ಗಾನವಿ ಫೌಂಡೇಷನ್ ನಿಂದ ಪೊಲೀಸ್ ಕುಟುಂಬದ ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ಕಾರ್ಯಾಗಾರಕ್ಕೆ ಚಾಲನೆ
ಸೆಪ್ಟೆಂಬರ್ 21, 2023
ಮೈಸೂರು : ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕುಟುಂಬದ
ಮಹಿಳಾ ಸದಸ್ಯರು ತಮ್ಮ ಬಿಡುವಿನ ವೇಳೆಯನ್ನು ಕ್ರಿಯಾಶೀಲವಾಗಿ ಕಳೆಯಲು ಟೈಲರಿಂಗ್ ಸೇರಿದಂತೆ ಇನ್ನಿತರ
ತರಬೇತಿಗಳು ಸಹಾಯಕವಾಗಿವೆ. ಇದರಿಂದ ಕುಟುಂಬದ ಆರ್ಥಿಕ ಪರಿಸ್ಥಿತಿಯೂ ಸುಧಾರಿಸುತ್ತದೆ ಎಂದು ನಗರ
ಪೊಲೀಸ್ ಆಯುಕ್ತ ಬಿ.ರಮೇಶ್ ಹೇಳಿದರು. ಇಲ್ಲಿನ ಜ್ಯೋತಿನಗರ ಪೊಲೀಸ್ ಕ್ವಾಟ್ರಸ್ ಬಳಿಯ ಕ್ರೀಡಾ ಮತ್ತು
ಸಾಂಸ್ಕೃತಿಕ ಭವನದಲ್ಲಿ ಮೈಸೂರು ನಗರ ಪೊಲೀಸ್ ಮತ್ತು ಗಾನವಿ ಫೌಂಡೇಷನ್ ಸಹಯೋಗದೊಂದಿಗೆ ಏರ್ಪಡಿಸದ್ದ
ಉಚಿತ ಹೊಲಿಗೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಬಿಡುವಿನ ವೇಳೆಯಲ್ಲಿ ಮೊಬೈಲ್‌ಫೋನ್,ಟಿವಿ ದಾರಾವಾಹಿ
ಮುಂತಾದವುಗಳನ್ನು ನೋಡುವ ಮೂಲಕ ವ್ಯರ್ಥವಾಗಿ ಕಾಲ ಕಳೆಯುವುದು ಸರಿಯಲ್ಲ. ತಮ್ಮ ಬಿಡುವಿನ ಸಮಯವನ್ನು
ತಮ್ಮ ಕುಟುಂಬದ ಆರ್ಥಿಕತೆಯನ್ನು ಸುಧಾರಿಸುವ ಕೆಲಸಗಳಲ್ಲಿ ತೊಡಗಬೇಕು. ಟೈಲರಿಂಗ್ ಮಾತ್ರವಲ್ಲ ಇನ್ಯಾವುದೇ
ತರಬೇತಿ ಬೇಡಿಕೆ ಇದ್ದರೂ ಅದನ್ನು ಆಯೋಜಿಸಲಾಗುವುದು. ಜತೆಗೆ ವಿವಿಧ ಕೈಗಾರಿಕೋದ್ಯಮಗಳ ಸಿಎಸ್‌ಆರ್
ಫಂಡ್ ಮೂಲಕ ತರಬೇತಿ ಮುಗಿಸಿದವರಿಗೆ ಉಚಿತವಾಗಿ ಹೊಲಿಗೆ ಯಂತ್ರ ಕೊಡಿಸುವ ಪ್ರಯತ್ನವನ್ನೂ ನಾವು ಮಾಡುತ್ತೇವೆ
ಎಂದು ಹೇಳಿದರು. ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮಕ್ಕಳು ಶೈಕ್ಷಣಿಕವಾಗಿ
ಉತ್ತಮ ಸಾಧನೆ ಮಾಡುತ್ತಿರುವುದು ಸಂತಸ ತಂದಿದೆ. ಈ ಯಶಸ್ಸು ಆಯಾ ಕುಟುಂಬಗಳ ಮಹಿಳೆಯರಿಗೆ ಸಲ್ಲುತ್ತದೆ.
ಪೊಲೀಸರು ತಮ್ಮ ಕೆಲಸಗಳ ಒತ್ತಡದಲ್ಲಿ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಗಮನ ಹರಿಸಲು ಸಾಧ್ಯವಾಗುವುದಿಲ್ಲ
ಎಂಬ ಸತ್ಯದ ಅರಿವು ನನಗಿದೆ. ನಮ್ಮ ಮಕ್ಕಳ ಶಿಕ್ಷಣ ಮತ್ತು ಅವರ ಸರ್ವತೋಮುಖ ಅಭಿವೃದ್ಧಿಯ ಸಂಪೂರ್ಣಜವಾಬ್ದಾರಿ ಆಯಾ ಕುಟುಂಬದ ಮಹಿಳೆಯದ ಮೇಲಿದೆ. ಪ್ರಸಕ್ತ
ಸಾಲಿನಲ್ಲಿ ಪೊಲೀಸ್ ಅಧಿಕಾರಿಗಳ 6 ಜನ ಮಕ್ಕಳು ನೀಟ್‌ನಲ್ಲಿ ಉತ್ತಮ ಸಾಧನೆ ಮಾಡಿ ಉಚಿತವಾಗಿ ಸರ್ಕಾರಿ
ಮೆಡಿಕಲ್ ಸೀಟು ಗಿಟ್ಟಿಸಿದ್ದಾರೆ.ಇದರೊಂದಿಗೆ ಇತರೆ ಹಲವು ಕೋರ್ಸ್‌ಗಳಿಗೂ ಉಚಿತ ಸೀಟು ಪಡೆದಿದ್ದಾರೆ.
ಇದರ ಸಂಪೂರ್ಣ ಯಶಸ್ಸು ಆಯಾ ಕುಟುಂಬದ ಮಹಿಳೆಯರಿಗೆ ಸಲ್ಲಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು
ಮತ್ತು ಸಿಬ್ಬಂದಿಗಳು ತಮ್ಮಕುಟುಂಬದ ಮಹಿಳೆಯರ ಅಭಿವೃದ್ಧಿಗೆ ಸಹಕಾರ ನೀಡಬೇಕು. ಮನೆಯೊಡತಿ ಸಂತಸವಾಗಿದ್ದರೆ
ಇಡೀ ಕುಟುಂಬ ಸಂತಸವಾಗಿರುತ್ತದೆ ಎಂದರು.
ಈ ಸಂದರ್ಭದಲ್ಲಿ 170 ಕ್ಕೂ ಹೆಚ್ಚು ಮಹಿಳೆಯರು ತರಬೇತಿಗೆ ತಮ್ಮ
ಹೆಸರು ನೋಂದಾಯಿಸಿಕೊಂಡರು. ಜತೆಗೆ ಗಾನವಿ ಫೌಂಡೇಷನ್ ವತಿಯಿಂದ ಅತ್ಯಾಧುನಿಕ ಎಂಬ್ರಾಯಿಡಿ ಯಂತ್ರದ
ಮೂಲಕ ಸ್ಟಿಚ್ ಮಾಡಿದ ಭಾವ ಚಿತ್ರಗಳನ್ನು ಮೈಸೂರು ಪೊಲೀಸ್ ಆಯುಕ್ತ ಬಿ.ರಮೇಶ್ ಮತ್ತು ಡಿಸಿಪಿ
ಎ.ಮಾರುತಿ ಅವರಿಗೆ ಕೊಡುಗೆಯಾಗಿ ನೀಡಲಾಯಿತು. ವೇದಿಕೆಯಲ್ಲಿ ಡಿಸಿಪಿ ಎ.ಮಾರುತಿ, ಎಸಿಪಿ ಹರ್ಷಕುಮಾರ್, ಗಾನವಿ
ಫೌಂಡೇಷನ್ ನಿರ್ದೇಶಕರಾದ ರಾಮೇಗೌಡ, ಅಶ್ವಿನಿ ರಾಮೇಗೌಡ ಮುಂತಾದವರು ಇದ್ದರು. ಮಹಿಳಾ ಸಬಲೀಕರಣದತ್ತ ಗಾನವಿ ಪೌಂಡೇಷನ್ ಕುಟುಂಬದ ಯಜಮಾನಿಯಾದ ಮಹಿಳೆಯು ಆರ್ಥಿಕವಾಗಿ ಸದೃಢಳಾಗಿದ್ದರೆ ಮಾತ್ರ
ಇಡೀ ಕುಟುಂಬ ಸಂತಸವಾಗಿರುತ್ತದೆ. ನಿರುದ್ಯೋಗಿ ಮಹಿಳೆಯರ ಆರ್ಥಿಕತೆ ಸುಧಾರಿಸಲು ಅವರಿಗೆ ಅಗತ್ಯ ತರಬೇತಿ
ಮತ್ತು ನೆರವು ನೀಡಬೇಕು. ಈ ನಿಟ್ಟಿನಲ್ಲಿ ಗಾನವಿ ಫೌಂಡೇಷನ್ ಮಹಿಳಾ ಸಬಲೀಕರಣದತ್ತ ಹೆಜ್ಜೆಇಟ್ಟಿದ್ದು
ನಮ್ಮ ಸಂಸ್ಥೆ ಅಗತ್ಯ ತರಬೇತಿ ಮತ್ತು ಮಾರ್ಗದರ್ಶನ ನೀಡುವ ಮೂಲಕ ಮಹಿಳಾ ಸಬಲೀಕರಣದತ್ತ ಕಾರ್ಯೋನ್ಮುಖವಾಗಿದೆ. ರಾಮೇಗೌಡ,
ನಿರ್ದೇಶಕರು ಗಾನವಿ ಫೌಂಡೇಷನ್
ಮಹಿಳೆಯರು ಉನ್ನತ ಶಿಕ್ಷಣ ಪಡೆಯಬೇಕು ವಿವಾಹಿತ ಮಹಿಳೆಯರು ತಮ್ಮ ಶಿಕ್ಷಣವನ್ನು ಮುಂದುವರಿಸಬೇಕು. ದೂರ
ಶಿಕ್ಷಣ ಸೌಲಭ್ಯ ನಿಮ್ಮ ನೆರವಿಗಿದೆ. ಅನೇಕ ವಿವಾಹಿತ ಮಹಿಳೆಯರು ಐಎಎಸ್, ಐಪಿಎಸ್ ಸೇರಿದಂತೆ ಹಲವಾರು
ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಉನ್ನತ ಮಟ್ಟದ ಹುದ್ದೆ ಗಳಿಸಿದ್ದಾರೆ. ಇದರಿಂದ ನೀವು ಸ್ಪೂರ್ತಿ ಪಡೆಯಬೇಕು. ಬಿ.ರಮೇಶ್,
ಮೈಸೂರು ಪೊಲೀಸ್ ಆಯುಕ್ತರು.
0 ಕಾಮೆಂಟ್‌ಗಳು