ಬಿ.ರೇವಣ್ಣ ಅಭಿಮಾನಿಗಳಿಂದ ಕೃಷಿ ಸಚಿವ ಚಲುವರಾಯಸ್ವಾಮಿ ಜನ್ಮ ದಿನ ಆಚರಣೆ

ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ : ಕೇಕ್‌ ಕತ್ತರಿಸಿ ಸಂಭ್ರಮಿಸಿದ ಅಭಿಮಾನಿಗಳು

ಪಾಂಡವಪುರ : ಇಲ್ಲಿನ ಸರ್ಕಾರಿ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಸಮಾಜ ಸೇವಕ ಬಿ.ರೇವಣ್ಣ ಅಭಿಮಾನಿಗಳು ಹಾಗೂ ಕಾಂಗ್ರೆಸ್‌ ಮುಖಂಡರು ಕೃಷಿ ಸಚಿವ ಎನ್‌.ಚಲುವರಾಯ ಸ್ವಾಮಿ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಗುರುವಾರ ಬೆಳಿಗ್ಗೆ ೧೧ ಗಂಟೆಗೆ ಸರ್ಕಾರಿ ಆಸ್ಪತ್ರೆಗೆ ಆಗಮಿಸಿದ ನೂರಾರು ಕಾಂಗ್ರೆಸ್‌ ಪಕ್ಷ ಹಾಗೂ ಬಿ.ರೇವಣ್ಣ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಹುಟ್ಟು ಹಬ್ಬದಂದು ಒಳ ರೋಗಿಗಳು, ಹೊರ ರೋಗಿಗಳು ಮತ್ತು ಗ್ರೂಡ್‌ ಡಿ ನೌಕರರಿಗೆ ಹಣ್ಣು ಹಂಪಲು ಮತ್ತು ಬ್ರೆಡ್‌ ಬಿಸ್ಕತ್‌ಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಬಿ.ರೇವಣ್ಣ ಅಭಿಮಾನಿಗಳ ಸಂಘದ ಮುಖಂಡ ಬೇಟೆತಿಮ್ಮನಕೊಪ್ಪಲು ಮಂಜು ಮಾತನಾಡಿ, ನಮ್ಮ ನಾಯಕರಾದ ಬಿ.ರೇವಣ್ಣ ಅವರ ಆದೇಶದ ಮೇರೆಗೆ ರೈತರ ಬಗ್ಗೆ ಅಪಾರ ಕಾಳಜಿಯುಳ್ಳ ಕೃಷಿ ಸಚಿವರಾದ ಎನ್‌.ಚಲುವರಾಯಸ್ವಾಮಿ ಅವರ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಕಳೆದ ೮ ವರ್ಷಗಳಿಂದಲೂ ನಾವುಗಳು ನಮ್ಮ ನಾಯಕರಾದ ಚಲುವಣ್ಣ ಅವರ ಹುಟ್ಟುಹಬ್ಬವನ್ನು ಆಚರಿಸುತ್ತಾ ಬಂದಿದ್ದೇವೆ. ಸಕ್ಕರೆಯ ನಾಡು ಮಂಡ್ಯ ಜಿಲ್ಲೆಯ ಜನರು ಚಲುವರಾಯ ಸ್ವಾಮಿ ಅವರಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಬಳನ್ನು ನಿರೀಕ್ಷಿಸುತ್ತಿದ್ದು, ಅವೆಲ್ಲವೂ ಈಡೇರಲಿದೆ ಎಂದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ರೇವಣ್ಣ ಅವರು ಮಂಡ್ಯ ಜಿಲ್ಲೆಯನ್ನು ಕಾಂಗ್ರೆಸ್‌ ಪಕ್ಷದಿಂದ ಪ್ರತಿನಿಧಿಸುವ ಬಗ್ಗೆ ಸಾಮಾಜಿಕ ಜಾಲತಾಣಗಳನ್ನು ಚರ್ಚೆ ನಡೆಯುತ್ತಿರುವ ಬಗ್ಗೆ ಮಾತನಾಡಿದ ಮಂಜು ಅವರು, ಈ ಬಗ್ಗೆ ವರಿಷ್ಠರು ತೀರ್ಮಾನಿಸುತ್ತಾರೆ. ಹಾಗೇನಾದರೂ ಅವಕಾಶ ಸಿಕ್ಕಿದ್ದಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿ ರೇವಣ್ಣ ಅವರನ್ನು ಗೆಲ್ಲಿಸುತ್ತೇವೆ ಎಂದರು.

ಕಾಂಗ್ರೆಸ್‌ ಮುಖಂಡ ಸಿ.ಆರ್‌.ರಮೇಶ್‌ ಮಾತನಾಡಿ, ಕಾಂಗ್ರೆಸ್‌ ಪಕ್ಷ ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದಂತೆ ಐದು ಗ್ಯಾರಂಟಿಗಳನ್ನು ಶೀಘ್ರದಲ್ಲೇ ಈಡೇರಿಸಲಿದೆ. ಇದರ ಬಗ್ಗೆ ಯಾವುದೇ ಅನುಮಾನ ಬೇಡ ಎಂದರು.
ಇದೇ ವೇಳೆ ಅಭಿಮಾನಿಗಳು ಪಟ್ಟಣದ ಐದು ದೀಪದ ವೃತ್ತದಲ್ಲಿ ನಿಲ್ಲಿಸಿದ್ದ ಚಲುವರಾಯಸ್ವಾಮಿ ಅವರ ಬೃಹತ್‌ ಕಟೌಟ್‌ ಎದುರು ಬೃಹತ್‌ ಕೇಕ್‌ ಕತ್ತರಿಸಿ ಸಾರ್ವಜನಿಕರಿಗೆ ವಿತರಿಸಿದರು. ಜತೆಗೆ ಭಾರಿ ಪ್ರಮಾಣ ಪಟಾಕಿ ಸಿಡಿಸಿ ಅಭಿಮಾನ ವ್ಯಕ್ತಪಡಿಸಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಮಹದೇವ್‌,  ಶ್ರೀಕಂಠ, ದೇವೇಗೌಡನ ಕೊಪ್ಪಲು ಬಾಲು, ಕುರುಬರ ಸಂಘದ ಅಧ್ಯಕ್ಷ ಹುಚ್ಚೇಗೌಡ, ರಮೇಶ್‌, ಮೋಹನ್‌, ಬನ್ನಂಗಾಡಿ ರೇವಣ್ಣ ಮುಂತಾದವರು ಇದ್ದರು. 
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು