ಶೀಘ್ರದಲ್ಲೆ ಚಂದ್ರೆ ಬಡಾವಣೆಯಲ್ಲಿ ನಿವೇಶನ ಹಂಚಿಕೆ : ಹರಳಹಳ್ಳಿ ಬಡಾವಣೆಗೆ ಮೂಲ ಸೌಕರ್ಯ

ಪಾಂಡವಪುರ : ಚಂದ್ರೆ ಬಡಾವಣೆಯ ನಿವೇಶನಗಳ ತಕರಾರು ನ್ಯಾಯಾಧೀಶರ ಸಮ್ಮುಖದಲ್ಲಿ ಬಗೆಹರಿದಿದ್ದು ಶೀಘ್ರದಲ್ಲೇ ನಾವುಗಳು ಅಲ್ಲಿ ಸದಸ್ಯರಿಗೆ ನಿವೇಶನಗಳನ್ನು ಹಂಚುತ್ತೇವೆ ಎಂದು ಪಾಂಡವಪುರ ತಾಲ್ಲೂಕು ಗೃಹ ನಿರ್ಮಾಣ ಸಹಕಾರ ಸಂಘದ ಅದ್ಯಕ್ಷ ಜಿ.ಇ.ರವಿಕುಮಾರ್‌ ಭರವಸೆ ನೀಡಿದರು.
ಪಟ್ಟಣದ ಟಿಎಪಿಸಿಎಂಎಸ್‌ ಸಭಾಂಗಣದಲ್ಲಿ ಪಾಂಡವಪುರ ತಾಲೂಕು ಗೃಹ ನಿರ್ಮಾಣ
ಸಹಕಾರ ಸಂಘದ 2022-23ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿದರು.
ಚಂದ್ರೆ ಗ್ರಾಮದ ಬಳಿ ನಿವೇಶನಕ್ಕಾಗಿ ಭೂಮಿ ಖರೀದಿಸಲು ನಾವು ವ್ಯಕ್ತಿಯೊಬ್ಬರಿಗೆ 1.30 ಕೋಟಿ ರೂ. ನೀಡಿದ್ದು, ಅವರು ತಕರಾರು ಮಾಡಿದ್ದರು. ನಾವು ಈಗ ನ್ಯಾಯಾಲಯದ ಮೆಟ್ಟಿಲೇರಿದ ಕಾರಣ ಸಮಸ್ಯೆ ಸುಖಾಂತ್ಯವಾಗಿದೆ. ನಮ್ಮ ಹಣ ೧.೩೦ ಕೋಟಿಗಳಿಗೆ ಆಗುವಷ್ಟು ನಿವೇಶನ ನೀಡಲು ಅವರು ಒಪ್ಪಿದ್ದಾರೆ ಎಂದರು.
ಇದಾದ ಬಳಿಕವೂ 1.30 ಕೋಟಿ ಹಣಕೊಟ್ಟು 11 ವರ್ಷವಾಗಿದೆ. ಅದಕ್ಕೆ ಇಲ್ಲಿಯವರೆಗೆ ಬಡ್ಡಿ ಸೇರಿಸಿ ಪಡೆಯಿರಿ ಎಂದು ಸದಸ್ಯರಾದ ಕೆ.ಕುಬೇರ್, ಗಂಗಾಧರ್ ಸೇರಿದಂತೆ ಹಲವು ಸದಸ್ಯರು ಆಗ್ರಹಿಸಿದರು.
“ಹರಳಹಳ್ಳಿ ಬಳಿ ನೀಡಲಾಗಿರುವ ಬಡಾವಣೆಗೆ ಯಾವುದೇ ಮೂಲಸೌಕರ್ಯ ಒದಗಿಸಿಲ್ಲ, ಕುಡಿಯುವ ನೀರು, ರಸ್ತೆ, ವಿದ್ಯುತ್, ಚರಂಡಿ ಸೌಕರ್ಯಗಳಿಲ್ಲ. ಮೊದಲು ಬಡಾವಣೆಗೆ ಮೂಲಸೌಕರ್ಯ  ಒದಗಿಸಿ, ಎಂದು ಸದಸ್ಯ ಶ್ರೀನಿವಾಸ್ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ರವಿಕುಮಾರ್‌ ಹರಳಹಳ್ಳಿ ಬಡಾವಣೆಗೆ ಮೂಲಸೌಕರ್ಯ ಒದಗಿಸುವಂತೆ ಕನ್ನಾಳು ಪಂಚಾಯಿತಿಗೆ ಹಣ ಕಟ್ಟಿದ್ದೇವೆ. ಇದೀಗ ಪತ್ರವನ್ನೂ ಸಹ ಬರೆದು ಮೂಲ ಸೌಕರ್ಯಗಳನ್ನು ಒದಗಿಸುವಂತೆ ಒತ್ತಾಯಿಸಲಾಗುವುದು ಎಂದು ಭರವಸೆ ನೀಡಿದರು.
ಈ ಹಿಂದೆ ಸಂಘದಲ್ಲಿ ಅಕ್ರಮಗಳು ನಡೆದಿವೆ ಅದನ್ನು ಲೋಕಾಯುಕ್ತ ತನಿಖೆಗೆ ನೀಡಿ ಎಂದು ಹಿಂದಿನ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಈವರೆಗೂ ಯಾಕೆ ತನಿಖೆಗೆ ನೀಡಿಲ್ಲ ಎಂದು ನಿವೃತ್ತ ಶಿಕ್ಷಕ ಧರ್ಮೇಗೌಡ ಆಡಳಿತ ಮಂಡಳಿ ಸದಸ್ಯರನ್ನು ಪ್ರಶ್ನಿಸಿದರು.
''ಸಂಘದ ಅಕ್ರಮ ತನಿಖೆ ನಡೆಸಿ ಎಂದು ಆಡಳಿತ ಮಂಡಳಿ ಒತ್ತಾಯಿಸಲು ಸಾಧ್ಯವಿಲ್ಲ.
ಷೇರುದಾರರೇ ತನಿಖೆಗೆ ನೀಡಿ,'' ಎಂದು ಆಡಳಿತ ಮಂಡಳಿಯವರು ಸಭೆಗೆ ತಿಳಿಸಿದರು.
ಸಭೆಯಲ್ಲಿ ಉಪಾಧ್ಯಕ್ಷ ಸಿ.ಆರ್. ರಮೇಶ್, ಬಿ.ಎಸ್. ಜಯರಾಮು, ಮುರಳೀಧರ್, ಬಿ.ಟಿ. ಶಿವಣ್ಣ ಪಿ. ಚಲುವರಾಜು, ಡಿ.ಹುಚ್ಚೇಗೌಡ, ಕಣ್ಣ ಎನ್. ಭಾಸ್ಕರ್, ಆದರ್ಶರಾಮು, ಎಸ್.ಟಿ. ಕೃಷ್ಣಯ್ಯ, ಎಚ್. ಆರ್. ಜ್ಯೋತಿ ವಾಸುದೇವ್, ಎಚ್.ಎಲ್.ರೋಜಾ, ರೂಪಾವತಿ ಬಿ.ಕೆ., ಪ್ರಭಾರ ಕಾರ್ಯದರ್ಶಿ ಎಚ್‌.ಎಸ್‌. ಪ್ರಕಾಶ್ ಹಾಜರಿದ್ದರು
.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು