ಮೈಸೂರು : ನರಸಿಂಹರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅವರಿಗೆ ಸಚಿವ ಸಂಪುಟದಲ್ಲಿ ಡಿಸಿಎಂ ಸ್ಥಾನ ನೀಡಬೇಕೆಂದು ನಗರ ಕಾಂಗ್ರೆಸ್ ವಕ್ತಾರ ರಾಜೇಶ್ ಹಾಗೂ ಕಾಂಗ್ರೆಸ್ ವೀಕ್ಷಕ ಎಂ.ರಸೂಲ್ ಒತ್ತಾಯಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ರಾಜೇಶ್ ಮಾತನಾಡಿ, ಸತತ 6 ಬಾರಿ ಎನ್‍ಆರ್ ಕ್ಷೇತ್ರದ ಶಾಸಕರಾಗಿರುವ ತನ್ವೀರ್ ಸೇಠ್ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಮುಖಂಡರು. ಈ ಹಿಂದೆ ಕಾರ್ಮಿಕ, ವಕ್ಫ್ ಮತ್ತು ಶಿಕ್ಷಣ ಇಲಾಖೆಯ ಸಚಿವರಾಗಿ ಸಮರ್ಥವಾಗಿ ಕೆಲಸ ಮಾಡಿದ್ದಾರೆ. ಅಲ್ಲದೇ ಹಳೇ ಮೈಸೂರು ವಿಭಾಗದ ಮೈಸೂರು, ಮಂಡ್ಯ, ಚಾಮರಾಜನಗರ, ಮಡಿಕೇರಿ, ಹಾಸನ ಜಿಲ್ಲೆಗಳ ಏಕೈಕ ಮುಸ್ಲಿಂ ಪ್ರತಿನಿಧಿಯಾಗಿದ್ದಾರೆ. ಈ ಬಾರಿ ಮುಸ್ಲಿಂ ಸಮುದಾಯ ಶೇ,85 ರಷ್ಟು ಮತಗಳನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿದ ಪರಿಣಾಮ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 135 ಸ್ಥಾನಗಳನ್ನು ಗಳಿಸಲು ಸಾಧ್ಯವಾಗಿದೆ. ಈ ಕಾರಣದಿಂದ ಮುಸ್ಲಿಂ ಸಮುದಾಯದ ಶಾಸಕರೊಬ್ಬರಿಗೆ ರಾಜ್ಯದಲ್ಲಿ ಡಿಸಿಎಂ ಸ್ಥಾನ ನೀಡಿ ಗೌರವಿಸಬೇಕಾಗಿದ್ದು, ಸತತ 6 ಬಾರಿ ಶಾಸಕರಾಗಿರುವ ಸೋಲಿಲ್ಲದ ಸರದಾರ ತನ್ವೀರ್ ಸೇಠ್ ಅವರನ್ನು ಉಪ ಮುಖ್ಯಮಂತ್ರಿ ಸ್ಥಾನಮಾನ ನೀಡಿ ಗೌರವಿಸಬೇಕಾದುದು ಕಾಂಗ್ರೆಸ್ ಪಕ್ಷದ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷದ ವೀಕ್ಷಕರಾದ ರಸೂಲ್ ಮಾತನಾಡಿ, ತನ್ವೀರ್ ಸೇಠ್ ಅವರು ಮುಸ್ಲಿಂ ಸಮುದಾಯದ ನೇತಾರರು. ಹಳೇ ಮೈಸೂರು ಭಾಗದಲ್ಲಿ ಮುಸ್ಲಿಂ ಸಮುದಾಯವನ್ನು ಸಂಘಟಿಸಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿಸುವುದರಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಕಾರಣದಿಂದ ಪಕ್ಷ ಈ ಬಾರಿ ಅಭೂತಪೂರ್ವ ಯಶಸ್ಸು ಗಳಿಸಲು ಸಾಧ್ಯವಾಗಿದೆ. ಮುಸ್ಲಿಂ ಸಮುದಾಯದ ಮುಖಂಡರೂ ಮತ್ತು ಮಾಜಿ ಸಚಿವರೂ, ಶಾಸಕರೂ ಆದ ತನ್ವೀರ್ ಸೇಠ್ ಅವರಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡುವಲ್ಲಿ ಕಾಂಗ್ರೆಸ್ ಪಕ್ಷ ಮುಂದಾಗಬೇಕು. ಈ ನಿಟ್ಟಿನಲ್ಲಿ ಶಾಸಕ ತನ್ವೀರ್ ಸೇಠ್ ಅವರಿಗೆ ಸೂಕ್ತ ಕ್ಯಾಬಿನೆಟ್ ದರ್ಜೆಯ ಖಾತೆಯೊಂದಿಗೆ ಡಿಸಿಎಂ ಸ್ಥಾನ ನೀಡಬೇಕು ಎಂದು ರಸೂಲ್ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ನಾಗರಾಜು, ಜ್ಯೋತಿ ಪ್ರಕಾಶ್, ಕುಮಾರ್, ಸುಲೇಮಾನ್, ಶಿವಾಜಿರಾವ್ ಇದ್ದರು.
0 ಕಾಮೆಂಟ್‌ಗಳು