ಗಾನವಿ ಫೌಂಡೇಷನ್
ಟೈಲರಿಂಗ್ ತರಬೇತಿ ಕಾರ್ಯಾಗಾರದ ಸಮಾರೋಪದಲ್ಲಿ ಅಡಿಷನಲ್ ಎಸ್‌ಪಿ ಡಾ.ಬಿ.ಎನ್.ನಂದಿನಿ
ಮೈಸೂರು : ಒಂದು
ಕುಟುಂಬ ಸಮಾಜದಲ್ಲಿ ಸದೃಢವಾಗಿ ನಿಲ್ಲಲು ಮುಖವಾಗಿ ಆರ್ಥಿಕ ಸ್ವಾವಲಂಬನೆ ಮುಖ್ಯವಾಗಿದ್ದು, ಕುಟುಂಬಗಳು ಸದೃಢವಾದರೆ ದೇಶವೂ ಅಭಿವೃದ್ಧಿಯಾಗುತ್ತದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಡಾ.ಬಿ.ಎನ್.ನಂದಿನಿ ಹೇಳಿದರು.
ಜ್ಯೋತಿನಗರ ಪೊಲೀಸ್ ಕ್ವಾಟ್ರಸ್ ಬಳಿಯ ಪೊಲೀಸ್ ಕ್ರೀಡಾ ಮತ್ತು ಸಾಂಸ್ಕೃತಿಕ ಭವನದಲ್ಲಿ ಮಂಗಳವಾರ ಸಂಜೆ ಗಾನವಿ ಫೌಂಡೇಷನ್ ಸಹಯೋಗದೊಂದಿಗೆ ಪೊಲೀಸ್ ಸಿಬ್ಬಂದಿಗಳ ಕುಟುಂಬದವರಿಗೆ ಏರ್ಪಡಿಸಿದ್ದ ಉಚಿತ ಟೈಲರಿಂಗ್ ತರಬೇತಿ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿದ್ದರೂ ನಾವಿಂದು ಮಹಿಳೆಯರ ಆರ್ಥಿಕ ಸ್ವಾವಲಂಬನೆ ಬಗ್ಗೆ ಯೋಚನೆ ಮಾಡುತ್ತಿದ್ದೇವೆ. ಮಹಿಳೆಗೆ ಧೈರ್ಯ, ವಿಶ್ವಾಸ, ಭರವಸೆ ತುಂಬುವ ಕೆಲಸವಾಗಬೇಕಿದೆ. ಇದರಿಂದ ಮಹಿಳೆ ಮತ್ತಷ್ಟು ಚೇತರಿಕೆ ಕಾಣಬಹುದು. ಈ ನಿಟ್ಟಿನಲ್ಲಿ ಇಂತಹ ತರಬೇತಿಗಳು ಅಗತ್ಯವಾಗಿದ್ದು, ಮಹಿಳೆಯರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಸ್ತುತ ದೇಶದಲ್ಲಿ ಸೈಬರ್ ಕ್ರೈಂ ಹೆಚ್ಚಾಗುತ್ತಿದೆ. ಮೊಬೈಲ್ಗಳಲ್ಲಿ ಬರುವ ಯಾವುದೇ ಅವಿಶ್ವಾಸನೀಯ ಆಪ್ಗಳನ್ನು ಡೌನ್ ಲೋಡ್ ಮಾಡಬಾರದು. ಅಥವಾ ಅಪರಿಚಿತ ವ್ಯಕ್ತಿಗಳಿಗೆ ತಮ್ಮ ವೈಯುಕ್ತಿಕ ವಿವರಗಳನ್ನು ನೀಡಬಾರದು. ವಿಶೇಷವಾಗಿ ನೀವು ಮನೆಗೆ ಬೀಗ ಹಾಕಿ ಎಲ್ಲೆ ಹೋದರೂ ಸ್ಟೇಟಸ್ ಹಾಕಬೇಡಿ. ನಿಮ್ಮ ಸ್ಟೇಟಸ್ ನೋಡಿಕೊಂಡು ಕಳ್ಳರು ನಿಮ್ಮ ಮನೆ ನುಗ್ಗಬಹುದು ಎಂಬ ಎಚ್ಚರಿಕೆಯನ್ನೂ ಸಹ ಅವರು ನೀಡಿದರು.
ಗಾನವಿ ಫೌಂಡೇಷನ್ ಅತ್ಯಂತ ತಾಳ್ಮೆ ಮತ್ತು ಶ್ರದ್ಧೆಯಿಂದ ಪೊಲೀಸ್ ಸಿಬ್ಬಂದಿಗಳ ಕುಟುಂಬದವರಿಗೆ ಸುಮಾರು ೧೦ ದಿನಗಳ ಕಾಲ ತರಬೇತಿ ನೀಡಿದೆ. ಇಷ್ಟೊಂದು ಕಡಿಮೆ ಅವಧಿಯಲ್ಲಿ ಮಹಿಳೆಯರು ಹೊಲಿಗೆ ಕಲಿತಿರುವುದು ಅತ್ಯಂತ ಸಂತೋಷಕರ ವಿಷಯ ಇದರ ಸಂಪೂರ್ಣ ಶ್ರೇಯಸ್ಸು ಗಾನವಿ ಫೌಂಡೇಷನ್ ಅವರ ಸಿಬ್ಬಂದಿಗಳಿಗೆ ಸಲ್ಲುತ್ತದೆ ಎಂದರು.
ಇದೇ ಸಂದರ್ಭದಲ್ಲಿ ತರಬೇತಿ ಕುರಿತು ರಾಣಿ ಕಿಶೋರ್, ಶೋಭಾ ಧನಂಜಯ್ಯ, ದೀಪಾ ಕಿರಣ್, ಆರ್.ಪಾರ್ವತಿ ಮಾತನಾಡಿ, ಸಿಬ್ಬಂದಿಗಳ ಮಕ್ಕಳಿಗೆ ಕಂಪ್ಯೂಟರ್ ಮತ್ತು ಡ್ರೈವಿಂಗ್ ತರಬೇತಿ ಕೊಡಿಸುವಂತೆ ಮನವಿ ಮಾಡಿದರು.
ಸಮಾರಂಭದಲ್ಲಿ ತರಬೇತಿ ಪಡೆದ ಸುಮಾರು ೨೪೩ ಮಹಿಳೆಯರಿಗೆ ಪ್ರಮಾಣ ಪತ್ರವನ್ನು ವೇದಿಕೆಯಲ್ಲಿದ್ದ ಗಣ್ಯರು ವಿತರಿಸಿದರು. ಗಾನವಿ ಫೌಂಡೇಷನ್ ಮುಖ್ಯಸ್ಥರಾದ ರಾಮೇಗೌಡ ಹಾಗೂ ಅಶ್ವಿನಿಯವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಉಪ ಪೊಲೀಸ್ ಆಯುಕ್ತರಾದ ಎ.ಮಾರುತಿ (ಸಿಎಆರ್) ಎ.ಜಿ.ಅಶೋಕ್ ಕುಮಾರ್( ಸಿಎಆರ್), ಅಶ್ವದಳದ ಕಮಾಂಡೆಂಟ್ ಶೈಲೇಂದ್ರ, ಸಿಎಆರ್ ಆರ್ಪಿಐ ಕೆ.ಎಂ.ಮೂರ್ತಿ, ಗಾನವಿ ಫೌಂಡೇಷನ್ ಮುಖ್ಯಸ್ಥರಾದ ರಾಮೇಗೌಡ, ಅಶ್ವಿನಿ ರಾಮೇಗೌಡ ಮುಂತಾದವರು ವೇದಿಕೆಯಲ್ಲಿದ್ದರು.
೧೦ ದಿನದಲ್ಲಿ ಫ್ರಾಕ್ ಹೊಲಿದಿದ್ದೇನೆ
ತರಬೇತಿಗೆ ಸೇರಿದಾಗ ನನಗೆ ಹೊಲಿಗೆ ಯಂತ್ರದ ಪೆಡಲ್ ತುಳಿಯಲು ಬರುತ್ತಿರಲಿಲ್ಲ.
೧೦ ದಿನಗಳಲ್ಲಿ ಮಕ್ಕಳ ಫ್ರಾಕ್ ಹೊಲಿಯುವಷ್ಟರ ಮಟ್ಟಿಗೆ ಪ್ರಾವೀಣ್ಯತೆ ಪಡೆದಿದ್ದೇನೆ. ಇದಕ್ಕೆ ಗಾನವಿ
ಫೌಂಡೇಷನ್ ತರಬೇತುದಾರರ ತಾಳ್ಮೆ, ಕಾರ್ಯಕ್ಷಮತೆ, ದಕ್ಷತೆ ಕಾರಣವಾಗಿದೆ.ಇದನ್ನು ಮತ್ತಷ್ಟು ತರಬೇತಿ
ಪಡೆದು ಟೈಲರಿಂಗ್ ನನ್ನ ವೃತ್ತಿಯಾಗಿ ಮಾಡಿಕೊಳ್ಳುವ ವಿಶ್ವಾಸ ಹೊಂದಿದ್ದೇನೆ.
ರಾಣಿ ಕಿಶೋರ್, ತರಬೇತಿ ಪಡೆದ ಮಹಿಳೆ
0 ಕಾಮೆಂಟ್‌ಗಳು