ಪಾಂಡವಪುರ ಟಿಎಪಿಸಿಎಎಂಎಸ್‍ಗೆ ಕರ್ನಾಟಕ ಸಹಕಾರ ಮಹಾ ಮಂಡಳದಿಂದ 5 ಲಕ್ಷ ರೂ ಅನುದಾನ

ಪಾಂಡವಪುರ : ಪಟ್ಟಣದ ಟಿಎಪಿಸಿಎಂಎಸ್ ಸೊಸೈಟಿ ಅಭಿವೃದ್ಧಿಗೆ  ಕರ್ನಾಟಕ ಸಹಕಾರ ಮಹಾ ಮಂಡಳದಿಂದ ಕೊಡಲಾದ 5 ಲಕ್ಷ ರೂ, ಅನುದಾನವನ್ನು ಮಹಾ ಮಂಡಳದ ನಿರ್ದೇಶಕ ಶೀಳನೆರೆ ಮೋಹನ್ ಇಂದು ವಿತರಿಸಿದರು.
ಪಟ್ಟಣದ ಟಿಎಪಿಸಿಎಂಎಸ್ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಶೀಳನೆರೆ ಮೋಹನ್ 5 ಲಕ್ಷ ರೂ. ಅನುದಾನದ ಚೆಕ್ ಅನ್ನು ಸೊಸೈಟಿ ಅಧ್ಯಕ್ಷ ಡಿ.ಶ್ರೀನಿವಾಸ್ ಅವರಿಗೆ ಹಸ್ತಾಂತರಿಸಿದರು.
ಬಳಿಕ ಅವರು ಮಾತನಾಡಿ, ಯಾವುದೇ ಸಹಕಾರ ಸಂಘಗಳ ಅಭಿವೃದ್ಧಿಗೆ ಆಡಳಿತ ಮಂಡಳಿಯ ಪ್ರಾಮಾಣಿಕತೆ, ಬದ್ಧತೆ ಮತ್ತು ನೌಕರರ ಸಹಕಾರ ಅಗತ್ಯವಾಗಿದೆ. ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಅವರ ಸಹಕಾರದಿಂದ ನಾನು ಸಹಕಾರ ಮಹಾಮಂಡಳದ ನಿರ್ದೇಶಕನಾಗಲು ಸಾಧ್ಯವಾಯಿತು. ನನಗೆ ಬರುವ ಅನುದಾನವನ್ನು ನಾನು ವಿವಿಧ ಸಹಕಾರ ಸಂಘಗಳ ಅಭಿವೃದ್ಧಿಗೆ ಮೀಸಲಿಡುತ್ತೇನೆ ಎಂದರು.

ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್ ಮಾತನಾಡಿ, ಈ ಮೊದಲು ಮಹಾ ಮಂಡಳ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಲು ನನಗೆ ಅವಕಾಶ ನೀಡಲಾಗಿತ್ತು. ನಂತರ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಈ ಅವಕಾಶ ಮೋಹನ್ ಅವರಿಗೆ ಸಿಕ್ಕಿತು. ನಾನು ಯಾವುದೇ ಅಡೆತಡೆ ಮಾಡದೆ ಮೋಹನ್ ಅವರಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟೆ. ಇದರಿಂದ ಅವರು ತಮ್ಮ ಅನುದಾನವನ್ನು ನಮ್ಮ ಸಂಸ್ಥೆಗೆ ನೀಡಿದ್ದಾರೆ ಎಂದರು.
ಬಳಿಕ ಸಂಸ್ಥೆ ವತಿಯಿಂದ ಶೀಳನೆರೆ ಮೋಹನ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಟಿಎಪಿಸಿಎಂಎಸ್ ನಿರ್ದೇಶಕರಾದ ರಾಮಕೃಷ್ಣ, ಕಣಿವೆ ಯೋಗೇಶ್, ಚಿನಕುರಳಿ ವಿಎಸ್‍ಎಸ್‍ಎನ್‍ಬಿ ಅಧ್ಯಕ್ಷ ಮೊಗಣ್ಣಗೌಡ, ತಾಪಂ ಮಾಜಿ ಸದಸ್ಯರಾದ ಗೋಪಾಲಗೌಡ, ಗಂಗಾಧರ್, ಮುಖಂಡರಾದ ಶಿಂಡಭೋಗನಹಳ್ಳಿ ನಾಗಣ್ಣ, ಅಂಕೇಗೌಡ, ಪುಟ್ಟ ಚಲುವೇಗೌಡ, ರಾಧಾಕೃಷ್ಣ, ಸಿದ್ದಲಿಂಗೇಗೌಡ, ಕಾಳಂಕೇಗೌಡ, ರಮೇಶ್ ಟಿಎಪಿಸಿಎಂಎಸ್ ಕಾರ್ಯದರ್ಶಿ ನವೀನ್ ಹಾಗೂ ಸಿಬ್ಬಂದಿಗಳು ಇದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು