ಸೋಲಿನಿಂದ ಧೃತಿಗೆಟ್ಟಿಲ್ಲ ; ತಳಮಟ್ಟದಿಂದ ಪಕ್ಷ ಸಂಘಟನೆ

ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್‌ ಮಜೀದ್‌ ವಿಶ್ವಾಸ

ಮೈಸೂರು : ಸತತ ಮೂರು ಚುನಾವಣೆಯಲ್ಲೂ ನರಸಿಂಹರಾಜ ಕ್ಷೇತ್ರದಿಂದ ನಾನು ಸೋಲು ಕಂಡಿದ್ದು, ಇದರಿಂದ ನಾನು ಧೃತಿಗೆಟ್ಟಿಲ್ಲ ತಳ ಮಟ್ಟದಿಂದ ಪಕ್ಷವನ್ನು ಸಂಘಟಿಸಿ ಗೆಲುವಿನ ದಡ ಮುಟ್ಟಿಸುತ್ತೇನೆ ಎಂದು  ಎನ್‌ಆರ್‌ ಕ್ಷೇತ್ರದ ಎಸ್‌ಡಿಪಿಐ ಅಭ್ಯರ್ಥಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್‌ ಮಜೀದ್‌ ಹೇಳಿದರು.
ನಗರದ ರಿಲೆಯನ್ಸ್‌ ಕಲ್ಯಾಣ ಮಂದಿರದಲ್ಲಿ ಬುಧವಾರ ಸಂಜೆ ಏರ್ಪಡಿಸಿದ್ದ ಸೋಲಿನ ಆತ್ಮಾವಲೋಕನ ಸಭೆಯಲ್ಲಿ ಅವರು ಮಾತನಾಡಿದರು.
ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಕ್ಷೇತ್ರದ 41 ಸಾವಿರ ಮತದಾರರು ನನ್ನನ್ನು ಬೆಂಬಲಿಸಿದ್ದಾರೆ. ಅವರೂ ಸೇರಿದಂತೆ ಉಳಿದ ಮತದಾರರ ಕುಂದು ಕೊರತೆಗಳನ್ನು ನಾನು ಆಲಿಸುತ್ತೇನೆ. ಜನರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಎನ್‌ಆರ್‌ ಕ್ಷೇತ್ರದಲ್ಲಿ ಸಮರ್ಥ ವಿರೋಧ ಪಕ್ಷದಂತೆ ನಾನು ಕೆಲಸ ಮಾಡುತ್ತೇನೆ. ಕ್ಷೇತ್ರದ ಮತದಾರರ ಯಾವುದೇ ಸಮಸ್ಯೆಗಳು ಕಂಡು ಬಂದರೂ ಅದರ ಪರಿಹಾರಕ್ಕಾಗಿ ಶ್ರಮಿಸುತ್ತೇನೆ ಎಂದರು.
ಎಸ್‌ಡಿಪಿಐ ಭಯ ಮುಕ್ತ ಮತ್ತು ಹಸಿವು ಮುಕ್ತ ಸಮಾಜ ನಿರ್ಮಾಣದ ಕನಸು ಕಂಡಿದೆ. ಈ ಘೋಷವಾಕ್ಯದಡಿ ನಾನು ಸ್ಪರ್ಧೆ ಮಾಡಿದ್ದೆ. ನನ್ನ ಸ್ವಯಂ ಅಭಿವೃದ್ಧಿಗಾಗಿ ಚುನಾವಣೆಗೆ ಸ್ಪರ್ಧಿಸಿಲ್ಲ ಎಂದು ಹೇಳಿದ ಮಜೀದ್‌ ಅವರು, ಗುಂಡೂರಾವ್‌, ಬಂಗಾರಪ್ಪ, ಉಡಿಯೂರಪ್ಪ ಸೇರಿದಂತೆ ರಾಜ್ಯ ಮತ್ತು ದೇಶದ ಗಲವು ಘಟಾನುಘಟಿ ನಾಯಕರು ಸ್ವಂತ ಪಕ್ಷವನ್ನು ಸ್ಥಾಪಿಸಿ ಕನಿಷ್ಠ 5 ವರ್ಷಗಳ ಕಾಲ ಮುನ್ನಡೆಸಲು ಆಗಿಲ್ಲ. ಇಂತಹ ಸಂದರ್ಭದಲ್ಲಿ ಎಸ್‌ಡಿಪಿಐ ದೇಶದ 22 ಎಆಜ್ಯಗಳಲ್ಲಿ ಸತತವಾಗಿ 14 ವರ್ಷದಿಂದ ಜನಪರವಾಗಿ ಕೆಲಸ ಮಾಡುತ್ತಿದೆ ಇದರ ಕೀರ್ತಿ ನಮ್ಮ ಕಾರ್ಯಕರ್ತರಿಗೆ ಸಲ್ಲಬೇಕು ಎಂದರು.
ಮಂಡ್ಯದ ಇದ್ರಿಸ್‌ ಕೊಲೆ ಆರೋಪಿ ಪುನೀತ್‌ ಕೆರೆಹಳ್ಳಿಗೆ 45 ದಿನದಲ್ಲಿ ಜಾಮೀನು ಸಿಕ್ಕಿದೆ. ಅದೇ ಇನ್ನೂ ಸಾಬೀತಾಗದ ಹುಬ್ಬಳ್ಳಿ ಕಲ್ಲು ತೂರಾಟ ಪ್ರಕರಣದ  50 ಅಮಾಯಕ ಮುಸ್ಲಿಂ ಸಮುದಾಯದ ಯುವಕರಿಗೆ 13 ತಿಂಗಳಾದರೂ ಜಾಮೀನು ಸಿಕ್ಕಿಲ್ಲ. ಇಂತಹ ವ್ಯವಸ್ಥೆಯಲ್ಲಿ ನಾವು ಬದುಕುತ್ತಿದ್ದೇವೆ. ಇಂತಹ ಅಮಾಯಕರ ಪರ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದರು.

ರಾಜ್ಯದಲ್ಲಿ 50 ಲಕ್ಷ ಮುಸ್ಲಿಂ ಮತದಾರರು  224 ಕ್ಷೇತ್ರಗಳಲ್ಲೂ ಈ ಬಾರಿ ಒಗ್ಗಟ್ಟಾಗಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿದ್ದಾರೆ. ಆದರೂ ಮುಸ್ಲಿಂ ಶಾಸಕರ ಸಂಖ್ಯೆ ಕೇವಲ 9 ಮಂತ್ರಿಗಳ ಸಂಖ್ಯೆ ಕೇವಲ 2. ಯಾವುದೇ ಪ್ರಭಾವಿ ಖಾತೆಗಳನ್ನು ನೀಡಲಾಗಿಲ್ಲ. ಅಲ್ಲದೇ ಮುಸಲ್ಮಾನರಿಗಿಂತಲೂ ಕಡಿಮೆ ಪ್ರಮಾನದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿದ ಲಿಂಗಾಯತರು ಮತ್ತು ಒಕ್ಕಲಿಗರಿಗೆ ಸಂಪುಟದಲ್ಲಿ ಸಿಂಹಪಾಲು ಸಿಕ್ಕಿದೆ. ಈ ತಾರತಮ್ಯವನ್ನು ಯಾರೂ ಕೇಳುತ್ತಿಲ್ಲ. ಅಥವಾ ಮುಸಲ್ಮಾನರಿಂದ ಮತ ಪಡೆದ ಕಾಂಗ್ರೆಸ್‌ ಪಕ್ಷದ ನಾಯಕರೂ ನಮಗೆ ಸಾಮಾಜಿಕ ನ್ಯಾಯ ನೀಡುತ್ತಿಲ್ಲ. ಇದಕ್ಕೆಲ್ಲಾ ಎಸ್‌ಡಿಪಿಐ ಒಂದೇ ಪರಿಹಾರ ಎಂದರು.

ಸಭೆಯಲ್ಲಿ ಪಕ್ಷದ ಹಿರಿಯ ಮುಖಂಡರು ಮುಂದಿನ ಚುನಾವಣೆಯ ಸಿದ್ದತೆ ಹಾಗೂ ಪಕ್ಷದ ಬಲವರ್ಧನೆ ಕುರಿತು ಸಲಹೆ ನೀಡಿದರು.
ರಾಜ್ಯ ಉಪಾಧ್ಯಕ್ಷ ಅಬ್ದುಲ್‌ ಲತೀಫ್‌, ಜಿಲ್ಲಾ ಅಧ್ಯಕ್ಷ ರಫತ್‌ ಖಾನ್‌ ಮತ್ತಿತರರು ಇದ್ದರು.
 
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು