ಮಂಡಿ ಮೊಹಲ್ಲಾದಲ್ಲಿ ಶಾಸಕ ಕೆ. ಹರೀಶ್ಗೌಡರ ನೂತನ ಕಚೇರಿ ಉದ್ಘಾಟನೆ

 

ಮೈಸೂರು : ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಹರೀಶ್‌ಗೌಡ ಇಂದು ಮಂಡಿ ಮೊಹಲ್ಲಾ 24ನೇ ವಾರ್ಡಿನಲ್ಲಿ ಸಾವಜನಿಕರ ಕುಂದು ಕೊರತೆ ಆಲಿಸಲು ತಮ್ಮ ನೂತನ ಕಚೇರಿಯನ್ನು ಉದ್ಘಾಟಿಸಿದರು.
ಬಳಿಕ ಅವರು ಮಾತನಾಡಿ, ಈ ಭಾಗದ ಸಾರ್ವಜನಿಕರು ತಮ್ಮ ಯಾವುದೇ ರೀತಿಯ ಸಮಸ್ಯೆಗಳು ಮತ್ತು ಕುಂದು ಕೊರತೆಗಳನ್ನು ಕಚೇರಿಯಲ್ಲಿ ದಾಖಲಿಸಬಹುದು.  ಹಿರಿಯ ಕಾಂಗ್ರೆಸ್‌ ಮುಖಂಡ ರವಿ ರಾಜಕೀಯ ಅವರು ಈ ಕಚೇರಿಯ ಉಸ್ತುವಾರಿ ಆಗಿರುತ್ತಾರೆ. ಯಾವುದೇ ರೀತಿಯ ಸಮಸ್ಯೆಗಳನ್ನು ಸಾರ್ವಜನಿಕರು ಇಲ್ಲಿ ನೀಡಿದರೆ ನನಗೆ ತುರ್ತಾಗಿ ರವಿ ಅವರು ತಲುಪಿಸುತ್ತಾರೆ. ಬಳಿಕ ಈ ಬಗ್ಗೆ ಪರಿಹಾರ ನೀಡಲಾಗುವುದು. ತಾವು ತಿಂಗಳಿಗೆ ಎರಡು ಅಥವಾ ಮೂರು ಬಾರಿ ಕಚೇರಿಗೆ ಭೇಟಿ ನೀಡುವ ಮೂಲಕ ಸಾರ್ವಜನಿಕರ ಜತೆ ಸ್ಪಂದಿಸುವುದಾಗಿ ಹೇಳಿದರು.

ಚಾಮರಾಜ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಿದೆ. ಅವುಗಳನ್ನು ಸರ್ಕಾರದ ಗಮನಕ್ಕೆ ತಂದು ಮುಂದುವರಿಸಲಾಗುವುದು. ಮೈಸೂರು ಜಿಲ್ಲೆಗೆ ನಮ್ಮ ಜಿಲ್ಲೆಯವರೇ ಆದ ಮಂತ್ರಿಗಳನ್ನು ಉಸ್ತುವಾರಿಗಳನ್ನಾಗಿ ಮಾಡುವ ನಂಬಿಕೆ ಇದೆ. ಅವರ ಮಾರ್ಗದರ್ಶನದಲ್ಲಿ ನನ್ನ ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಸಿಟಿ ಕೋ ಆಪರೇಟೀವ್‌ ಬ್ಯಾಂಕ್‌ ನಿರ್ದೇಶಕ ರವಿ ರಾಜಕೀಯ ಅವರು ಮಾತನಾಡಿ, ಮಂಡಿ ಮೊಹಲ್ಲಾದ 24ನೇ ವಾರ್ಡಿನ ಸಾರ್ವಜನಿಕರ ಸಮಸ್ಯೆಗಳನ್ನು ತುರ್ತಾಗಿ ಆಲಿಸಿ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ಶಾಸಕ ಕೆ.ಹರೀಶ್‌ಗೌಡ ಅವರ ಕಚೇರಿಯನ್ನು ಇಲ್ಲಿ ತೆರೆಯಲಾಗಿದೆ. ಆಧಾರ್‌ ನೋಂದಣಿ, ಮತದಾರ ಗುರುತಿನ ಚೀಟಿ, ಆದಾಯ, ಜಾತಿ ಪ್ರಮಾಣ ಪತ್ರ, ಇನ್ನಿತರ ದಾಖಲಾತಿಗಳನ್ನು ಉಚಿತವಾಗಿ ಮಾಡಿಕೊಡಲು ಕಚೇರಿಯಲ್ಲಿ ಸಹಾಕಾರ ನೀಡಲಾಗುವುದು. ಅಲ್ಲದೇ ಸಾರ್ವಜನಿಕರ ಯಾವುದೇ ರೀತಿಯ ಸಮಸ್ಯೆಗಳಿಗೆ ಇಲ್ಲಿ ಪರಿಹಾರ ಸಿಗಲಿದೆ. ಜನರು ಶಾಸಕರನ್ನು ಭೇಟಿ ಮಾಡಲು ಅನಗತ್ಯ ತೊಂದರೆ ಅನುಭವಿಸಬಾರದು ಎಂದು ಕಚೇರಿ ತೆರೆಯಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ನೂತನ ಶಾಸಕ ಹರೀಶ್‌ ಗೌಡ ಅವರನ್ನು ರವಿ ರಾಜಕೀಯ ಮತ್ತವರ ಬೆಂಬಲಿಗರು ಭಾರಿ ಗಾತ್ರದ ಹಾರ ಹಾಕಿ ಗೌರವಿಸಿದರು. ಶಾಸಕರ ಆಗಮನದ ವೇಳೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಜತೆಗೆ 500ಕ್ಕೂ ಹೆಚ್ಚು ಜನರಿಗೆ ಬಿರಿಯಾನಿ ವಿತರಣೆ ಮಾಡಲಾಯಿತು.
ಮುಖಂಡರಾದ ಸುಜೀತ್‌ ಕುಮಾರ್‌, ಶೇಖರ್‌, ದಿನೇಶ್‌, ಮಂಜು, ವೆಂಕಟೇಶ್‌, ಬಾಲು, ನಿರಂಜನ್‌, ಹೇಮಾ, ದರ್ಶನ್‌, ಮಧು ಮತ್ತಿತರರು ಇದ್ದರು.
 
 
 
 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು