`ಪ್ರಜಾಪ್ರಭುತ್ವ ಅವನತಿಯ ಅಂಚಿನಲ್ಲಿದೆ’ : ಅಬ್ದುಲ್ ಮಜೀದ್ ಆತಂಕ

ಮೈಸೂರಿನಲ್ಲಿ ಎಸ್‌ಡಿಪಿಐ 15ನೇ ಸಂಸ್ಥಾಪನಾ ದಿನ ಆಚರಣೆ

ಮೈಸೂರು :  ದೇಶದ ಪ್ರಸ್ತುತ ಸನ್ನಿವೇಶದಲ್ಲಿ ಆಡಳಿತ ನಡೆಸುತ್ತಿರುವವರ ತಪ್ಪು ಮತ್ತು ಅವಿವೇಕದ ನೀತಿಗಳಿಂದ ಜನರನ್ನು ಅಭದ್ರತೆಯ ಸ್ಥಿತಿಗೆ ಮತ್ತು ಭಾರಿ ಆರ್ಥಿಕ ಸಂಕಷ್ಟಗಳಿಗೆ ದೂಡುತ್ತಿದೆ. ಇದರಿಂದ ಪ್ರಜಾಪ್ರಭುತ್ವ ಅವನತಿಯ ಅಂಚಿನಲ್ಲಿದೆ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್‌ ಮಜೀದ್‌ ಆತಂಕ ವ್ಯಕ್ತಪಡಿಸಿದರು.
14 ವರ್ಷಗಳನ್ನು ಪೂರೈಸಿ 15ನೇ ವರ್ಷಕ್ಕೆ
ಕಾಲಿಡುತ್ತಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ನಗರದ ಎಸ್‌ಡಿಪಿಐ ಕಚೇರಿಯಲ್ಲಿ ಪಕ್ಷದ ದ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಎಸ್‌ಡಿಪಿಐ ಪಕ್ಷದ ಸಿದ್ಧಾಂತವು 14 ವರ್ಷಗಳಲ್ಲಿ ನಮ್ಮ ಹೋರಾಟವನ್ನು  ನಿಖರವಾದ ಗುರಿ ಮತ್ತು ಸಾಮಾಜಿಕ ಪ್ರಜಾಪ್ರಭುತ್ವದ ಸಾಕ್ಷಾತ್ಕಾರಕ್ಕಾಗಿ ವಿಶಾಲವಾದ ದೃಷ್ಟಿಕೋನದೊಂದಿಗೆ ನಮ್ಮನ್ನು ಬದ್ಧತೆಯಿಂದ ಮುನ್ನಡೆಯಲು ಪ್ರೇರೇಪಿಸಿದೆ. ಕೇಂದ್ರ ಸರ್ಕಾರವು ಭಿನ್ನಮತೀಯರನ್ನು ನಿರ್ದಯವಾಗಿ ಬಂಧಿಸುವುದು, ರಾಜಕೀಯ ಮತ್ತು ಸಾಮಾಜಿಕ ವಿರೋಧಿಗಳ ವಿರುದ್ಧ ಏಜೆನ್ಸಿಗಳ ದುರುಪಯೋಗ, ಸಾರ್ವಜನಿಕ ಆಸ್ತಿಗಳ ಮಾರಾಟ, ದ್ವೇಷದ ಭಾಷಣಗಳು, ಜನ ವಿರೋಧಿ ಕಾನೂನುಗಳು, ಸಶಸ್ತ್ರ ಪಡೆಗಳ ಅತಿಯಾದ ಬಳಕೆ ಇತ್ಯಾದಿಗಳು ಜನರ ಜೀವನ ಮತ್ತು ದೇಶದ ಒಟ್ಟಾರೆ ಕ್ಷೇಮಕ್ಕೆ ಅಪಾಯವನ್ನುಂಟುಮಾಡುತ್ತಿವೆ. ಇಷ್ಟಾದರೂ ವಿರೋಧ
ಪಕ್ಷಗಳು ಮಾತ್ರ ಪ್ರಜಾಪ್ರಭುತ್ವದಲ್ಲಿ ತಮ್ಮ ಪಾತ್ರವನ್ನು ಮರೆತವರಂತೆ ಮೌನವಾಗಿರುವುದರಲ್ಲೇ ಸಂತೋಷ ಪಡುತ್ತಿವೆ ಎಂದು ಟೀಕಿಸಿದರು.
 
