ಮೈಸೂರು : ನಗರದ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದ ಬೆಳ್ಳಿಯ ಸಾರೂಟಿನಲ್ಲಿ ವೀರಾಜಮಾನವಾಗಿದ್ದ ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಜಯ ಕರ್ನಾಟಕ ಸಂಘಟನೆ ಏರ್ಪಡಿಸಿದ್ದ ಅದ್ಧೂರಿ ಕನ್ನಡ ರಾಜ್ಯೋತ್ಸವಕ್ಕೆ ಶಾಸಕ ಜಿ.ಟಿ.ದೇವೇಗೌಡ ಚಾಲನೆ ನೀಡಿದರು.
ವಿವಿಧ ಜಾನಪದ ಕಲಾ ತಂಡಗಳು, ಶ್ವೇತ ವರ್ಣದ ಕುದುರೆಗಳು, ವಾದ್ಯಗಳೊಂದಿಗೆ ಕನ್ನಡ ಬಾವುಟ ಹಿಡಿದ ಸಾವಿರಾರು ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಕೋಟೆ ಆಂಜನೇಯ ಸ್ವಾಮಿ ದೇವಾಲಯದಿಂದ ಕಲಾಮಂದಿರದ ತನಕ ಮೆರವಣಿಗೆಯಲ್ಲಿ ಸಾಗಿದರು.
ಮೆರವಣಿಗೆಗೆ ಚಾಲನೆ ನೀಡಿದ ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಕನ್ನಡ ನೆಲ, ಜಲ, ಭಾಷೆಗಳ ಉಳಿವಿಗೆ ಸಂಘ ಸಂಸ್ಥೆಗಳ ಶ್ರಮ, ಕೊಡುಗೆ ಅಮೂಲ್ಯವಾದುದು ನಾಡು ನುಡಿಯ ವಿಷಯ ಬಂದಾಗ ರಾಜ್ಯದ ಎಲ್ಲ ಕನ್ನಡ ಪರ ಸಂಘಟನೆಗಳು ನಮ್ಮ ಭಾಷೆಯ ಪರವಾಗಿ ಹೋರಾಟಕ್ಕೆ ಮುಂಚೂಣಿಯಾಗಿ ನಿಲ್ಲುತ್ತಾರೆ. ಇದು ಅತ್ಯಂತ ಸ್ವಾಗತಾರ್ಹ ಎಂದರು. ಸಂಘ ಸಂಸ್ಥೆಗಳು ನಮ್ಮ ಭಾಷೆಯ ರಕ್ಷಣೆಗೆ ನಿಂತಿರುವ ಕಾವಲುಗಾರರು ಎಂದರು.
ಜಯ ಕರ್ನಾಟಕ ಸಂಘಟನೆಯ ರಾಜ್ಯಧ್ಯಕ್ಷರಾದ ಬಿ.ಎನ್. ಜಗದೀಶ್ ಭುವನೇಶ್ವರಿ ತಾಯಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿ, ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸುವ ಮೂಲಕ ನಮ್ಮ ಸಂಗಟನೆಯ ಮೈಸೂರು ಜಿಲ್ಲೆಯ ಪದಾಧಿಕಾರಿಗಳು ನಾಡು, ನುಡಿಯ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡಿರುವುದು ಸ್ವಾಗತಾರ್ಹ ಎಂದರು.
ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಅಧ್ಯಕ್ಷ ಶ್ರೀಧರ ನಾಯಕ, ನಗರಾಧ್ಯಕ್ಷ ಹರ್ಷ ಗೌಡ್ರು ಮುಂತಾದವರು ಇದ್ದರು.
0 ಕಾಮೆಂಟ್‌ಗಳು