ಕುಸ್ತಿ ಪಟುಗಳ ಮೇಲಿನ ಲೈಂಗಿಕ ದೌರ್ಜನ್ಯ ಖಂಡಿಸಿ ವಿಮೆನ್ ಇಂಡಿಯಾದಿಂದ ಪ್ರತಿಭಟನೆ
ಜೂನ್ 04, 2023
ಬ್ರಿಜ್ ಭೂಷಣ್ ಬಂಧನಕ್ಕೆ ಹೆಚ್ಚಿದ ಒತ್ತಾಯ
ಮೈಸೂರು: ಮಹಿಳಾ ಕುಸ್ತಿ ಪಟುಗಳ ಮೇಲೆ ಬಿಜೆಪಿಯ ಸಂಸದ ಬ್ರಿಜ್ ಭೂಷಣ್
ನಡೆಸಿದ ಲೈಂಗಿಕ ದೌರ್ಜನ್ಯವನ್ನು ಖಂಡಿಸಿ, ದೆಹಲಿಯ ಜಂತರ್ ಮಂತರ್ ನಲ್ಲಿ ಕುಸ್ತಿ ಪಟುಗಳು ನಡೆಸುತ್ತಿರುವ
ಪ್ರತಿಭಟನೆಯನ್ನು ಬೆಂಬಲಿಸಿ ನಗರದ ಟೌನ್ ಹಾಲ್ ಬಳಿ ವಿಮೆನ್ ಇಂಡಿಯಾ ಮೂವ್‌ಮೆಂಟ್ ವತಿಯಿಂದ ಪ್ರತಿಭಟನೆ
ನಡೆಯಿತು. ಈ ಸಂದರ್ಭದಲ್ಲಿ ವಿಮೆನ್ ಇಂಡಿಯಾ ಮೂವ್‌ಮೆಂಟ್ ಜಿಲ್ಲಾಧ್ಯಕ್ಷೆ
ಆಯೇಷಾ ಝಬಿ ಅವರು ಮಾತನಾಡಿ, ಇತ್ತೀಚೆಗಷ್ಟೇ ಸಂಸತ್ ಭವನದ ಉದ್ಘಾಟನೆ ವೇಳೆ ಈ ಸಂಸತ್ತು ಪ್ರಜಾತಂತ್ರದ
ದೇವಸ್ಥಾನ (ಮದರ್ ಆಫ್ ಡೆಮೊಕ್ರಸಿ) ಎಂದು ಹೇಳಿದ ಪ್ರಧಾನ ಮಂತ್ರಿಗಳು ಅದೇ ಸಂಸತ್ತಿನ ಹೊರಗೆ ಪ್ರತಿಭಟನೆಯಲ್ಲಿ ನಿರತರಾದ ಮಹಿಳಾ
ಕ್ರೀಡಾಪಟುಗಳಿಗೆ ದೌರ್ಜನ್ಯವೆಸಗಿದ ಪೊಲೀಸರ ಮೇಲೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಅಂಗಳದಲ್ಲಿ ಆಡುವ
ಸೀತೆಗೆ ರಕ್ಷಣೆ ಇಲ್ಲ, ಆದರೂ ನಮ್ಮದು ರಾಮರಾಜ್ಯ. ರಾಮನ ಹೆಸರಿನಲ್ಲಿ ರಾವಣನ ಆಡಳಿತ ನಡೆಯುತ್ತಿದೆ.
