ಪಾಂಡವಪುರ ತಾಲ್ಲೂಕು ಜಯಂತಿನಗರ ಗ್ರಾಮದಲ್ಲಿ ಸರ್ಕಾರಿ ಜಾಗದಲ್ಲಿ ಗುಡಿಸಲು ನಿರ್ಮಿಸಿ ನೂರಾರು ನಿವೇಶನ ರಹಿತ ಮಹಿಳೆಯರ ಪ್ರತಿಭಟನೆ

ಕೂಡಲೇ ಬಾಡಿಗೆ ನಿವಾಸಿಗಳಿಗೆ ನಿವೇಶನ ನೀಡುವಂತೆ ಒತ್ತಾಯ

ವರದಿ-ನಜೀರ್ ಅಹಮದ್, ಪಾಂಡವಪುರ

ಪಾಂಡವಪುರ : ಕಳೆದ ೨೦ ರಿಂದ ೩೦ ವರ್ಷಗಳಿಂದಲೂ ಕೂಲಿ ಮಾಡಿಕೊಂಡು ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ೫೦ಕ್ಕೂ ಹೆಚ್ಚು ಕುಟುಂಬಗಳು ಕೂಡಲೇ ಶಾಸಕರು ಮತ್ತು ಸರ್ಕಾರ ತಮಗೆ ನಿವೇಶನ ಒದಗಿಸುವಂತೆ ಒತ್ತಾಯಿಸಿ ಗ್ರಾಮದ ಮಹಿಳೆಯರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಗ್ರಾಪಂ ಸದಸ್ಯರಾದ ಮೋಹನ್ ಕುಮಾರ್ ಮತ್ತು ಪ್ರಕಾಶ್ ನೇತೃತ್ವದಲ್ಲಿ ಗ್ರಾಮದ ಪಕ್ಕದಲ್ಲಿರುವ ಸರ್ವೆ ನಂ.೧೮೬ ರಲ್ಲಿನ ಸರ್ಕಾರಿ ಜಾಗದಲ್ಲಿ ಗುಡಿಸಲುಗಳನ್ನು ನಿರ್ಮಿಸಿಕೊಳ್ಳುವ ಮೂಲಕ ಪ್ರತಿಭಟನೆ ನಡೆಸಿದ ಮಹಿಳೆಯರು, ಗ್ರಾಮದಲ್ಲಿ ಹಲವಾರು ನಿವೇಶನಗಳು ಖಾಲಿ ಇದ್ದು, ಗ್ರಾಪಂ ಸದಸ್ಯರು ಮತ್ತು ಪಿಡಿಒಗಳು ಸೇರಿ ಅಕ್ರಮವಾಗಿ ಪರಭಾರೆ ಮಾಡುತ್ತಿದ್ದಾರೆ. ಖಾಲಿ ಇರುವ ನಿವೇಶನಗಳನ್ನು ಗುರುತಿಸಿ ಅದಕ್ಕೆ ನಕಲಿ ದಾಖಲೆ ಸೃಷ್ಟಿಸಿ ಹಣಕ್ಕಾಗಿ ಬೇರೆಯವರಿಗೆ ಮಾರಾಟ ಮಾಡುತ್ತಿದ್ದಾರೆ. ಆದರೇ, ಗ್ರಾಮದಲ್ಲಿನ ಹಲವಾರು ನಿವೇಶನ ರಹಿತರಿಗೆ ಮನೆ ಕಟ್ಟಲು ಜಾಗ ಕೊಡುತ್ತಿಲ್ಲ. ಕೂಡಲೇ ಶಾಸಕರು ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಮಹಿಳೆಯರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಪ್ರಕಾಶ್ ಮಾತನಾಡಿ, ಕಳೆದ ೨೦ ರಿಂದ ೩೦ ವರ್ಷಗಳಿಂದ ನಮ್ಮ ಗ್ರಾಮದಲ್ಲಿ ಹಲವಾರು ಜನರು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಅವರಿಗೆ ನಿವೇಶನ ಕೊಡಿಸುವ ಬದಲು ಮನೆಗಳು ಇರುವವರೇ ಮತ್ತೆ ಜಗಗಳನ್ನು ಕಬಳಿಸುತ್ತಿದ್ದಾರೆ. ಈ ಬಗ್ಗೆ ಪಿಡಿಒ, ಗ್ರಾಪಂ ಅಧ್ಯಕ್ಷರು ಅಥವಾ ಇಒ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಕಿಡಿ ಕಾರಿದರು.
ಗ್ರಾಮದ ಮುಖಂಡ ನೂರುದ್ದೀನ್ ಪಾಷ ಮಾತನಾಡಿ, ಗ್ರಾಮದಲ್ಲಿ ಹಲವಾರು ನಿವೇಶನಗಳನ್ನು ಅಕ್ರಮವಾಗಿ ಪರಭಾರೆ ಮಾಡಿ ನಿಜವಾದ ಫಲಾನುಭವಿಗಳನ್ನು ವಂಚಿಸಲಾಗಿದೆ ಎಂದು ದೂರಿದರು.
ಗ್ರಾಪಂ ಸದಸ್ಯ ಮೋಹನ್ ಕುಮಾರ್ ಮಾತನಾಡಿ, ಜಯಂತಿನಗರ ಗ್ರಾಮದಲ್ಲಿ ಸರ್ಕಾರಿ ನಿವೇಶನಗಳ ಅಕ್ರಮ ಪರಭಾರೆ ಹೆಚ್ಚಾಗಿದೆ. ಇದರಲ್ಲಿ ಗ್ರಾಪಂ ಸದಸ್ಯರೂ, ಅಧಿಕಾರಿಗಳೂ ಶಾಮೀಲಾಗಿದ್ದಾರೆ. ಯಾವುದೋ ಪತ್ರ ತೋರಿಸಿ ಲೈಸೆನ್ಸ್ ಪಡೆದು ಇನ್ನೆಲ್ಲೋ ಮನೆ ಕಟ್ಟುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿ ಕೂಡಲೇ ನಿವೇಶನ ರಹಿತರಿಗೆ ಆಸರೆ ಕಲ್ಪಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಗ್ರಾಮದ ಮುಖಂಡರಾದ ಗ್ರಾಪಂ ಮಾಜಿ ಉಪಾಧ್ಯಕ್ಷ ಮಂಚಪ್ಪ, ನೂರುದ್ದೀನ್ ಪಾಷ, ಯಶೋದಮ್ಮ, ಲಕ್ಷ್ಮಮ್ಮ, ಕುಮಾರಿ, ಪೌಲಿನಾ, ಪ್ರಭಾವತಿ, ರುಕ್ಮಿಣಿ, ಅರುಣಾ, ನಾಗರತ್ನ ಮುಂತಾದವರು ಇದ್ದರು.     


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು