್ಯಕ್ತಪಡಿಸಿದರು.‌ ವೇಳೆ ದಸಂಸ ಕಾರ್ಯಕರ್ತರುಗಳನ್ನು ಪೊಲೀಸರು ವಶಕ್ಕೆ ಪಡೆದು ಸಿಎಆರ್ ಮೈದಾನಕ್ಕೆ ಕರೆದೊಯ್ದರು.
ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಮಾತನಾಡಿ,  ಗನ್ ಹೌಸ್ ವೃತ್ತದಲ್ಲಿ ರಾತ್ರೋರಾತ್ರಿ ಅಕ್ರಮವಾಗಿ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ವೃತ್ತದಲ್ಲಿ ಏಳು ರಸ್ತೆಗಳು ಸೇರುತ್ತವೆ. ಸುಪ್ರೀಂ ಕೋಟ್೯ ಆದೇಶದ ಪ್ರಕಾರ ಯಾವುದೇ ಪ್ರತಿಮೆ ನಿರ್ಮಾಣ ಮಾಡುವ ಹಾಗಿಲ್ಲ.‌ಅಂತಹದರಲ್ಲಿ ಇಲ್ಲಿ ಹೇಗೆ ಪ್ರತಿಮೆಯನ್ನು ಹಾಕಲಾಯಿತು. ‌ಯಾರು ಇದನ್ನು ಅಕ್ರಮವಾಗಿ ನಿರ್ಮಿಸಿದರು ಎಂದು ಪ್ರಶ್ನಿಸಿದರೆ ಯಾವ ಅಧಿಕಾರಿಗಳು ಉತ್ತರ ನೀಡುತ್ತಿಲ್ಲ. ಅಲ್ಲಿ ಅಕ್ರಮವಾಗಿ ಕಾಮಗಾರಿಯನ್ನು ನಡೆಸಲಾಗುತ್ತಿದೆ. ಇದಕ್ಕೆ ನಗರಪಾಲಿಕೆಯವರು ಅನುಮತಿ ನೀಡಿದ್ದಾರಾ  ಎಂದು ಪ್ರಶ್ನಿಸಿದರೆ ಅದಕ್ಕೂ ನಗರ ಪಾಲಿಕೆ ಅಧಿಕಾರಿಗಳು ಉತ್ತರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೆ ಪಡುವಾರಹಳ್ಳಿ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆ ಹಾಕಿದ ವೇಳೆ ಇದೇ ನಗರಪಾಲಿಕೆ ಮತ್ತು ಪೊಲೀಸ್ ಅಧಿಕಾರಿಗಳು ಸುಪ್ರೀಂ ಕೋಟ್೯ ಆದೇಶದಂತೆ ರಸ್ತೆ ಮಧ್ಯೆ ಪ್ರತಿಮೆ ಹಾಕಲು ಅನುಮತಿ ಇಲ್ಲ ಎಂದು ಅಂಬೇಡ್ಕರ್ ಪ್ರತಿಮೆಯನ್ನೇ ತೆರವುಗೊಳಿಸಿದರು. ಆದರೆ ಇಲ್ಲಿ ಅಕ್ರಮವಾಗಿ ಪ್ರತಿಮೆ ನಿರ್ಮಾಣ ಮಾಡಿದರು.‌ ಜಿಲ್ಲಾಡಳಿತ ಕಣ್ಣು ಮುಚ್ಚಿ ಕುಳಿತಿರುವುದರ ಹಿಂದೆ ಯಾವ ಶಕ್ತಿ ಕೆಲಸ ಮಾಡುತ್ತಿದೆ ಎಂದು ಪ್ರಶ್ನಿಸಿದರು.
ಸುಪ್ರೀಂ ಕೋಟ್೯ ಸೂಚನೆಯನ್ನು ಪಾಲಿಸಿ ಪ್ರತಿಮೆ ತೆರವುಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ನಾವುಗಳು ಸಹ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುವುದಾಗಿ ಎಚ್ವರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಚೋರನಹಳ್ಳಿ ಶಿವಣ್ಣ, ಕೆ.ವಿ.ದೇವೇಂದ್ರ, ನಟರಾಜ್ ಹಾರೋಹಳ್ಳಿ, ಶಿವಮೂರ್ತಿ ಶಂಕರಪುರ, ಹಗಿನವಾಳು ಪ್ರಭುಸ್ವಾಮಿ, ವಿಕ್ರಾಂತ್ ಚಿಕ್ಕಲಿಂಗಯ್ಯ, ಅರಸನಕೆರೆ ಶಿವರಾಜ್, ಪಡುವಾರಹಳ್ಳಿ ಸತೀಶ್, ತಗಡೂರು ಲಿಂಗಯ್ಯ, ಬೊಮ್ಮಹಳ್ಳಿ ಮಹದೇವ್, ಆಲನಹಳ್ಳಿ ಸಿದ್ಧರಾಜು, ಬಿಳಿಕೆರೆ ದೇವರಾಜ್, ಸೋಮನಾಯಕ, ಅಣ್ಣಯ್ಯ ಭಾಗವಹಿಸಿ ಬಂಧನಕ್ಕೊಳಗಾದರು
.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು