ಫುಟ್ಪಾತ್ ವ್ಯಾಪಾರಿಗಳ ನೆರವಿಗೆ ನಿಂತ ಎಸ್ಡಿಪಿಐ : ರಸ್ತೆ ಬದಿ ವ್ಯಾಪಾರಿಗಳ ಪುನರ್ವಸತಿಗೆ ಆಗ್ರಹ

ಮೈಸೂರು : ನಗರದಲ್ಲಿ ನೂರಾರು ವಿದ್ಯಾವಂತರು, ನಿರುದ್ಯೋಗಿಗಳು ತಮ್ಮ ಜೀವನ ನಿರ್ವಹಣೆಗೆ ಯಾವುದೇ ಅಡ್ಡದಾರಿ ಹಿಡಿಯದೆ, ಸಮಾಜದಲ್ಲಿ ಗೌರವಯುತ  ಬದುಕು ನಡೆಸಲು ಫುಟ್‌ಪಾತ್‌ ನಲ್ಲಿ ವ್ಯಾಪಾರ ಮಾಡುತ್ತಿದ್ದು, ಪಾಲಿಕೆ ಅಧಿಕಾರಿಗಳು ಯಾವುದೇ ಕಾರಣಕ್ಕೂ ಅವರನ್ನು ತೆರವುಗೊಳಿಸಬಾರದು ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ರಫತ್‌ ಖಾನ್‌ ಆಗ್ರಹಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿ, ನಗರದಲ್ಲಿ ಬಡವರು ಬದುಕು ನಡೆಸುವುದು ಕಷ್ಟವಾಗಿದೆ. ಜೀವನ ನಿರ್ವಹಣೆ, ಮಕ್ಕಳ ಶಿಕ್ಷಣ, ಹಿರಿಯರ ಆರೋಗ್ಯ, ಮನೆ ಬಾಡಿಗೆ, ಊಟೋಪಚಾರ ಇಂತಹ ಖರ್ಚುಗಳನ್ನು ಸರಿದೂಗಿಸಲು ಮನೆಯಲ್ಲಿ ಒಂದಿಬ್ಬರು ದುಡಿಯಲೇ ಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಬಹುತೇಕ ಮಹಿಳೆಯರು, ಫುಟ್‌ಪಾತ್‌ಗಳಲ್ಲಿ ತರಕಾರಿ, ಹಣ್ಣು ಹಂಪಲು ವ್ಯಾಪಾರ ಮಾಡಿಕೊಂಡು ಬದುಕುತ್ತಿದ್ದಾರೆ. ಪುರುಷ ನಿರುದ್ಯೋಗಿಗಳು ಫಾಸ್ಟ್‌ಫುಡ್‌ ನಂತರ ವ್ಯಾಪಾರ ನಡೆಸಿ ಸಂಸಾರದ ನೆರವಿಗೆ ನಿಂತಿದ್ದಾರೆ. ಪುರಪಿತೃಗಳಿಗೆ ಇವರ ಬಗ್ಗೆ ಕನಿಕರ, ಕಾಳಜಿ ಇರಬೇಕು ಅದನ್ನು ಬಿಟ್ಟು ಅವರ ಮೇಲೆ ಕೆಂಗಣ್ಣು ಬೀರಬಾರದು. ಪಾದಚಾರಿಗಳಿಗೆ ತೀರಾ ಅನಾನುಕೂಲವಾದ ಕಡೆ  ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು
ಅವರು ಒತ್ತಾಯಿಸಿದ್ದಾರೆ.
ಫುಟ್‌ಪಾತ್‌ ನಿರ್ಮಾಣಕ್ಕೆ ಕೊಟ್ಯಾಂತರ ರೂ. ಖರ್ಚು ಮಾಡಿರುವುದಾಗಿ ಪಾಲಿಕೆ ಸದಸ್ಯರು ಸಭೆಯಲ್ಲಿ ಹೇಳಿರುವುದು ಸರಿ. ಆದರೇ, ಫುಟ್‌ಪಾತ್‌ ವ್ಯಾಪಾರಿಗಳ ಪುನರ್ವಸತಿಗೆ ನಿಮ್ಮ ಕಾಣಿಕೆ ಏನು? ಅವರಿಗೂ ಒಂದಷ್ಟು ಹಣ ಖರ್ಚು ಮಾಡಿ ನಗರದ ವಿವಿಧ ಬಡಾವಣೆಯಗಳಲ್ಲಿ ಫುಡ್‌ ಪಾರ್ಕ್‌ ನಿರ್ಮಾಣ ಮಾಡಿಸಬಹುದಲ್ಲವೇ ಎಂದು ರಫತ್‌ ಖಾನ್‌ ಸಲಹೆ ನೀಡಿದ್ದಾರೆ.
ಪಾದಚಾರಿಗಳಿಗೆ ಅನಾನುಕೂಲ ಇದ್ದಕಡೆ ಗುರುತಿಸಿ, ಬೀದಿ ಬದಿ ವ್ಯಾಪಾರಿಗಳ ಮನವೊಲಿಸಿ ಅವರಿಗೆ ಸೂಕ್ತ ಸ್ಥಳದಲ್ಲಿ ವ್ಯಾಪಾರ ಮಾಡುವಂತೆ ಸಲಹೆ, ಸಹಕಾರ ನೀಡಬೇಕಾದುದು ಪಾಲಿಕೆ ಸದಸ್ಯರ ಕರ್ತವ್ಯವಾಗಿದೆ. ಅದನ್ನು ಬಿಟ್ಟು ಅಧಿಕಾರಿಗಳ ನೆರವಿನಿಂದ ಫುಟ್‌ಪಾತ್‌ ವ್ಯಾಪಾರಿಗಳ ಎತ್ತಂಗಡಿ ಮಾಡಿಸುವುದು ಎಷ್ಟು ಸರಿ ಎಂದು ರಫತ್‌ ಖಾನ್‌ ಟೀಕಿಸಿದರು.
ಕರೋನಾ ಸಂಕಷ್ಟದಲ್ಲಿ ದೇಶದ ಕೊಟ್ಯಾಂತರ ಕುಟುಂಬಗಳು ಉದ್ಯೋಗ ಕಳೆದುಕೊಂಡು ಬೀದಿಗೆ ಬಿದ್ದಿವೆ. ತುತ್ತು ಅನ್ನಕ್ಕಾಗಿ ಜನರು ಕಷ್ಟ ಪಡುತ್ತಿದ್ದನ್ನು ನಾವು ಕಣ್ಣಾರೆ ಕಂಡಿದ್ದೇವೆ. ಈಗಲಾದರೂ ಅವರು ವ್ಯಾಪಾರ ಮಾಡಿಕೊಂಡು ಬದುಕಲು ನಾವು ಸಹಕರಿಸಬೇಕು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಈಗಾಗಲೇ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಿಸಿ ಸಾಲ ಸೌಲಭ್ಯ ನೀಡುತ್ತಿದೆ. ಇಂತಹ ಸಂದರ್ಭದಲ್ಲಿ ಜನಪ್ರತಿನಿಧಿಗಳೂ ಕೂಡ ಬೀದಿಬದಿ ವ್ಯಾಪಾರಿಗಳ ನೆರವಿಗೆ ಬರಬೇಕು. ಒಂದು ವೇಳೆ  ಅನಾವಶ್ಯಕವಾಗಿ ಬೀದಿ ಬದಿ ವ್ಯಾಪಾರಿಗಳನ್ನು ತೆರವು ಮಾಡಿಸಿದರೆ ಎಸ್‌ಡಿಪಿಐ ತೀವ್ರ ಹೋರಾಟ ನಡೆಸುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.


ಸಂಘಟನೆ ಬಲಗೊಳಿಸಲು ಸಲಹೆ
ಮೈಸೂರು ನಗರದ ಎಲ್ಲಾ ಬೀದಿ ಬದಿ ವ್ಯಾಪಾರಿಗಳು ಸಂಘಟಿತರಾಗಬೇಕು. ಯಾವುದೇ ಸಮಸ್ಯೆ ಎದುರಾದರೂ ಎಸ್‌ಡಿಪಿಐ ನಿಮ್ಮ ನೆರವಿಗೆ ಬರುತ್ತದೆ. ಈ ಬಗ್ಗೆ ಸದಾ ಕಾಲ ನಮ್ಮ ಕಚೇರಿಯನ್ನ ಸಂಪರ್ಕಿಸಬಹುದೆಂದು ರಫತ್‌ ಖಾನ್‌ ಬೀದಿ ಬದಿ ವ್ಯಾಪಾರಿಗಳಲ್ಲಿ ಮನವಿ ಮಾಡಿದ್ದಾರೆ.

ಸಂಪರ್ಕ-8884408755
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು