’ಕಿನಾರ’ ಕ್ಯಾಪಿಟಲ್‌ ನಿಂದ ಮಹಿಳಾ ಉದ್ಯಮಿಗಳಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯ

ಮೈಸೂರು : ನಗರದಲ್ಲಿ ಹೊಸದಾಗಿ ಪ್ರಾರಂಭಿಸಿರುವ ಕಿನಾರ ಕ್ಯಾಪಿಟಲ್ ಸಂಸ್ಥೆಯಿಂದ ವಿವಿಧ ಉದ್ಯಮಗಳಿಗೆ ಸಾಲ ನೀಡಲಾಗುತ್ತಿದ್ದು, ವಿಶೇಷವಾಗಿ ಮಹಿಳಾ ಉದ್ಯಮಿಗಳಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ನೀಡಲಾಗುತ್ತದೆ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತಿರುನಾವುಕ್ಕರಸು ತಿಳಿಸಿದರು.


ನಗರದ ಖಾಸಗಿ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ವಸ್ತ್ರೋದ್ಯಮ, ಆಟೋಮೊಬೈಲ್ ಕಾಂಪೋನೆಂಟ್ ತಯಾರಿಕೆ, ಆಹಾರ ಉದ್ಯಮ ಸೇರಿದಂತೆ ನಗರದಲ್ಲಿ ನಡೆಯುತ್ತಿರುವ ಪ್ರಮುಖ ಉದ್ಯಮಗಳಿಗೆ ಕನಿಷ್ಠ ೧ ಲಕ್ಷದಿಂದ ಗರಿಷ್ಠ ೩೦ ಲಕ್ಷ ರೂ ವರೆಗೆ ಯಾವುದೇ ಗ್ಯಾರಂಟಿ ಇಲ್ಲದೆ ಸಾಲ ನೀಡಲಾಗುತ್ತದೆ ಎಂದರು.

೨೦೧೧ ರಲ್ಲಿ  ಸ್ಥಾಪನೆಯಾದ ಕಿನಾರ ಕ್ಯಾಪಿಟಲ್ ಸಂಸ್ಥೆ  ಆರ್‌ಬಿಐ ಮಾರ್ಗದರ್ಶನ ಪಾಲಿಸುವ ಮೂಲಕ ಸುಮಾರು ೫ ಸಾವಿರ ಕೋಟಿ ರೂ. ವ್ಯವಹಾರ ನಡೆಸುತ್ತಿದೆ. ದೇಶಾದ್ಯಂತ ೧೩೩ ಶಾಖೆಗಳನ್ನು ಹೊಂದಿದ್ದೇವೆ. ಮೈಸೂರಿನಲ್ಲಿ ನಾವು ೫೭೫ ಕೋಟಿ ರೂ. ಹೂಡಿಕೆ ಮಾಡಲು ನಿರ್ಧರಿಸಿದ್ದು, ಈಗಾಗಲೇ ೪೦ ಕೋಟಿ ರೂ. ಸಾಲ ನೀಡಲಾಗಿದೆ ಎಂದರು.

ದೇಶಾದ್ಯಂತ ನಾವು ೯೦ ಸಾವಿರ ಉದ್ಯಮಿಗಳಿಗೆ ಸಾಲ ನೀಡಿದ್ದೇವೆ. ಈ ಪೈಕಿ ೧೦ ಸಾವಿರ ಮಹಿಳಾ ಉದ್ಯಮಿಗಳಿರುವುದು ವಿಶೇಷವಾಗಿದೆ. ರಾಜ್ಯದಲ್ಲಿ ನಾವು ೧೦೮೯ ಕೋಟಿ ರೂ. ಹೂಡಿಕೆ ಮಾಡಿದ್ದು, ನಮ್ಮ ಒಟ್ಟು ವಹಿವಾಟಿನ ಶೇ. ೨೫ ರಷ್ಟು ಬಂಡವಾಳವನ್ನು ಕರ್ನಾಟಕದಲ್ಲೇ ಹೂಡಲಾಗಿದೆ. ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅವರಿಗೆ ಕಡಿಮೆ ಬಡ್ಡಿ ಮತ್ತು ಇನ್ನಿತರ ಪ್ರೋತ್ಸಾಹಗಳನ್ನು ನೀಡುತ್ತಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮೈಸೂರು ವಿಭಾಗದ ಮುಖ್ಯಸ್ಥರಾದ ಅನುರಾಧ ನಟರಾಜ್‌ ಇದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು