ದೇಶದಲ್ಲಿ ತಂಬಾಕು ಸೇವಿಸುವವರ ಸಂಖ್ಯೆ 30 ಕೋಟಿ


 ಡಿಹೆಚ್‌ಓ ಡಾ.ಪ್ರಸಾದ್‌ ಆತಂಕ, ತಂಬಾಕು ಮುಕ್ತ ದೇಶಕ್ಕಾಗಿ ಮನವಿ

·    ಭಾರತ್‌ ಇನ್ಸ್‌ಟಿಟ್ಯೂಟ್‌ ಆಫ್‌ ಆಂಕೋಲಜಿ ಆಸ್ಪತ್ರೆಯಿಂದ ತಂಬಾಕು ಮುಕ್ತ ದಿನ ಆಚರಣೆ

·      ಮೈಸೂರು ಅರಮನೆ ಮುಂಭಾಗ ವಿದ್ಯಾರ್ಥಿಗಳು, ವೈದ್ಯರಿಂದ ಜಾಗೃತಿ ಜಾಥ

ಮೈಸೂರು : ದೇಶದಲ್ಲಿ 30 ಕೋಟಿ ಜನರು ಬೀಡಿ, ಸಿಗರೇಟು, ಗುಟ್ಕಾ ಸೇರಿದಂತೆ ಮತ್ತಿತರ ತಂಬಾಕು ಪದಾರ್ಥಗಳ ದಾಸರಾಗಿದ್ದು, ದಿನನಿತ್ಯ ಸಾವಿರಾರು ಜನರು ಕ್ಯಾನ್ಸರ್‌ನಿಂದ ಸಾವನ್ನಪ್ಪುತಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪ್ರಸಾದ್‌ ಆತಂಕ ವ್ಯಕ್ತಪಡಿಸಿದರು.

ʻವಿಶ್ವ ತಂಬಾಕು ಮುಕ್ತ ದಿನʼ ಆಚರಣೆ ಪ್ರಯುಕ್ತ ನಗರದ ಅರಮನೆ ಬಳಿಯ ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂಭಾಗ ಭಾರತ್‌ ಇನ್ಸ್‌ಟಿಟ್ಯೂಟ್‌ ಆಫ್‌ ಆಂಕೋಲಜಿ ಆಸ್ಪತ್ರೆಯವರು ಏರ್ಪಡಿಸಿದ್ದ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೆಲವು ಅಂಕಿ ಅಂಶಗಳ ಪ್ರಕಾರ ಕಳೆದ 5 ವರ್ಷಗಳಿಂದ ದೇಶದಲ್ಲಿ ತಂಬಾಕು ಸೇವನೆ ಪ್ರಮಾಣ ಒಂದಷ್ಟು ಕಡಿಮೆ ಆಗುತ್ತಿರುವುದು ಸಂತಸದ ವಿಷಯವಾದರೂ, ಈ ಚಟಕ್ಕೆ ಯುವ ಸಮುದಾಯ ಹೆಚ್ಚು ಬಲಿಯಾಗುತ್ತಿದೆ. ಒಂದು ಮನೆಯಲ್ಲಿ ಒಬ್ಬರು ಸಿಗರೇಟ್‌ ಅಥವಾ ಮತ್ತಿತರ ತಂಬಾಕು ಸೇವನೆ ಮಾಡಿದರೆ, ಮನೆಯವರಿಗೆಲ್ಲರಿಗೂ ಕ್ಯಾನ್ಸರ್‌ ರೋಗ ಬಾಧಿಸುವ ಅಪಾಯವಿದೆ. ಇದರಿಂದ ಈ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸುವುದು ಅಗತ್ಯವಾಗಿದ್ದು, ಕ್ಯಾನ್ಸರ್‌ ರೋಗಕ್ಕೆ ಚಿಕಿತ್ಸೆ ನೀಡುತ್ತಿರುವ ಭಾರತ್‌ ಕ್ಯಾನ್ಸರ್‌ ಆಸ್ಪತ್ರೆಯವರೇ ತಮಗೆ ರೋಗಿಗಳು ಬಾರದಿದ್ದರೂ ಪರವಾಗಿಲ್ಲ ಕ್ಯಾನ್ಸರ್‌ ಮುಕ್ತ ಭಾರತಕ್ಕಾಗಿ ಹೋರಾಟಕ್ಕೆ ಇಳಿದಿರುವುದು ಈ ರೋಗದ ತೀಕ್ಷಣತೆಯನ್ನು ತೋರುತ್ತದೆ. ಈ ನಿಟ್ಟಿನಲ್ಲಿ ತಂಬಾಕು ವ್ಯಸನಿಗಳಿಗೆ ಇದರಿಂದಾಗುವ ಅನಾಹುತಗಳು, ಅಪಾಯಗಳ ಬಗ್ಗೆ ಪ್ರತ್ಯಕ್ಷ ದರ್ಶನ ಮಾಡಿಸಿ ಭಯ ಮೂಡಿದರೆ ಮಾತ್ರ ಈ ಮಾರಕ ಚಟ ತಡೆಗಟ್ಟಲು ಸಾಧ್ಯ,  ಆಪರೇಷನ್‌, ರೇಡಿಯೇಷನ್‌ ಚಿಕಿತ್ಸೆಗೂ ಮುನ್ನ ವ್ಯಸನಿಗಳು ಎಚ್ಚೆತ್ತುಕೊಳ್ಳಬೇಕು ಎಂದು ಸಲಹೆ ನೀಡಿದರು.
ತ೦ಬಾಕಿನಲ್ಲಿ ಸುಮಾರು 7000 ರಾಸಾಯನಿಕ ಅಂಶ ಗಳಿದ್ದು, ಅದರಲ್ಲಿನ ಶೇ, 70 ರಷ್ಟು ಅಂಶಗಳು ಕ್ಯಾನ್ಸರ್ಕಾರಕಗಳಾಗಿವೆ. ತಂಬಾಕು ಸೇವನೆಯಿಂದ ಬಾಯಿ, ಗಂಟಲು,
ಅನ್ನನಾಳ, ಶ್ವಾಸಕೋಶದ ಕ್ಯಾನ್ಸರ್ಗಳಿಗೆ ನೇರ ಕಾರಕವಾಗಿದ್ದು, ಅದಲ್ಲದೆ ಜಠರ, ಮೂತ್ರಕೋಶ ಮುಂತಾದ ಕ್ಯಾನ್ಸರ್‌ಗಳು ಸಂಭವಿಸುತ್ತದೆ. ಜನತೆ ತಂಬಾಕು ಚಟದಿಂದ
ದೂರ ಇರಬೇಕು ಎಂದು ಅವರು ಮನವಿ ಮಾಡಿದರು.

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ವೈ.ಎಸ್ಮಾಧವಿ, ಆಸ್ಪತ್ರೆ ನಿರ್ದೇಶಕಿ ಅ೦ಜಲಿ ಅಜಯ್ಕುಮಾರ್, ಡಾ.ವಿನಯ್ಕುಮಾರ್ ಮುತ್ತಗಿ, ಡಾ. ರಕ್ಷಿತ್ ಶೃಂಗೇರಿ,
ಡಾ. ಅಭಿಲಾಶ್, ನಿರ್ಮಲಾ ಕೆ. ಮೂರ್ತಿ, ಹರ್ಷ, ಅಂಜಲಿ ಮುಂತಾದವರು ಇದ್ದರು.
ಕೋಟೆ ಆಂಜನೇಯ ಸ್ವಾಮಿ ದೇವಾಲಯದಿಂದ ಹಾರ್ಡಿಂಜ್‌ ವೃತ್ತದ ಮೂಲಕ ಹೊರಟ ಜಾಥಾ ಮತ್ತೆ ಅರಮನೆ ಮುಂಭಾಗ ವಾಪಸ್‌ ಸೇರಿತು.

ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವೇದಿಕೆಯಲ್ಲಿ ಕ್ಯಾನ್ಸರ್‌ ರೋಗ ಕುರಿತ ನಾಟಕ ಪ್ರದರ್ಶನ ನಡೆಯಿತು. ವಿವಿಧ ಸಾಕ್ಷ್ಯಚಿತ್ರಗಳ ಪೈಕಿ ಬಹುಮಾನಿತ ಸಾಕ್ಷ್ಯಚಿತ್ರ ನಿರ್ಮಾಣ ತಂಡಕ್ಕೆ ಬಹುಮಾನ ಮತ್ತು ಘೋಷವಾಕ್ಯ ರಚಿಸಿದ ಇಬ್ಬರು ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು.



 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು