ರೈತಸಂಘದ ನಿರಂತರ ಅಪಪ್ರಚಾರದಿಂದ ಸೋಲು : ಪುಟ್ಟರಾಜು ಬೇಸರ

ಪಾಂಡವಪುರ : ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದರೂ ನಿರಂತರ ಅಪಪ್ರಚಾರ ಮತ್ತು ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳಿಂದ ನನಗೆ ಸೋಲುಂಟಾಯಿತು ಎಂದು ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಇತ್ತೀಚೆಗೆ ಮೃತಪಟ್ಟ ಪುರಸಭೆ ಸದಸ್ಯ ಬಿ.ವೈ.ಬಾಬು ಅವರ ಶ್ರದ್ಧಾಂಜಲಿ ಕಾರ್ಯಕ್ರದಲ್ಲಿ ಅವರು ಮಾತನಾಡಿ, 2004ರಲ್ಲಿ ನಾನು ಪ್ರಥಮ ಬಾರಿಗೆ ಶಾಸಕನಾದಾಗ ನನಗೆ 43,878 ಮತಗಳು ಸಿಕ್ಕಿದ್ದವು. 2008ರಲ್ಲಿ 60,427 ಮಗತಗಳಿಸಿ ಎರಡನೇ ಬಾರಿಗೆ ಶಾಸಕನಾದೆ, 2013ರಲ್ಲಿ 64 ಸಾವಿರ ಮತ ಬಂದರೂ ನಾನು ಪುಟ್ಟಣ್ಣಯ್ಯ ಎದುರು ಸೋತಿದ್ದೆ. 2014 ರಲ್ಲಿ ನಾನು ಲೋಕಸಭಾ ಸದಸ್ಯನಾದಾಗ ನನಗೆ ಮೇಲುಕೋಟೆ ಕ್ಷೇತ್ರದಿಂದ 78 ಸಾವಿರ ಮತಗಳು ಸಿಕ್ಕಿದ್ದವು. 2018 ರಲ್ಲಿ ನಾನು ಮತ್ತೆ ಶಾಸಕನಾದಾಗ ನನಗೆ 96 ಸಾವಿರ ಮತಗಳು ಸಿಕ್ಕಿದ್ದವು. ಪ್ರತಿ ಚುನಾವಣೆಯಲ್ಲೂ ನನಗೆ ಮತಗಳು ಹೆಚ್ಚಾಗಿ ಬರುತ್ತಿದ್ದು, ನನ್ನ ಪರ ಉತ್ತಮ ಜನಾಭಿಪ್ರಾಯ ವ್ಯಕ್ತವಾಗಿತ್ತು. ಆದರೇ, 2023 ವಿಧಾನಸಭಾ ಚುನಾವಣೆಯಲ್ಲಿ ನನಗೆ ಸುಮಾರು 80 ಸಾವಿರ ಮತಗಳು ಮಾತ್ರ ಸಿಕ್ಕಿವೆ. ಕಳೆದ ಬಾರಿಗಿಂತ 16 ಸಾವಿರಮತಗಳು ಕಡಿಮೆಯಾಗಿವೆ. ಇದಕ್ಕೆ ನನ್ನ ವಿರುದ್ಧ ರೈತ ಸಂಘದ ನಿರಂತರ ಅಪಪ್ರಚಾರ ಮತ್ತು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಹಾಗೂ ಬಿಜೆಪಿ ಅಭ್ಯರ್ಥಿಯ ಕಡಿಮೆ ಮತಗಳಿಕೆಯೂ ಕಾರಣವಾಯಿತು ಎಂದರು.
ಪಟ್ಟಣದಲ್ಲಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ, ಪಾರ್ಕ್, ರಸ್ತೆಗಳ ನಿರ್ಮಾಣ, ಕೆಎಸ್‍ಆರ್‍ಟಿಸಿ ಡಿಪೋ, ಸ್ಟೇಡಿಯಂ, ಸಾರ್ವಜನಿಕ ಆಸ್ಪತ್ರೆ ಉನ್ನತೀಕರಣ, ತಾಲೂಕಿನಲ್ಲಿ 12 ಪ್ರೌಢಶಾಲೆ, 5 ಪದವಿ ಪೂರ್ವ ಮತ್ತು 3 ಪದವಿ ಕಾಲೇಜುಗಳ ನಿರ್ಮಾಣ, ಹೋಬಳಿಗೆ ಮೂರರಂತೆ ಕೆಇಬಿ ಸಬ್ ಸ್ಟೇಷನ್ ನಿರ್ಮಾಣ, 750 ಕೋಟಿ ರೂ. ವೆಚ್ಚದಲ್ಲಿ ತಾಲೂಕಿನಾದ್ಯಂತ ಕುಡಿಯುವ ಮತ್ತು ಕೃಷಿಗೆ ಅಗತ್ಯವಾದ ಏತ ನೀರಾವರಿ ಯೋಜನೆಗಳನ್ನು ಮಾಡಿದ್ದೆನೆ. ಇನ್ನೂ ಹಲವಾರು ಯೋಜನೆಗಳಿಗೆ ಹಣ ಬಿಡುಗಡೆಯಾಗಿದೆ. ಆದಾಗ್ಯೂ ಮತದಾರರು ನನ್ನನ್ನು ಗೆಲ್ಲಿಸುವಲ್ಲಿ ವಿಫಲರಾಗಿದ್ದಾರೆ. ಸೋಲಿನಿಂದ ನಾನು ವಿಚಲಿತನಾಗಿಲ್ಲ. ನಮ್ಮ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಎದೆಗುಂದಬಾರದು. ನಾನು ನಿಮ್ಮೊಂದಿಗೆ ಇದ್ದೇನೆ ಎಂದು ಕಾರ್ಯಕರ್ತರಿಗೆ ಧೈರ್ಯ ಹೇಳಿದರು.  
ಬಾಬು ನಿಧನವೂ ಸೋಲಿಗೆ ಕಾರಣ : 
ಜೆಡಿಎಸ್ ಭದ್ರಕೋಟೆಯಾಗಿದ್ದ ಮೇಲುಕೋಟೆ ಕ್ಷೇತ್ರದಲ್ಲಿ ನನ್ನ ಸೋಲಿಗೆ ಪುರಸಭೆ ಸದಸ್ಯ ಬಿ.ವೈ.ಬಾಬು ಅವರ ಅಕಾಲಿಕ ನಿಧನವೂ ಕಾರಣವಾಯಿತು ಎಂದ ಪುಟ್ಟರಾಜು, ಮೇ,7 ರಂದು ಭಾನುವಾರ ಸಂಜೆ 4 ಗಂಟೆಗೆ ಪಾಂಡವಪುರದಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ರ್ಯಾಲಿ ನಿಗದಿಯಾಗಿತ್ತು. ದುರದೃಷ್ಟವಶಾತ್ ಅಂದು ಬೆಳಗ್ಗೆ 8 ಗಂಟೆಗೆ ಅಪಘಾತದಲ್ಲಿ ಪುರಸಭೆ ಸದಸ್ಯ ಬಾಬು ನಿಧನರಾದರು. ನಮ್ಮ ಪಕ್ಷದ ಮುಖಂಡರ ಮನೆಯಲ್ಲಿ ಶೋಕ ಇದ್ದಿದ್ದರಿಂದ ನಾನು ದೇವೇಗೌಡರ ರ್ಯಾಲಿಯನ್ನು ಅನಿವಾರ್ಯವಾಗಿ ರದ್ದು ಮಾಡಿದ್ದೆ. ದೇವೇಗೌಡರು ಕ್ಷೇತ್ರಕ್ಕೆ ಬಂದಿದ್ದರೆ ನನ್ನ ಮತಗಳಿಗೆ ಇನ್ನಷ್ಟು ವೃದ್ಧಿಯಾಗುತ್ತಿತ್ತು ಎಂದು ಪುಟ್ಟರಾಜು ತಮ್ಮ ಸೋಲಿನ ಕಾರಣಗಳನ್ನು ವಿವರಿಸಿದರು. 

ಕಾರ್ಯಕರ್ತರ ತಂಟೆಗೆ ಬಂದರೆ ಸುಮ್ಮನಿರಲ್ಲ: 
ಚುನಾವಣೆ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಹಲವಾರು ಕಡೆ ರೈತಸಂಘದ ಕಾರ್ಯಕರ್ತರು ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಕೆನ್ನಾಳು ಗ್ರಾಮದ ನಮ್ಮ ಪಕ್ಷದ ಮುಖಂಡರಾದ ಲಕ್ಷ್ಮೀಶ ಅವರ ಕಾಲು ಮುರಿಯಲಾಗಿದೆ. ಈ ಬಗ್ಗೆ ದೂರು ದಾಖಲಾಗಿದೆ. ಕ್ಷೇತ್ರದಾದ್ಯಂತ ಹಲ್ಲೆಗಳು, ದೌರ್ಜನ್ಯಗಳು ನಡೆದಿವೆ. ನಾವು ಇದುವರೆಗೂ ಕ್ಷೇತ್ರದಲ್ಲಿ ಶಾಂತಿ ಕಾಪಾಡಿಕಂಡು ಬಂದಿದ್ದೇವೆ. ನೂತನ ಶಾಸಕರೂ ಸಹ ಶಾಂತಿ ಕಾಪಾಡಬೇಕು. ನಮ್ಮ ಕಾರ್ಯಕರ್ತರ ತಂಟೆಗೆ ಬಂದರೆ ನಾವು ಸುಮ್ಮನಿರಲ್ಲ ಎಂದು ಎಚ್ಚರಿಕೆ ನೀಡಿದರು.  
ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್ ಮಾತನಾಡಿ, ಮೇಲುಕೋಟೆ ಕ್ಷೇತ್ರದ ಅಭಿವೃದ್ಧಿಯಲ್ಲಿ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಅವರ ಪಾತ್ರ ಬಹಳ ದೊಡ್ಡದು. ಆದರೂ ಜನ ಅವರನ್ನು ಸೋಲಿಸುವ ಮೂಲಕ ಕ್ಷೇತ್ರವನ್ನು ಮತ್ತಷ್ಟು ಹಿಂದಕ್ಕೆ ಕೊಂಡೋಯ್ದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.  
ಬಿ.ವೈ.ಬಾಬು ಪುರಸಭೆ ಸದಸ್ಯರಾಗಿ ತಮ್ಮ ವಾರ್ಡಿನ ಜನರೊಂದಿಗೆ ಅತ್ಯಂತ ಸ್ನೇಹ ಮತ್ತು ವಿಶ್ವಾಸದಿಂದ ಇದ್ದರು. ಜತೆಗೆ ನಮ್ಮ ಪಕ್ಷದ ಉತ್ತಮ ಸಂಘಟಕರು ಇವರ ನಿಧನ ತುಂಬಲಾರದ ನಷ್ಟ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಇತ್ತೀಚೆಗೆ ಮೃತಪಟ್ಟ ಪುರಸಭೆ ಸದಸ್ಯ ಬಿ.ವೈ.ಬಾಬು ಅವರ ಭಾವಚಿತ್ರಕ್ಕೆ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಹಾಗೂ ಮುಖಂಡರು ಪುಷ್ಪಾರ್ಚನೆ ಸಲ್ಲಿಸಿದರು.
ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ಎ.ಮಲ್ಲೇಶ್, ಪುರಸಭೆ ಮಾಜಿ ಅಧ್ಯಕ್ಷ ಲಿಂಗರಾಜು(ಗುಣ), ವೀರಶೈವ ಸಮುದಾಯದ ಮುಖಂಡ ದ್ಯಾವಪ್ಪ, ಗುರುಸ್ವಾಮಿ ಸೇರಿದಂತೆ ಹಲವರು ಇದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು