ಕೊನೆಗೂ ಜೆಡಿಎಸ್‌ನ ಜಾತ್ಯತೀತ ಮುಖವಾಡ ಕಳಚಿ ಬಿದ್ದಿದೆ : ಎಸ್‌ಡಿಪಿಐ ಜಿಲ್ಲಾಧ್ಯಕ್ಷ ರಫತ್‌ ಖಾನ್ ಟೀಕೆ

ಜಾತ್ಯತೀತ ತತ್ವ ಬೆಂಬಲಿಸಿ ಕೋಮುವಾದ ವಿರೋಧಿಸುವ ಮುಖಂಡರು ಎಸ್‌ಡಿಪಿಐ ಸೇರಲು ಇದು ಸಕಾಲ 

ಮೈಸೂರು : ಕೊನೆಗೂ ಜೆಡಿಎಸ್‌ ಪಕ್ಷದ ಜಾತ್ಯತೀತ ಮುಖವಾಡ ಕಳಚಿಬಿದ್ದಿದ್ದು, ಭಯಮುಕ್ತ, ಹಸಿವು ಮುಕ್ತ ತತ್ವ ಸಿದ್ದಾಂತಕ್ಕೆ ನಾವು ಬದ್ಧರಾಗಿದ್ದು, ಜಾತ್ಯತೀತ  ಮುಖಂಡರು ಜೆಡಿಎಸ್‌ನಿಂದ ಹೊರಬಂದು ಎಸ್‌ಡಿಪಿಐ ಸೇರಲು ಇದು ಸಕಾಲ ಎಂದು ಎಸ್‌ಡಿಪಿಐ ಜಿಲ್ಲಾ ಅಧ್ಯಕ್ಷ ರಫತ್‌ ಖಾನ್‌ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಜೆಡಿಎಸ್‌ ಬಿಜೆಪಿಯ ಬಿ ಟೀಂ ಎಂದು ಸಾಬೀತಾಗಿದೆ. ಜತೆಗೆ ಸೆಕ್ಯುಲರ್ ಎನ್ನುವ ಹೆಸರು ಇಟ್ಟುಕೊಂಡಿರುವ ಜೆಡಿಎಸ್ ಪಕ್ಷದ ಬಣ್ಣವೂ ಬಯಲಾಗಿದೆ. . ಅಧಿಕಾರದ ಆಸೆಗಾಗಿ ಅವರು ತಮ್ಮ ಪಕ್ಷದ ಸಿದ್ಧಾಂತಗಳನ್ನು ತತ್ವ, ನಿಷ್ಠೆಗಳನ್ನು ಮಾರಿಕೊಂಡಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.
2024 ಲೋಕಸಭೆ ಚುನಾವಣೆಯನ್ನು ಒಟ್ಟಾಗಿ ಎದುರಿಸಲು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತಿರುವುದು ನಿಜವಾದರೆ ಜೆಡಿಎಸ್ ತನ್ನ ಸಿದ್ಧಾಂತವನ್ನು ಹೇಗೆ ಉಳಿಸಿಕೊಳ್ಳುತ್ತದೆ ಎಂದು ರಫತ್‌ ಖಾನ್‌ ಪ್ರಶ್ನಿಸಿದ್ದಾರೆ.
ಸದ್ಯ ಜೆಡಿಎಸ್‌ಗೆ ಮಂಡ್ಯ, ಕೋಲಾರ, ತುಮಕೂರು ಮತ್ತು ಹಾಸನ ಲೋಕಸಭಾ ಸ್ಥಾನಗಳು ಸಿಗುವ ಸಾಧ್ಯತೆ ಇದ್ದರೂ ಈ ಅಪವಿತ್ರ ಮೈತ್ರಿಯಿಂದ ಬಿಜೆಪಿ-ಜೆಡಿಎಸ್ ಗೆ ಯಾವುದೇ ಲಾಭವಿಲ್ಲ. ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ ಮಂಡ್ಯದಲ್ಲಿ ೭ ಶಾಸಕರಿದ್ದರೂ ನಿಖಿಲ್‌ ಅವರನ್ನು  ಗೆಲ್ಲಿಸಲು ಆಗಲಿಲ್ಲ. ಈಗಾಗಲೇ ಜೆಡಿಎಸ್‌ನ ಈ ಕೋಮುವಿರೋಧಿ ನಡೆಯಿಂದ ಪಕ್ಷದ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದ ಜನರಷ್ಟೇ ಅಲ್ಲದೇ ಮಂಡ್ಯದಲ್ಲಿಬಹಳಷ್ಟು ಒಕ್ಕಲಿಗ ಸಮುದಾಯದ ಮುಖಂಡರು ಜೆಡಿಎಸ್‌ ಬಿಜೆಪಿ ಜತೆ ಹೋಗುವುದನ್ನು ವಿರೋಧಿಸಿದ್ದಾರೆ.
ಈ ಹಿನ್ನಲೆ ಹಸಿವು ಮತ್ತು ಭಯಮುಕ್ತ ರಾಜಕಾರಣದ ಸಿದ್ದಾಂತ ಹೊಂದಿರುವ ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ ಪಕ್ಷವು ಜೆಡಿಎಸ್‌ ಪಕ್ಷದಿಂದ ಹೊರ ಬರುವ ಯಾವುದೇ ನಾಯಕರನ್ನು ಪಕ್ಷಕ್ಕೆ ಸ್ವಾಗತಿಸುತ್ತಿದ್ದು, ಅರ್ಹತೆಗೆ ಅನುಗುಣವಾಗಿ ನಾವು ಸ್ಥಾನ ಮಾನ ಕಲ್ಪಿಸಿ ಅವರನ್ನು ನಾಯಕರನ್ನಾಗಿ ಬೆಳೆಸಿ ಉತ್ತಮ ಸಮಾ ಜ ನಿರ್ಮಾಣದತ್ತ ಹೆಜ್ಜೆ ಹಾಕುತ್ತೇವೆ ಎಂದು ಅವರು ಹೇಳಿದ್ದಾರೆ.
ಕುಟುಂಬದವರಿಗೆ ಅಧಿಕಾರ ಕೊಡಿಸಲು ಪಕ್ಷ ಬಲಿ:
ಮಾಜಿ ಸಿಎಂ ಕುಮಾರಸ್ವಾಮಿ ಅವರು, ಪಕ್ಷದ ಕಾರ್ಯಕರ್ತರು ಅಥವಾ ಮುಖಂಡರಿಗೆ ಟಿಕೇಟ್‌ ಕೇಳುತ್ತಿಲ್ಲ ಬದಲಾಗಿ ತಮ್ಮ ಮನೆಯವರಿಗೆ ಟಿಕೆಟ್‌  ಕೇಳುತ್ತಿದ್ದಾರೆ. ಆ ಮೂಲಕ ತಮ್ಮ ಕುಟುಂಬದ ರಕ್ಷಣೆಗಾಗಿ ಇಡೀ ಪಕ್ಷದ ತತ್ವ ಸಿದ್ಧಾಂತವನ್ನು ಬಲಿಕೊಟ್ಟು, ಕಾರ್ಯಕರ್ತರನ್ನು ದಾರಿ ತಪ್ಪಿಸುತ್ತಿದ್ದಾರೆ.
ಇನ್ನು ಬಿಜೆಪಿ ಚುನಾವಣೆ ಮುಗಿದು ನಾಲ್ಕು ತಿಂಗಳಾದರೂ ಬಿಜೆಪಿಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಆಗಿಲ್ಲ. ಇದು ಜನರಿಂದ ತಿರಸ್ಕೃತವಾಗಿರುವ ಪಕ್ಷ. ಈಗಾಗಲೇ ಮುಳುಗಿ ಹೋಗಿರುವ ಹಡಗು. ಸಂಪೂರ್ಣ ಹತಾಶ ಸ್ಥಿತಿ ತಲುಪಿರುವ ಬಿಜೆಪಿಗೆ ಯಾವ ಭವಿಷ್ಯವೂ ಇಲ್ಲ.
ರಫತ್‌ ಖಾನ್‌, ಜಿಲ್ಲಾಧ್ಯಕ್ಷರು ಎಸ್‌ಡಿಪಿಐ
 
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು