ಪಾಂಡವಪುರ : ಪುರಸಭೆ 9ನೇ ವಾರ್ಡ್ ಸದಸ್ಯ ಬಿ.ವೈ.ಬಾಬು(50) ಭಾನುವಾರ ಬೆಳಗ್ಗೆ ರಸ್ತೆ ಅಪಘಾತದಲ್ಲಿ ನಿಧನರಾದರು. ಮನ್‍ಮುಲ್ ಮಾಜಿ ಅಧ್ಯಕ್ಷ ಹಾಗೂ ಜೆಡಿಎಸ್ ಹಿರಿಯ ಮುಖಂಡ ಕೆ.ವೈರಮುಡಿಗೌಡ ಅವರ ಮಗನಾದ ಬಾಬು ಭಾನುವಾರ ಬೆಳಗ್ಗೆ ಸುಮಾರು 8 ಗಂಟೆಗೆ ಚಾಮರಾನಗರ-ಬೀದgರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾಂಡವಪುರ ಪಟ್ಟಣದ ಸಮೀಪ ರಿಲೆಯನ್ಸ್ ಪೆಟ್ರೋಲ್ ಬಂಕ್ ಬಳಿ ತಮ್ಮ ಬೈಕ್‍ನಲ್ಲಿ ಬರುತ್ತಿದ್ದ ವೇಳೆ ಹಂಪ್ಸ್ ಬಳಿ ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದರು. ಈ ವೇಳೆ ಅವರ ತಲೆಗೆ ತೀವ್ರ ಪೆಟ್ಟಾಗಿ ಭಾರಿ ರಕ್ತಸ್ರಾವವಾಯಿತು. ಕೂಡಲೇ ಅವರನ್ನು ಪಾಂಡವಪುರ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯುತ್ತಿದ್ದ ವೇಳೆ ಮಾರ್ಗ ಮಧ್ಯೆ ನಿಧನರಾದರು ಎನ್ನಲಾಗಿದೆ. ಮೃತರಿಗೆ ತಂದೆ, ತಾಯಿ, ಇಬ್ಬರು ಸಹೋದರರು, ಒಬ್ಬ ಸಹೋದರಿ, ಪತ್ನಿ ಮತ್ತು ಮೂವರು ಮಕ್ಕಳು ಇದ್ದಾರೆ. ಮೃತರ ಅಂತ್ಯಕ್ರಿಯೆ ತಾಲೂಕಿನ ದೇವೇಗೌಡನಕೊಪ್ಪಲು ಸಮೀಪದ ಜಮೀನಿನಲ್ಲಿ ನಡೆಯಿತು. ಶಾಸಕ ಸಿ.ಎಸ್.ಪುಟ್ಟರಾಜು, ಮುಖಂಡರಾದ ಸುನೀತಾ ಪುಟ್ಟಣ್ಣಯ್ಯ, ಎ.ಎಲ್.ಕೆಂಪೂಗೌಡ, ಎಚ್.ಮಂಜುನಾಥ್, ಎಚ್.ತ್ಯಾಗರಾಜು, ಸಿ.ಅಶೋಕ್, ಡಾ.ಇಂದ್ರೇಶ್ ಸೇರಿದಂತೆ ತಾಲೂಕಿನ ಪ್ರಮುಖ ಮುಖಂಡರು ಮೃತರ ಅಂತಿಮ ದರ್ಶನ ಪಡೆದರು.
0 ಕಾಮೆಂಟ್‌ಗಳು