ರೈಲ್ವೆ ಗೂಡ್ಸ್ ಶೆಡ್ ನಿಂದ ರಿಂಗ್ ರಸ್ತೆಗೆ ನೇರ ಸಂಪರ್ಕ : ತನ್ವೀರ್ ಸೇಠ್
ಸೆಪ್ಟೆಂಬರ್ 19, 2023
ಮೈಸೂರು : ನಗರದ ರೈಲ್ವೆ ಗೂಡ್ಸ್ ಶೇಡ್ ನಿಂದ ರಿಂಗ್ ರಸ್ತೆಗೆ
ನೇರ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಶೀಘ್ರದಲ್ಲೇ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ತನ್ವೀರ್
ಸೇಠ್ ಹೇಳಿದರು. ನಗರದ ಎಂಎನ್‌ಜಿಟಿ ರೈಲ್ವೆ ಗೂಡ್ಸ್ ಶೇಡ್ ಲಾರಿ ಮಾಲಿಕರ ಸಂಘದವರು
ಏರ್ಪಡಿಸಿದ್ದಸಮಾರಂಭದಲ್ಲಿ ಲಾರಿ ಮಾಲಿಕರ ಕುಂದು ಕೊರತೆಗಳನ್ನುವಿಚಾರಿಸಿ ಅವರು ಮಾತನಾಡಿದರು. ವಿವಿಧ ಸರಕುಗಳನ್ನು ತುಂಬಿಕೊಂಡು ಬರುವ ಲಾರಿಗಳು ಈಗ ಜೋಡಿ ತೆಂಗಿನ
ಮರ ರಸ್ತೆಯಲ್ಲಿ ಸಂಚರಿಸುತ್ತಿವೆ. ಇದರಿಂದ ಈ ಭಾಗದಲ್ಲಿ ಹಲವು ಅಪಘಾತಗಳು ಸಹ ನಡೆದಿವೆ. ಈ ರಸ್ತೆಯಲ್ಲಿ
ಭಾರಿ ಸರಕು ವಾಹನಗಳ ಸಂಚಾರ ದಟ್ಟವಾಗಿರುವುದರಿಂದ ಇಲ್ಲಿ ರೈಲ್ವೆ ಗೂಡ್ಸ್ ಶೆಡ್ ಲಾರಿಗಳ ಸಂಚಾರ
ತಪ್ಪಿಸಿ ನೇರವಾಗಿ ರಿಂಗ್ ರಸ್ತೆಗೆ ಸಂಪರ್ಕ ಕಲ್ಪಿಸುವ ಯೋಜನೆ ಪ್ರಗತಿಯಲ್ಲಿದೆ. ೧೫ ಅಡಿ ಹಳ್ಳದಲ್ಲಿ
ಮಣ್ಣನ್ನು ತುಂಬಿ ರಸ್ತೆ ಮಾಡಿದ್ದೇವೆ. ಈ ರಸ್ತೆಯ ೧೫೦ ಮೀಟರ್ ಭಾಗ ರೈಲ್ವೆ ಇಲಾಖೆಗೆ ಸೇರಿರುವ
ಕಾರಣ ಸಂಸದರು, ಜಿಲ್ಲಾಧಿಕಾರಿಗಳು ಮತ್ತು ರೈಲ್ವೆ ಡಿವಿಜನಲ್ ಮ್ಯಾನೇಜರ್ ಅವರೊಂದಿಗೆ ಈ ಹಿಂದೆಯೂ
ಚರ್ಚಿಸಿದ್ದೇವೆ. ಈಗಲೂ ಈ ಬಗ್ಗೆ ಮಾತುಕತೆ ನಡೆಸಿ ಅದೊಂದು ಸಮಸ್ಯೆಗೆ ಪರಿಹಾರ ಕಂಡು ಕೊಂಡರೆ ರಿಂಗ್
ರಸ್ತೆಗೆ ನೇರ ಸಂಪರ್ಕ ಸುಲಭವಾಗುತ್ತದೆ. ಜತೆಗೆ ಗೂಡ್ಸ್ ಶೆಡ್ ಬಳಿ ಸಾಮೂಹಿಕ ಶೌಚಾಲಯ ನಿರ್ಮಿಸಲು
ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಕುಡಿಯುವ ನೀರು, ಬೀದಿ ದೀಪ ಮುಂತಾದವುಗಳನ್ನೂ ಸಹ ಕಲ್ಪಿಸಲಾಗುವುದು
ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕೋದಂಡರಾಮು, ಎಂಎನ್‌ಜಿಟಿ ರೈಲ್ವೆ ಗೂಡ್ಸ್ ಶೇಡ್ ಲಾರಿ ಮಾಲಿಕರ
ಸಂಘದ ಅಧ್ಯಕ್ಷ ಪೀರ್ ಬಾಷಾ, ಉಪಾಧ್ಯಕ್ಷ ದಾದಾಪೀರ್, ಕಾರ್ಯದರ್ಶಿ ಅಬ್ದುಲ್ ಖಾದರ್ ಅಲಿಯಾಸ್
ಶಾಹೀದ್ ಮುಂತಾದವರು ಇದ್ದರು.