ಭೇಟಿ ಬಚಾವೋ ಬೇಟಿ ಪಡಾವೋ ಎಂಬ ಘೋಷವಾಕ್ಯದೊಂದಿಗೆ ಬಂದ ಬಿಜೆಪಿ ಸರ್ಕಾರವು ಇಂದು ಹೆಣ್ಣು ಮಕ್ಕಳ
ಮೇಲೆ ನಿರಂತರವಾಗಿ ದೌರ್ಜನ್ಯವೆಸಗುತ್ತಿದೆ. ಭಾರತ್ ಮಾತಾ ಕಿ ಜೈ ಘೋಷಣೆ ಕೂಗಿದ ತಕ್ಷಣ ಹೆಣ್ಣು ಮಕ್ಕಳ
ಮೇಲಿನ ಧೋರಣೆ ಬದಲಾಗುವುದಿಲ್ಲ, ಗೋ ರಕ್ಷಣೆಯ ಅರ್ಧದಷ್ಟು ರಕ್ಷಣೆ ನಮ್ಮ ದೇಶದ ಹೆಣ್ಣು ಮಕ್ಕಳಿಗೆ
ನೀಡಿ ಎಂದು ಆಗ್ರಹಿಸಿದರು . ಚಿನ್ನದ ಪದಕ ವಿಜೇತ ಮಹಿಳಾ ಕುಸ್ತಿ ಪಟುಗಳ ಸ್ಥಿತಿಯೇ ಈ ರೀತಿ ಆದರೆ,
ಇನ್ನು ನಮ್ಮ ದೇಶದ ಸಾಮಾನ್ಯ ಹೆಣ್ಣು ಮಕ್ಕಳ ಸ್ಥಿತಿ ಹೇಗಿದೆ ಎನ್ನವುದು ಎಲ್ಲರಿಗೂ ಅರ್ಥವಾಗಿದೆ
ಎಂದು ಆಕ್ರೋಶ ವ್ಯಕ್ತ ಪಡಿಸಿದ ಅವರು, ವಿಮೆನ್ ಇಂಡಿಯಾ ಮೂವ್‌ಮೆಂಟ್ ಮಹಿಳಾ ಕುಸ್ತಿಪಟುಗಳಿಗೆ ನ್ಯಾಯ
ಸಿಗುವವರೆಗೂ ಅವರ ಜೊತೆ ನಿಲ್ಲಲಿದೆ ಎಂದು ಬೆಂಬಲ ಸೂಚಿಸಿದರು. ವಿಮೆನ್ ಇಂಡಿಯಾ
ಮುಖಂಡರಾದ ಜ್ಯೋತಿ ಅವರು ಮಾತನಾಡಿ, ಮಹಿಳಾ ಕ್ರೀಡಾಪಟುಗಳ ಬೆಂಬಲಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಮಹಿಳೆಯರು
ಒಂದುಗೂಡಿ ನ್ಯಾಯ ದೊರಕಿಸಿ ಕೊಡುವ ತನಕವೂ ಹೋರಾಟ ಮಾಡುತ್ತೇವೆ. ಕಳೆದ ಎರಡು ತಿಂಗಳಿನಿಂದಲೂ ದೆಹಲಿಯ
ಜಂತರ್ ಮಂತರ್ ನಲ್ಲಿ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಆರೋಪಿ, ಬಿಜೆಪಿ ಸಂಸದನ
ವಿರುದ್ಧ ಪ್ರಕರಣ ದಾಖಲಾಗಿದ್ದರೂ ಸಹ ಅವರನ್ನು ಬಂಧಿಸುವಲ್ಲಿ ವಿಫಲವಾಗಿದೆ. ಈ ದೇಶಕ್ಕೆ ಕೀರ್ತಿಯನ್ನು
ತಂದಂತಹ ಹೆಮ್ಮೆಯ ಮಹಿಳಾ ಕುಸ್ತಿಪಟುಗಳಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಅರೋಪಿಯನ್ನು
ಬಂಧಿಸಲು ಸರಕಾರವು ತಾರತಮ್ಯ ನಡೆಸುತ್ತಿದೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ಉಪಾಧ್ಯಕ್ಷರಾದ ಝರೀನಾ ಫೈರೋಜ್, ಜಿಲ್ಲಾ ಘಟಕದ
ಫರ್ಹನಾಜ್, ಸಿದ್ದಿಖಾ, ಸಾನಿಯಾ, ರೇಷ್ಮಾ, ಸಮೀನಾ ಮತ್ತಿತರರು ಇದ್ದರು.
0 ಕಾಮೆಂಟ್‌ಗಳು