ಗೌರಿ-ಗಣೇಶ, ಈದ್ ಮಿಲಾದ್ ಶಾಂತಿ ಸೌಹಾರ್ದತೆಯಿಂದ ಆಚರಿಸಲು ರಫತ್ ಖಾನ್ ಮನವಿ

ಮೈಸೂರು : ಹಿಂದೂ-ಮುಸಲ್ಮಾನರು ಅತ್ಯಂತ ಶ್ರದ್ದಾ ಭಕ್ತಿಯಿಂದ ಆಚರಿಸುವ ಗೌರಿ-ಗಣೇಶ ಮತ್ತು ಈದ್‌ ಮಿಲಾದ್‌ ಹಬ್ಬಗಳು ಒಂದೇ ಮಾಸದಲ್ಲಿ ಬಂದಿರುವುದರಿಂದ ಎಲ್ಲರೂ ಶಾಂತಿ ಸೌಹಾರ್ದತೆಯಿಂದ ತಮ್ಮ ತಮ್ಮ ಹಬ್ಬಗಳನ್ನು ಆಚರಣೆ ಮಾಡಬೇಕೆಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ರಫತ್‌ ಖಾನ್‌ ಕರೆ ನೀಡಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಗೌರಿ ಗಣೇಶ ಮತ್ತು ಈದ್‌ ಮಿ;ಲಾದ್‌ ಹಬ್ಬಗಳು ಒಂದೇ ಮಾಸದಲ್ಲಿ ಬರುವುದರ ಮೂಲಕ ಎರಡೂ ಸಮುದಾಯಗಳನ್ನು ಒಗ್ಗೂಡಿಸುವ ದೃಷ್ಟಿಯಿಂದ ಪ್ರಕೃತಿಯೇ ನಮಗೆ ಇಂತಹ ಸುವರ್ಣ ಅವಕಾಶ ನೀಡಿದೆ. ಇದನ್ನು ನಾವು ಸದ್ಬಳಕೆ ಮಾಡಿಕೊಂಡು ಜಗತ್ತಿಗೆ ಸೌಹಾರ್ದತೆಯ ಉತ್ತಮ ಸಂದೇಶ ನೀಡಬೇಕಿದೆ. ಈ ಅವಕಾಶವನ್ನು ನಾವು ಅತ್ಯಂತ ಉಪಯುಕ್ತವಾಗಿ ಬಳಸಿಕೊಂಡು ಪರಸ್ಪರ ಧರ್ಮಗಳ ಆಚರಣೆಗಳನ್ನು ಗೌರವಿಸೋಣ. ಯಾವುದೇ ಕಾರಣಕ್ಕೂ ಅಶಾಂತಿ ಸೃಷ್ಟಿಗೆ ಅವಕಾಶ ನೀಡಬಾರದು ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಈ ನಿಟ್ಟಿನಲ್ಲಿ ಪೊಲೀಸರೂ ಸಹ ನಿಯಮಾನುಸಾರ ಸೂಕ್ತ ಕ್ರಮಕ್ಕೆ ಮುಂದಾಗಬೇಕು. ಕೆಲವು ಕಿಡಿಗೇಡಿಗಳು ಶಾಂತಿ ಕದಡುವ ದೃಷ್ಟಿಯಿಂದ ಪ್ರಚೋದನಕಾರಿ ಹೇಳಿಕೆ ನೀಡುವುದು, ಅಸಭ್ಯವಾಗಿ ವರ್ತಿಸುವುದನ್ನು ಮಾಡುತ್ತಾರೆ. ಪೊಲೀಸರು ಇದಕ್ಕೆ ಆಸ್ಪದ ನೀಡಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ವದಂತಿಗಳನ್ನು ಹರಿಬಿಟ್ಟರೆ ಅಂತಹವರ ಮೇಲೆ ಸೂಕ್ಷ್ಮ ನಿಗಾ ವಹಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಅವರು ಒತ್ತಾಯಿಸಿದರು.
ನಗರ ಮತ್ತು ಜಿಲ್ಲಾದ್ಯಂತ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಸಾಧ್ಯವಾದಷ್ಟು ಶಾಂತಿ ಸಭೆಗಳನ್ನು ನಡೆಸಿ ಸಾರ್ವಜನಿಕರಿಗೆ ತಿಳಿವಳಿಕೆ ನೀಡುವುದು. ಪರಸ್ಪರ
 ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ ಶಾಂತಿಯುತವಾಗಿ ಆಚರಣೆಗಳನ್ನುನಡೆಸುವಂತೆ ಸಲಹೆ ನೀಡಬೇಕೆಂದು ಅವರು ಕೋರಿದ್ದಾರೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು