ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ

ಪಾಂಡವಪುರ: ಜೆಡಿಎಸ್ ಅಧಿಕಾರಕ್ಕೆ ಬಂದರೆ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸಾಲವನ್ನು ಸಂಪೂರ್ಣ ಮನ್ನಾ ಮಾಡಲಾಗುವುದು ಹಾಗಾಗಿ ಕ್ಷೇತ್ರದ ಮಹಾಜನತೆ ಜೆಡಿಎಸ್‍ಗೆ ಮತ ನೀಡಿ ಆಶೀರ್ವಾದ ಮಾಡಬೇಕು ಎಂದು ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಮನವಿ ಮಾಡಿದರು.
ತಾಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ಬಿರುಸಿನ ಪ್ರಚಾರ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರದಲ್ಲಿದ್ದಾಗ ರೈತರ 25 ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ. ಇದೀಗ ಪಂಚರತ್ನ ಕಾರ್ಯಕ್ರಮದಿಂದ ಎಲ್ಲರಿಗೂ ಸಾಕಷ್ಟು ಅನುಕೂಲವಾಗಲಿದೆ ಎಂದರು.
ಚಿಕ್ಕಾಡೆ ಗ್ರಾಮವನ್ನು 5 ಕೋಟಿ ವೆಚ್ಚದಲ್ಲಿ ಸರ್ವತೋಮುಖವಾಗಿ ಅಭಿವೃದ್ಧಿ ಮಾಡಿದ್ದೇನೆ. ನಾನು ಚುನಾವಣೆಯ ಸಂದರ್ಭದಲ್ಲಿ ಬಂದು ಮತ ಕೇಳುತ್ತಿಲ್ಲ. ಪ್ರತಿ ಹಂತದಲ್ಲೂ ಗ್ರಾಮದ ಅಭಿವೃದ್ದಿಗಾಗಿ ಶ್ರಮಿಸಿದ್ದೇವೆ. ಕೋವಿಡ್ ಸಂದರ್ಭದಲ್ಲಿ ಕ್ಷೇತ್ರದಲ್ಲಿಯೇ ಇದ್ದು ಜನರ ಕಷ್ಟಸುಖಗಳಿಗೆ ಸ್ಪಂದನೆ ನೀಡಿದ್ದೇನೆ. ಹಾಗಾಗಿ ಚಿಕ್ಕಾಡೆ ಗ್ರಾಮದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮತಕೊಟ್ಟು ನಿಮ್ಮ ಮನೆಮಗ ಪುಟ್ಟರಾಜು ಅವರನ್ನು ಗೆಲ್ಲಿಸಿಕೊಡಬೇಕೆಂದು ಮನವಿ ಮಾಡಿದರು.
ಚುನಾವಣೆ ಪ್ರಚಾರಕ್ಕೆ ಆಗಮಿಸಿದ ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಅವರಿಗೆ ಗ್ರಾಮದಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು. ಬೃಹತ್ ಹಣ್ಣಿನ ಹಾರಹಾಕಿ ಜೆಸಿಬಿಗಳ ಮೂಲಕ ಹೂವಿನ ಮಳೆಸುರಿಸಿ ಪಟಾಕಿ ಸಿಡಿಸಿ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಸಂಭ್ರಮಿಸಿದರು. ಹೆಣ್ಣು ಮಕ್ಕಳು ಕಳಸ ಹೊತ್ತು, ಗ್ರಾಮಕ್ಕೆ ಆಗಮಿಸಿದ ಪುಟ್ಟರಾಜು ಅವರಿಗೆ ಆರತಿ ಬೆಳಗಿ ಶುಭ ಹಾರೈಸಿದರು.
ಸಂದರ್ಭದಲ್ಲಿ ಯಜಮಾನರಾದ ಪ್ರಕಾಶ್, ಸಿ.ವಿ.ಸ್ವಾಮೀಗೌಡ, ರಾಮಕೃಷ್ಣೇಗೌಡ, ಗಿರೀಗೌಡ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಡಿ.ರಾಜಪ್ಪ, ಸಾವಿಲ್ ಚೇತನ್‍ತಿಮ್ಮೇಗೌಡ, ಬಂಕ್ ಅನಿಲ್‍ತಿಮ್ಮೇಗೌಡ, ವಿನಾಯಕ ಹಾರ್ಡ್‍ವೇರ್ ಮಾಲೀಕ ಪ್ರಸನ್ನಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರಶೇಖರ್, ಲಾರಿ ಗಿರೀಶ್, ನಾಗೇಶ್, ಶಾಮಿಯಾನ ಮಂಜು ಗೌತಮ್ ಸೇರಿದಂತೆ ಗ್ರಾಮದ ಯಜಮಾನರು, ಮುಖಂಡರು, ಕಾರ್ಯಕರ್ತರು ಹಾಜರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು