ಮಣಿಪಾಲ್ ಆಸ್ಪತ್ರೆಯಲ್ಲಿ ಲಂಗ್ ಲ್ಯಾವೇಜ್ ಯಶಸ್ವಿ ಚಿಕಿತ್ಸೆ
ಜೂನ್ 05, 2023
ಮೈಸೂರು : “ಪಲ್ಮನರಿ ಆಲ್ವಿಯೋರ್ ಪ್ರೋಟೀನೋಸಿಸ್” ಎಂಬ ಅಪರೂಪದ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಾ ತೀವ್ರ ಉಸಿರಾಟದ ತೊಂದರೆ ಅನುಭವಿಸಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ ೪೨ ವರ್ಷದ ರೋಗಿಯೊಬ್ಬರಿಗೆ ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಲಂಗ್ ಲ್ಯಾವೇಜ್ ಚಿಕಿತ್ಸೆ ನೀಡಲಾಗಿದೆ ಎಂದು ಆಸ್ಪತ್ರೆಯ ಹೆಸರಾಂತ ವೈದ್ಯ ಡಾ. ಲಕ್ಷ್ಮಿ ನರಸಿಂಹನ್ ಹೇಳಿದರು. ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವೃತ್ತಿಯಲ್ಲಿ ಎಲೆಕ್ರ್ಟಿಷಿಯನ್ ಆಗಿರುವ ರೋಗಿಯು ಕಳೆದ ಕೆಲವು ತಿಂಗಳುಗಳಿಂದ ಉಸಿರಾಟದ ತೊಂದರೆ ಮತ್ತು ಆಯಾಸದಿಂದ ಬಳಲುತ್ತಿದ್ದರು. ಅವರು ಉಸಿರಾಟದ ತೊಂದರೆ ಉಂಟಾಗಬಹುದಾದ ಯಾವುದೇ ಚಟ ಅಥವಾ ಅಭ್ಯಾಸವನ್ನು ಹೊಂದಿರಲಿಲ್ಲ. ಆದಾಗ್ಯೂ, ಕಳೆದ ಎರಡು ತಿಂಗಳುಗಳಲ್ಲಿ ಅವರ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿತು. ಅವರ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸುವುದು ಸಹ ಕಷ್ಟವಾಗಿತ್ತು. ಬಳಿಕ ಅವರ ದೇಹದಲ್ಲಿ ಆಮ್ಲಜನಕದ ಸ್ಯಾಚುರೇಶನ್ ೭೫% ರಷ್ಟು ಕಡಿಮೆಯಾಗಿತ್ತು. ಹಾಸಿಗೆಯಲ್ಲಿದ್ದಾಗ ಪರಿಸ್ಥಿತಿ ಸ್ವಲ್ಪ ಉತ್ತಮವಾಗಿದೆ ಎಂದೆನಿಸಿದರೂ ಸ್ವಲ್ಪ ಓಡಾಡಿದರೂ ಅವರ ಪರಿಸ್ಥಿತಿ ಹದಗೆಡುತ್ತಿತ್ತು. ಕೂಡಲೇ ಅವರು ವೈದ್ಯರನ್ನು ಸಂಪರ್ಕಿಸಿದಾಗ ಅವರು “ಪಲ್ಮನರಿ ಅಲ್ವಿಯೋಲಾರ್ ಪ್ರೊಟೀನೋಸಿಸ್ (ಪಿಎಪಿ) “ಎಂಬ ಅಪರೂಪದ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ತಿಳಿಯಿತು. ಕೂಡಲೇ ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ತೋರಿಸಿದಾಗ ನಾವು ಚಿಕಿತ್ಸೆ ನೀಡಿದೆವು ಎಂದರು.
ರೋಗಿಯ ಶ್ವಸ ಕೋಶದಲ್ಲಿ ಸುಮಾರು ೯ ಲೀಟರ್ ಕೆಟ್ಟ ದ್ರವ ಸಂಗ್ರಹವಾಗಿತ್ತು. ಇದನ್ನು ವೈದ್ಯಕೀಯ ಭಾಷೆಯಲ್ಲಿ ಪಲ್ಮನರಿ ಸರ್ಫ್ಯಾಕ್ಟಂಟ್ ಎನ್ನಲಾಗುವದು. ಇದು ಕೊಬ್ಬನ್ನು ಹೊಂದಿರುವ ಪ್ರೋಟೀನೇಸಿಯಸ್ ವಸ್ತುವಾಗಿದೆ. ಇದರಿಂದ ರೋಗಿಯ ಉಸಿರಾಟಕ್ಕೆ ತೊಂದರೆಯಾಗಿತ್ತು. ಇದಕ್ಕೆ ಜಿಎಮ್‌ಸಿಎಸ್‌ಎಫ್ ಎಂಬ ಇಂಜೆಕ್ಷನ್ ನೀಡಬೇಕಿದೆ ಸಧ್ಯಕ್ಕೆ ಇದು ಭಾರತದಲ್ಲಿ ಲಭ್ಯವಿಲ್ಲ. ಒಂದು ವರ್ಷ ನಿರಂತರವಾಗಿ ಈ ಇಂಜೆಕ್ಷನ್ ತೆಗೆದಿಕೊಂಡರೆ ರೋಗಿ ಸಂಪೂರ್ಣ ಗುಣ ಹೊಂದುತ್ತಾನೆ. ನಾವು ಇದರ ನಿರೀಕ್ಷೆಯಲ್ಲಿದ್ದೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ರೋಗಿ ಚಂದ್ರಶೇಖರ್ ಮತ್ತು ಅವರ ಪತ್ನಿ ಇದ್ದರು.
0 ಕಾಮೆಂಟ್‌ಗಳು