ಈ ಹಂತದಲ್ಲಿ, ನಮ್ಮ ರಾಷ್ಟ್ರವನ್ನು 'ಹಸಿವು ಮತ್ತು ಭಯದಿಂದ ಮುಕ್ತಿ'ಗೊಳಿಸುವ ಯತ್ನವನ್ನು ಮಾಡುತ್ತಾ ನಮ್ಮ ರಾಜಕೀಯ ಹೋರಾಟವನ್ನು ಮುನ್ನಡೆಸುತ್ತಿದ್ದೇವೆ ಎಂದರು.
ಅಧಿಕಾರದಲ್ಲಿ ಪಾಲು ಪಡೆಯುವ ಗುರಿಯನ್ನು ತಲುಪುವುದು ಕಠಿಣ ಕೆಲಸ ಎಂದು ನಮಗೆ ತಿಳಿದಿದ್ದರೂ, ಚುನಾವಣಾ ರಾಜಕೀಯದಲ್ಲಿ ಸ್ಥಾನ ಗಳಿಸುವ ನಮ್ಮ ಈ ಪ್ರಯತ್ನ ನಾವು ನಮ್ಮ ಗುರಿಯನ್ನು ತಲುಪುವವರೆಗೂ ನಿಲ್ಲುವುದಿಲ್ಲ. 'ಭ್ರಷ್ಟಾಚಾರ - ಕೋಮುವಾದ ಬಂಡವಾಳಶಾಹಿ ಜೊತೆಗಿನ 'ಹಣ – ತೋಳ್ಬಲ -ಬೆದರಿಕೆ' ಯ ಪ್ರಸ್ತುತ ರಾಜಕೀಯ ಪರಿಸ್ಥಿತಿಯ ನಡುವೆ ಮುನ್ನಡೆಯಬೇಕಾದ ಅನಿವಾರ್ಯತೆ ನಮಗಿದೆ. ದೇಶದ ವೈವಿಧ್ಯಮಯ ಸಂಸ್ಕೃತಿ ಮತ್ತು ಜನಾಂಗೀಯತೆ, ಅಪಾರ ನೈಸರ್ಗಿಕ ಸಂಪನ್ಮೂ ಲಗಳು, ಮುಕ್ತ ಆಲೋಚನೆ, ನಮ್ಮ ರಾಷ್ಟ್ರದ ಹೆಮ್ಮೆ ಅದರ ಮೂಲಕ ದೇಶವು ಅತ್ಯುನ್ನತ ಸ್ಥಾನವನ್ನು ಸಾಧಿಸಬಹುದಾಗಿತ್ತು. ಆದಾಗ್ಯೂ, ಅಸಮರ್ಪಕ ಮತ್ತು ಅನುಚಿತ ರಾಜಕೀಯ ಪ್ರಾಬಲ್ಯದಿಂದಾಗಿ ನಾವು ಅದರ ವಿರುದ್ಧದ ಸನ್ನಿವೇಶವನ್ನು ನೋಡುತ್ತಿದ್ದೇವೆ. ಹಾಗಾಗಿ ಭಾರತಕ್ಕೆ ಪರ್ಯಾಯ ರಾಜಕೀಯ ಪಕ್ಷದ ಅಗತ್ಯವಿದೆ, ಅದು ದೇಶದ ಕಲ್ಯಾಣಕ್ಕೆ ಸಕಾರಾತ್ಮಕ ಮತ್ತು ಸೃಜನಶೀಲ ಬದಲಾವಣೆಯನ್ನು ತರಲು ಜನರ ಧ್ವನಿ ಮತ್ತು ಮನಸ್ಸಾಗಿ ಕೆಲಸ ಮಾಡುವಂತಾಗಿರಬೇಕು.ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷ ರಾಷ್ಟ್ರವನ್ನು ಅಭಿವೃದ್ಧಿ ಮತ್ತು ಬಹುತ್ವದ ಪಥದಲ್ಲಿ ನಡೆಸಲು ಈಗಿರುವ ವೈಪರೀತ್ಯ ಶಕ್ತಿಗಳ ವಿರುದ್ಧ ಶ್ರಮಿಸಲು ಸಮರ್ಪಿತವಾಗಿದೆ. ಆಡಳಿತದ ತಪ್ಪುಗಳು ಮತ್ತು ಜನ ವಿರೋಧಿ ನೀತಿಗಳು ಮತ್ತು ಜನರ ಸಮಸ್ಯೆ ಸಂಕಟಗಳ ವಿರುದ್ಧ ಹೋರಾಡುವಲ್ಲಿ ಎಸ್‌ಡಿಪಿಐ ಯಾವಾಗಲೂ ಮುಂಚೂಣಿಯಲ್ಲಿದೆ. ನಮ್ಮ ಪಕ್ಷದ ಉದ್ದೇಶವಾದ 'ಹಸಿವು ಮುಕ್ತ ಭಾರತ, ಭಯ ಮುಕ್ತ ಭಾರತವನ್ನು ಸಾಕಾರಗೊಳಿಸಲು ಸಂಕಲ್ಪ ಮತ್ತು ಬದ್ಧತೆಯಿಂದ ಹೆಜ್ಜೆ ಹಾಕಲು ಎಲ್ಲರನ್ನೂ ಸ್ವಾಗತಿಸುತ್ತಿದ್ದೇವೆ. ನೀವೂ ಬನ್ನಿ ಒಟ್ಟಿಗೆ ಮುನ್ನಡೆಯೋಣ ಎಂದರು.
ಈ ಸಂದರ್ಭದಲ್ಲಿ ಪಕ್ಷದ  ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ, ಜಿಲ್ಲಾಧ್ಯಕ್ಷ ರಫತ್‌ ಖಾನ್‌, ಮುಖಂಡರಾದ ಅಮ್ಜದ್‌ ಖಾನ್‌, ಪಾಲಿಕೆ ಮಾಜಿ ಸದಸ್ಯ ಸ್ವಾಮಿ, ಶಫಿಯುಲ್ಲಾ ಮತ್ತಿತರ ಜಿಲ್ಲಾ ಮತ್ತು ರಾಜ್ಯದ ಮುಖಂಡರು ಇದ್ದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು