ಶಾಸಕ ತನ್ವೀರ್ ಸೇಠ್‍ಗೆ ಡಿಸಿಎಂ ಸ್ಥಾನ ನೀಡುವಂತೆ ಕೆಪಿಸಿಸಿ ಕಾರ್ಯದರ್ಶಿ ಅಕ್ಬರ್ ಅಲೀಂ ಹಾಗೂ ಮುಸ್ಲಿಂ ಮುಖಂಡರ ಒತ್ತಾಯ
ಮೇ 16, 2023
ಮೈಸೂರು : ನರಸಿಂಹರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅವರಿಗೆ ರಾಜ್ಯ ಸರ್ಕಾರದ ನೂತನ ಸಚಿವ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಕೆಪಿಸಿಸಿ ಕಾರ್ಯದರ್ಶಿ ಕೆ.ಎಂ.ಅಕ್ಬರ್ ಅಲೀಂ ನೇತೃತ್ವದ ಮುಸ್ಲಿಂ ಮುಖಂಡರ ನಿಯೋಗ ಒತ್ತಾಯಿಸಿತು. ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಕ್ಬರ್ ಅವರು ಮಾತನಾಡಿ, ಶಾಸಕ ತನ್ವೀರ್ ಸೇಠ್ ಅವರು ಸತತ 6 ಬಾರಿ ಎನ್‍ಆರ್ ಕ್ಷೇತ್ರದಲ್ಲಿ ಜಯಗಳಿಸಿ ಸೋಲಿಲ್ಲದ ಸರದಾರ ಎನಿಸಿದ್ದಾರೆ. ಅಲ್ಲದೇ ಅವರು, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಮುಖಂಡರು. ಈ ಹಿಂದೆ ಕಾರ್ಮಿಕ, ವಕ್ಫ್ ಮತ್ತು ಶಿಕ್ಷಣ ಇಲಾಖೆಯ ಸಚಿವರಾಗಿ ಸಮರ್ಥವಾಗಿ ಕೆಲಸ ಮಾಡಿದ್ದಾರೆ. ಅಲ್ಲದೇ ಹಳೇ ಮೈಸೂರು ವಿಭಾಗದ ಮೈಸೂರು, ಮಂಡ್ಯ, ಚಾಮರಾಜನಗರ, ಮಡಿಕೇರಿ, ಹಾಸನ ಜಿಲ್ಲೆಗಳ ಏಕೈಕ ಮುಸ್ಲಿಂ ಪ್ರತಿನಿಧಿಯಾಗಿದ್ದಾರೆ. ಈ ಬಾರಿ ಮುಸ್ಲಿಂ ಸಮುದಾಯ ಶೇ,85 ರಷ್ಟು ಮತಗಳನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿದ ಪರಿಣಾಮ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 135 ಸ್ಥಾನಗಳನ್ನು ಗಳಿಸಲು ಸಾಧ್ಯವಾಗಿದೆ. ಈ ಕಾರಣದಿಂದ ಮುಸ್ಲಿಂ ಸಮುದಾಯದ ಶಾಸಕರೊಬ್ಬರಿಗೆ ರಾಜ್ಯದಲ್ಲಿ ಡಿಸಿಎಂ ಸ್ಥಾನ ನೀಡಿ ಗೌರವಿಸಬೇಕಾಗಿದ್ದು, ಸತತ 6 ಬಾರಿ ಶಾಸಕರಾಗಿರುವ ತನ್ವೀರ್ ಸೇಠ್ ಅವರನ್ನು ಉಪ ಮುಖ್ಯಮಂತ್ರಿ ಸ್ಥಾನಮಾನ ನೀಡಿ ಕಾಂಗ್ರೆಸ್ ಪಕ್ಷ ಗೌರವಿಸಬೇಕಾಗಿದೆ ಎಂದು ಅಕ್ಬರ್ ಹೇಳಿದರು. ಜಿಪಂ ಮಾಜಿ ಸದಸ್ಯ ರಹಮತ್ ಜಾನ್ ಬಾಬು ಅವರು ಮಾತನಾಡಿ, ಶಾಸಕ ತನ್ವೀರ್ ಸೇಠ್ ಅವರು ಹಿರಿಯ ರಾಜಕಾರಣಿಗಳು, ಮುಸ್ಲಿಂ ಸಮುದಾಯದ ನಾಯಕರು. ಕಾಂಗ್ರೆಸ್ ಪಕ್ಷ ಈ ಬಾರಿ ಅಭೂತಪೂರ್ವ ಯಶಸ್ಸು ಗಳಿಸಲು ತನ್ವೀರ್ ಸೇಠ್ ಪರಿಶ್ರಮದಿಂದ ಸಾಧ್ಯವಾಗಿದೆ. ಇದರಿಂದ ಅವರಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಮಂತ್ರಿಮಂಡಳದಲ್ಲಿ ಉತ್ತಮ ಖಾತೆಯೊಂದಿಗೆ ಡಿಸಿಎಂ ಸ್ಥಾನ ನೀಡಬೇಕು ಎಂದು ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ನಂಜನಗೂಡು ನಗರಸಭೆ ಸದಸ್ಯರಾದ ಸಿದ್ದಿಖ್ ಅಹಮದ್, ಎಚ್.ಡಿ.ಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಜಾಸ್ ಪಾಷ, ಚಾಮರಾಜನಗರ ಕಾಂಗ್ರೆಸ್ ಮುಖಂಡರಾದ ಸೈಯದ್ ಕಲೀಮುಲ್ಲಾ ಇದ್ದರು.
0 ಕಾಮೆಂಟ್‌ಗಳು